ಮಧ್ಯಂತರ ಟೆಂಡರ್ ನಲ್ಲಿ ನೂರಾರು ಕೋಟಿ ರೂ. ಅಕ್ರಮ

dkshivakumar1-original-one_one.jpeg
Published on


ವಿಜಯವಾಣಿ ಸುದ್ದಿಜಾಲ ಬೆಳಗಾವಿ
ರಾಜ್ಯ ಸರ್ಕಾರವು ನೀರಾವರಿ, ಲೋಕೋಪಯೋಗಿ ಸೇರಿದಂತೆ‌ ವಿವಿಧ ಇಲಾಖೆಗಳಲ್ಲಿ ಕರೆದಿರುವ ಮಧ್ಯಂತರ ಟೆಂಡರ್ ನಲ್ಲಿ ನೂರಾರು ಕೋಟಿ ರೂ.‌ಅಕ್ರಮ ನಡೆದಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ನಗರದ ಸಾಂಬ್ರಾ ವಿಮಾನನಿಲ್ದಾಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೀರಾವರಿ, ಲೋಕೋಪಯೋಗಿ ಇಲಾಖೆಯಲ್ಲಿ ಮಧ್ಯಂತರ ಟೆಂಡರ್ ಕೊಡುತ್ತಿದ್ದಾರೆ. ಅಷ್ಟೆ ಅಲ್ಲ ಕೆಲಸದ ಸೂಚನೆಯನ್ನು‌ ನೀಡುತ್ತಿದ್ದಾರೆ. ಚುನಾವಣೆಯಲ್ಲಿ ಹಣ ಮಾಡಲು ಇದೊಂದು ತಂತ್ರ. ಮೊದಲೇ ಕಾಮಗಾರಿಯ ಹಣ ಬಿಡುಗಡೆ ಮಾಡುತ್ತಿದ್ದಾರೆ. ಆದರೆ ನಾವು ಪ್ರತಿಯೊಂದ ಇಲಾಖೆಯನ್ನು ಟ್ರ್ಯಾಕ್ ಮಾಡುತ್ತಿದ್ದೇವೆ ಎಂದರು.
ಇಂಧನ ಇಲಾಖೆಯಲ್ಲಿ ಟೆಂಡರ್ ಕರೆಯದೆ ಕೆಲಸ ಕೊಡುತ್ತಿದ್ದಾರೆ. ಬಿಜೆಪಿ ಅವರಿಗೆ ಇನ್ನೊಂದು ಇಪ್ಪತ್ತು ದಿನದಲ್ಲಿ ನೀತಿ ಸಂಹಿತೆ ಬಂದು ಮೇಲೆ ಹಣ ಮಾಡಲು ಆಗುವುದಿಲ್ಲ ಎಂದು ಲೋಕಾಯುಕ್ತ ಸಂಸ್ಥೆಗೆ ಕಾಂಗ್ರೆಸ್, ಜೆಡಿಎಸ್ ನಾಯಕರ ಮೇಲೆ ದಾಳಿ ಮಾಡಿ ಎಂದು ಹೇಳುತ್ತಿದ್ದಾರೆ ಎಂದು ಆರೋಪಿಸಿದರು.
ಸರಕಾರದ ಸಚಿವರ ಬಳಿ ಹಣ ಇಲ್ಲ. ಅಧಿಕಾರಿಗಳ ಬಳಿ ಸಾಕಷ್ಟು ಹಣ ಇಟ್ಟಿದ್ದಾರೆ. ಅದು ನಮ್ಮ ಬಳಿ ಮಾಹಿತಿ ಇದೆ. ಆದರೆ, ಕಳಂಕಿತ ಸರಕಾರವನ್ನು ಜನರೇ ಕಿತ್ತು ಹಾಕಬೇಕೆಂದು ಜನರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇವೆ ಎಂದರು.
ಭ್ರಷ್ಟ ಬಿಜೆಪಿ‌ ಸರಕಾರದ ಧೋರಣೆಯನ್ನು ಜನರ ಮುಂದೆ ಇಡುವ ಉದ್ದೇಶದಿಂದ‌ ಮಾ.9 ರಂದು ರಾಜ್ಯಾದ್ಯಂತ ಎರಡೂ ಗಂಟೆಗಳ ಕಾಲ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net