

ಬೆಳ್ತಂಗಡಿ: ರಾಜ್ಯ ಸರ್ಕಾರ ಬ್ಲಾೃಕ್ ಫಂಗಸ್ ಹಾಗೂ ವೈಟ್ ಫಂಗಸ್ ಅನ್ನು ಪ್ರತಿರೋಧಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಪ್ರಕೃತಿ ಚಿಕಿತ್ಸೆ ಕೇಂದ್ರಕ್ಕೆ ಸೋಮವಾರ ಭೇಟಿ ನೀಡಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಫಂಗಸ್‌ಗಳ ಬಗ್ಗೆ ಸರ್ಕಾರದ ಬಳಿಯೇ ಸ್ಪಷ್ಟ ಮಾಹಿತಿ ಇಲ್ಲ. ಒಬ್ಬೊಬ್ಬ ಸಚಿವರು ಒಂದೊಂದು ರೀತಿ ಮಾತನಾಡುತ್ತಿದ್ದಾರೆ. ಇದು ಜನರಲ್ಲಿ ಇನ್ನಷ್ಟು ಭಯ, ಗೊಂದಲ ಮೂಡಿಸುತ್ತಿದೆ. ರಾಜ್ಯದಲ್ಲಿ ಇದಕ್ಕೆ ಸಮರ್ಪಕ ಚಿಕಿತ್ಸೆ ನೀಡುತ್ತಿಲ್ಲ. ಕೇಂದ್ರದಿಂದ ಔಷಧಗಳನ್ನು ತರಿಸಿಕೊಳ್ಳಬೇಕು. ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡರೇ ಮುಂದೆ ನಿಂತು ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ಚಿಕ್ಕಮಗಳೂರಿನಲ್ಲಿ ದಲಿತನಿಗೆ ಪೊಲೀಸ್ ಠಾಣೆಯಲ್ಲಿ ಮೂತ್ರ ಕುಡಿಸಿದ ಪ್ರಕರಣವನ್ನು ತನಿಖೆಯ ನಾಟಕವಾಡಿ ಮುಗಿಸಲು ಸರ್ಕಾರ ಮುಂದಾಗುತ್ತಿದೆ ಎಂದರು. ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಮಾಜಿ ಶಾಸಕ ವಸಂತ ಬಂಗೇರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಂಜನ್ ಜಿ.ಗೌಡ, ಶೈಲೇಶ್ ಕುಮಾರ್ ಉಪಸ್ಥಿತರಿದ್ದರು.
ಎಂಆರ್‌ಪಿಎಲ್‌ನಲ್ಲಿ ಸ್ಥಳೀಯರಿಗೆ ಉದ್ಯೋಗ: ಎಂಆರ್‌ಪಿಎಲ್‌ನಲ್ಲಿ ಹೊರ ರಾಜ್ಯದವರಿಗೆ ಉದ್ಯೋಗ ನೀಡುವುದನ್ನು ಕೂಡಲೇ ಸ್ಥಗಿತಗೊಳಿಸಬೇಕು ಎಂದು ಡಿ.ಕೆ ಶಿವಕುಮಾರ್ ಒತ್ತಾಯಿಸಿದರು. ಸರೋಜಿನಿ ಮಹಿಷಿ ವರದಿ ಜಾರಿಗೆ ತಂದು ಸ್ಥಳೀಯರಿಗೆ ಉದ್ಯೋಗ ನೀಡಲು ಕ್ರಮ ಕೈಗೊಳ್ಳಬೇಕು. ರಾಜ್ಯದಲ್ಲಿ ಯುವಕರು ಉದ್ಯೋಗವಿಲ್ಲದೆ ಪರದಾಡುತ್ತಿದ್ದಾರೆ. ಹಲವರು ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ಈ ಸಂದರ್ಭ ರಾಜ್ಯದಲ್ಲಿರುವ ಕಂಪನಿಗಳಿಗೆ ಹೊರಗಿನವರ ನೇಮಕಾತಿಗೆ ಅವಕಾಶ ನೀಡಬಾರದು. ಸಂಸದ ನಳಿನ್ ಕುಮಾರ್ ಹಾಗೂ ಸಚಿವ ಸದಾನಂದ ಗೌಡರು ಯುವಕರ ಹಿತರಕ್ಷಣೆಗೆ ಕ್ರಮ ಕೈಗೊಳ್ಳಲಿ ಎಂದು ಒತ್ತಾಯಿಸಿದರು.