

ಮಂಗಳೂರು: ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ಸತೀಶ್ ಕುಂಪಲ ಎರಡನೇ ಅವಧಿಗೆ ಪುನರಾಯ್ಕೆಯಾಗಿದ್ದಾರೆ.
ಬಿಜೆಪಿ ಮಂಗಳೂರಿನ ಜಿಲ್ಲಾ ಕಚೇರಿಯಲ್ಲಿ ಸಂಘಟನಾ ಪರ್ವದ ಜಿಲ್ಲಾ ಸಂಚಾಲಕ ರಾಜೇಶ್ ಕಾವೇರಿ ಅವರು ಬುಧವಾರ ಆಯ್ಕೆಯನ್ನು ಅಧಿಕೃತವಾಗಿ ಘೋಷಣೆ ಮಾಡಿದರು.
ಮುಂದಿನ ಮೂರು ವರ್ಷಕಾಲ ಸತೀಶ್ ಕುಂಪಲ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ. ಹೊಸ ಪದಾಧಿಕಾರಿಗಳ ನೇಮಕಗೊಳಿಸುವ ಅಧಿಕಾರ ಅವರಿಗೆ ಇದೆ. ಮುಂದಿನ ದಿನಗಳಲ್ಲಿ ಪಕ್ಷವನ್ನು ಇನ್ನಷ್ಟು ಬಲಿಷ್ಠಗೊಳಿಸಲು ಶಕ್ತಿಶಾಲಿ ತಂಡ ಹೊಂದುವ ವಿಶ್ವಾಸ ಇದೆ ಎಂದು ರಾಜೇಶ್ ಕಾವೇರಿ ಹೇಳಿದರು.
* ಬಿಜೆಪಿಯಲ್ಲಿ ಮೌಲ್ಯಯುತ ರಾಜಕಾರಣ:
ನೂತನ ಅಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದ ದ.ಕ. ಸಂಸದ ಕ್ಯಾ.ಬ್ರಿಜೇಶ್ ಚೌಟ, ಸಜ್ಜನಿಕೆಯ, ಮೌಲ್ಯಯುತ ರಾಜಕಾರಣ ಬಿಜೆಪಿಯಲ್ಲಿ ಮಾತ್ರ ಕಾಣಲು ಸಾಧ್ಯ. ರಾಜ್ಯದಲ್ಲಿ ದುರಾಡಳಿತ ನಡೆಸುತ್ತಿರುವ ಕಾಂಗ್ರೆಸ್ ವಿರುದ್ಧ ಜನಾಭಿಪ್ರಾಯ ಮೂಡಿಸುವ ಹೊಣೆ ನೂತನ ಜಿಲ್ಲಾ ಸಮಿತಿಗೆ ಇದೆ. ಈ ನಿಟ್ಟಿನಲ್ಲಿ ಗಟ್ಟಿಯಾದ ಸಂಘಟನೆಯನ್ನು ಕಟ್ಟಿಕೊಳ್ಳಬೇಕು ಎಂದರು.
ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಕೊನೆಯ ಅವಧಿಯಲ್ಲಿದೆ. ಈ ಮಣ್ಣಿನ ಪರಂಪರೆ, ಹಿಂದುತ್ವ, ಹಿಂದು ಭಾವನೆ ಏನೆಂಬ ಸಂದೇಶವನ್ನು ಕಾರ್ಯಕರ್ತರಿಗೆ ಕಳುಹಿಸಬೇಕಾಗಿದೆ. ಬಿಜೆಪಿಗೆ ಪ್ರಜಾಪ್ರಭುತ್ವ, ಸಂವಿಧಾನದಲ್ಲಿ ನಂಬಿಕೆ ಇದೆ. ಮುಂದೆಯೂ ಬಿಜೆಪಿಯೇ ಅಧಿಕಾರಕ್ಕೆ ಬರಲಿದೆ ಎಂದರು.
ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಮಾತನಾಡಿ, ರಾಜ್ಯ ಸರ್ಕಾರದ ದುರಾಡಳಿತ ಹಿನ್ನೆಲೆಯಲ್ಲಿ ವಿಪಕ್ಷದಲ್ಲಿರುವ ಬಿಜೆಪಿಗೆ ಈಗ ನಿತ್ಯ ಹೋರಾಟದ ಅನಿವಾರ್ಯತೆ ಇದೆ. ರಾಜ್ಯದಲ್ಲಿ ಬಾಣಂತಿಯರ ಸಾವು, ಆಡಳಿತ ವೈಫಲ್ಯ, ಭ್ರಷ್ಟಾಚಾರ ವಿರುದ್ಧ ಪ್ರಬಲ ಹೋರಾಟ ನಡೆಸಬೇಕಾಗಿದೆ ಎಂದರು.
ಸಂಘಟನಾ ಪರ್ವದ ರಾಜ್ಯ ಸಂಚಾಲಕ ಕ್ಯಾ.ಗಣೇಶ್ ಕಾರ್ಣಿಕ್ ಮಾತನಾಡಿ, ರಾಜ್ಯದಲ್ಲಿ 3.25 ಕೋಟಿ ಸದಸ್ಯರಿದ್ದು, ಇವರಲ್ಲಿ 10 ಲಕ್ಷಕ್ಕೂ ಅಧಿಕ ಮಂದಿ ಸಕ್ರಿಯ ಸದಸ್ಯರಿದ್ದಾರೆ. ರಾಜ್ಯದ ಎಲ್ಲ ಸಂಘಟನಾ ಜಿಲ್ಲೆಗಳಲ್ಲಿ ಹೊಸ ಜಿಲ್ಲಾಧ್ಯಕ್ಷರ ಘೋಷಣೆ ಮಾಡಲಾಗಿದೆ. ಮುಂದಿನ ದಿನಗಳು ಸವಾಲಿನ ದಿನಗಳಾಗಿದ್ದು, ಎಲ್ಲ ಸಮಸ್ಯೆಗಳಿಗೂ ಸ್ಪಂದಿಸುವ ಕೆಲಸ ಆಗಬೇಕಾಗಿದೆ ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ಮೋನಪ್ಪ ಭಂಡಾರಿ ಶುಭ ಹಾರೈಸಿದರು.
ನೂತನ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರು ಭಾರತಮಾತೆ, ಪಂಡಿತ್ ದೀನ್‌ದಯಾಳ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ನಮನ ಸಲ್ಲಿಸಿದರು.
ಶಾಸಕ ಡಾ.ವೈ.ಭರತ್ ಶೆಟ್ಟಿ, ಮಾಜಿ ಶಾಸಕ ಸಂಜೀವ ಮಠಂದೂರು ಮೊದಲಾದವರಿದ್ದರು.
ಜಿಲ್ಲಾ ಸಹ ಸಂಚಾಲಕ ಸಾಜ ರಾಧಾಕೃಷ್ಣ ಆಳ್ವ ಸ್ವಾಗತಿಸಿದರು. ರಾಜ್ಯ ಸಹ ಸಂಚಾಲಕ ವಿಕಾಸ್ ಪಿ. ವಂದಿಸಿದರು.