ಬೇಡಿಕೆಗಳ ಈಡೇರಿಕೆಗಾಗಿ ಜನಪ್ರತಿನಿಧಿಗಳಿಗೆ ಮನವಿ : ದ.ಕ. ಜಿಲ್ಲಾ ಯಾದವ ಸಮ್ಮೇಳನದಲ್ಲಿ ಸರ್ಕಾರಕ್ಕೆ ಠರಾವು ಪತ್ರ

23
Published on

ಪುತ್ತೂರು ಗ್ರಾಮಾಂತರ: ಯಾದವ ಸಭಾ ಕೇಂದ್ರ ಸಮಿತಿಗೆ ಜಿಲ್ಲಾ ಕೇಂದ್ರ ವ್ಯಾಪ್ತಿಯಲ್ಲಿ ಹಾಗೂ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ನಿವೇಶನ ಒದಗಿಸುವುದು, ಕರ್ನಾಟಕ ಸರ್ಕಾರ ಮಂಡಿಸುವ ಜಾತಿ ಗಣತಿಯಲ್ಲಿ ಆಗಿರುವ ಲೋಪವನ್ನು ಸರಿಪಡಿಸುವುದು, ಅಲ್ಲದೆ ಜಾತಿ ಗಣತಿಯಲ್ಲಿ ಪ್ರಸ್ತಾಪಿಸಿದ ಪ್ರವರ್ಗ 1ರ ಆದಾಯದ ಮಿತಿ ಹೆಚ್ಚಿಸುವುದು, ಶ್ರೀಕೃಷ್ಣ ಜನ್ಮಾಷ್ಟಮಿಗೆ ಸಾರ್ವತ್ರಿಕ ರಜೆ ೋಷಣೆ ಮಾಡುವುದು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜಿಲ್ಲಾ ಯಾದವ ಸಮ್ಮೇಳನದಲ್ಲಿ ರಾಜ್ಯ ಸರ್ಕಾರಕ್ಕೆ ಜನಪ್ರತಿನಿಧಿಗಳ ಮೂಲಕ ಬೇಡಿಕೆ ಸಲ್ಲಿಸಲಾಯಿತು.

ಪಾಣಾಜೆ ಗ್ರಾಮದ ಆರ್ಲಪದವು ರಣಮಂಗಲ ಸಭಾಭವನದಲ್ಲಿ ಭಾನುವಾರ ಯಾದವ ಸಭಾ ಪುತ್ತೂರು ತಾಲೂಕು ಸಮಿತಿಯ ನೇತೃತ್ವದಲ್ಲಿ ಯಾದವ ಸಭಾ ಕರ್ನಾಟಕ ಕೇಂದ್ರ ಸಮಿತಿ ಮಂಗಳೂರು ಹಾಗೂ ಸುಳ್ಯ, ಬಂಟ್ವಾಳ, ಮಂಗಳೂರು ತಾಲೂಕು ಸಮಿತಿಗಳ ಸಹಯೋಗದಲ್ಲಿ ಯಾದವ ಸಭಾ ಕರ್ನಾಟಕ ಕೇಂದ್ರ ಸಮಿತಿ ಅಧ್ಯಕ್ಷ ಎ.ಕೆ.ಮಣಿಯಾಣಿ ಅಧ್ಯಕ್ಷತೆಯಲ್ಲಿ ಜಿಲ್ಲಾ ಯಾದವ ಸಮ್ಮೇಳನ ನಡೆಯಿತು.

ಯಾದವ ಸಭಾದ ವಿದ್ಯಾರ್ಥಿಗಳ ಹಾಸ್ಟೆಲ್ ಪ್ರಾರಂಭ, ಸಿಇಟಿ, ನೀಟ್, ಸಿಎ, ಯುಪಿಎಸ್‌ಸಿ ಹಾಗೂ ಕೆಎಎಸ್ ಪರೀಕ್ಷೆ ಬರೆಯಲು ತರಬೇತಿಗಳ ಪ್ರಾರಂಭ, ರಾಜ್ಯ, ಹೊರ ರಾಜ್ಯ ವಿದ್ಯಾರ್ಥಿಗಳಿಗೆ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ಹಾಗೂ ವಿದೇಶದಲ್ಲಿ ಶಿಕ್ಷಣ ಪಡೆಯಲು ವಿಶೇಷ ಅನುದಾನ ಒದಗಿಸುವುದು, ಕೇಂದ್ರ ಸರ್ಕಾರದ ಒಬಿಸಿಯಲ್ಲಿ ಯಾದವ ಜಾತಿಗಿರುವ ಮೀಸಲಾತಿಯಲ್ಲಿ ಆದಾಯದ ಮಿತಿ ಹೆಚ್ಚಿಸುವುದು ಮೊದಲಾದ ಬೇಡಿಕೆಗಳನ್ನೊಳಗೊಂಡ ಠರಾವನ್ನು ಜನಪ್ರತಿನಿಧಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮಂಡಿಸಲಾಯಿತು. ಬೇಡಿಕೆಗಳಿಗೆ ಸ್ಪಂದನೆ ನೀಡುವ ಕೆಲಸ ಮಾಡಲಾಗುವುದು ಎಂದು ಶಾಸಕ ಅಶೋಕ್ ಕುಮಾರ್ ರೈ ಭರವಸೆ ನೀಡಿದರು.

ಯಾದವ ಸಭಾದ ಜಿಲ್ಲಾ ಕೇಂದ್ರ ಸಮಿತಿಯ ಮತ್ತು ತಾಲೂಕು ಸಮಿತಿಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

10 ವರ್ಷದ ಬಳಿಕ ಜಿಲ್ಲಾ ಸಮಾವೇಶ

ದ.ಕ. ಜಿಲ್ಲೆಯಲ್ಲಿ ಹತ್ತು ವರ್ಷಗಳ ಬಳಿಕ ಜಿಲ್ಲಾಮಟ್ಟದ ಸಮಾವೇಶ ಗ್ರಾಮಾಂತರ ಪ್ರದೇಶವಾದ ಪಾಣಾಜೆಯಲ್ಲಿ ನಡೆದಿದೆ.ಜಿಲ್ಲೆಯಲ್ಲಿ 15ರಿಂದ 20 ಸಾವಿರದಷ್ಟು ಜನಸಂಖ್ಯೆ ಇರುವ ಸಮುದಾಯದಲ್ಲಿ ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದವರನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ನಿಟ್ಟಿನಲ್ಲಿ ತಮ್ಮ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟು ಈಡೇರಿಸಿಕೊಳ್ಳುವ ಪ್ರಯತ್ನ ನಡೆಸುವುದು ಸಮಾವೇಶದ ಉದ್ದೇಶ ಎಂದು ಯಾದವ ಸಭಾ ಪುತ್ತೂರು ತಾಲೂಕು ಅಧ್ಯಕ್ಷ ಶ್ರೀಪ್ರಸಾದ್ ಪಾಣಾಜೆ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net