

ಜಿಲ್ಲಾಡಳಿತ ತಂಡದಿಂದ ತಾಲೂಕು ಭೇಟಿ
ಮಂಗಳೂರು : ಕಂದಾಯ ಸಹಿತ ವಿವಿಧ ಇಲಾಖೆಗಳ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತದ ತಂಡ ವಾರಕ್ಕೊಮ್ಮೆ ತಾಲೂಕು ಭೇಟಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮುಂದಿನ ವಾರದಿಂದ ಭೇಟಿ ಕಾರ್ಯಕ್ರಮ ನಡೆಯಲಿದ್ದು, ವಾರದಲ್ಲಿ ಒಂದು ದಿನವನ್ನು ಅದಕ್ಕಾಗಿ ನಿಗದಿಪಡಿಸಲಾಗುವುದೆಂದು ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದರು.
ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಬುಧವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಲಾದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ಆರಂಭದಲ್ಲಿ ಜಿಲ್ಲಾಡಳಿತದ ತಂಡ ನಿಗದಿತ ತಾಲೂಕು ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ಇತ್ಯರ್ಥ್ಯ ಪಡಿಸಲಿದೆ. ಬಳಿಕ ಖುದ್ದಾಗಿ ತಾಲೂಕು ಕೇಂದ್ರಗಳಿಗೆ ಭೇಟಿ ನೀಡಲಿದ್ದೇನೆ. ತಾಲೂಕು ಮಟ್ಟದಲ್ಲಿಯೇ
ಸಮಸ್ಯೆ ಬಗೆಹರಿಸುವುದು ಇದರ ಉದ್ದೇಶವಾಗಿದ್ದು, ಬಳಿಕ ಹೋಬಳಿ ಭೇಟಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.
*ಕಾರ್ಯಕ್ರಮ ಆಧಾರಿತ ಪ್ರವಾಸೋದ್ಯಮ :
ದ.ಕ. ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶವಿದೆ. ಸರ್ಫಿಂಗ್, ಪಿಲಿಕುಳ ನಿಸರ್ಗಧಾಮ ಸಹಿತ ಎಲ್ಲ ಕೇಂದ್ರಗಳನ್ನು ಕ್ರೋಢೀಕರಿಸಿ ಪ್ರವಾಸಿಗರು ಕನಿಷ್ಟ 10 ದಿನಗಳ ಕಾಲ ಇಲ್ಲಿ ಉಳಿದು ಜಿಲ್ಲೆಯ ಸೊಬಗನ್ನು ಸವಿಯುವ ನಿಟ್ಟಿನಲ್ಲಿ ‘ಕಾರ್ಯಕ್ರಮ ಆಧಾರಿತ ಪ್ರವಾಸೋದ್ಯಮ’ ಯೋಜನೆ ರೂಪಿಸಬೇಕಾಗಿದೆ. ಮೊದಲ ಹಂತದಲ್ಲಿ ಜಿಲ್ಲೆಯ ಪ್ರವಾಸಿ ತಾಣಗಳ ಪಟ್ಟಿ ಮಾಡಿ ಜಿಲ್ಲಾಡಳಿತವು ಪ್ರವಾಸೋದ್ಯಮ ಇಲಾಖೆಯ ಸಹಕಾರದಲ್ಲಿ ಪೋರ್ಟಲ್ ಮೂಲಕ ಪ್ರಚಾರ ಮಾಡುವ ಕಾರ್ಯ ಮಾಡಲಿದೆ. ತುರ್ತಾಗಿ ನಗರದ ಪ್ರಮುಖ ಬೀಚ್‌ಗಳು, ಪ್ರವಾಸಿ ಕೇಂದ್ರಗಳ ಸೂಚನಾ ಫಲಕಗಳನ್ನು ಅಳವಡಿಸುವ ಕಾರ್ಯ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಮಂಗಳೂರು ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ , ಜಿಲ್ಲಾ ವಾರ್ತಾಧಿಕಾರಿ ರವಿರಾಜ್.ಎಚ್.ಬಿ. ಉಪಸ್ಥಿತರಿದ್ದರು. ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ವಂದಿಸಿದರು.ಕೋಶಾಧಿಕಾರಿ ಪುಷ್ಪರಾಜ್ ಬಿ.ಎನ್. ಕಾರ್ಯಕ್ರಮ ನಿರೂಪಿಸಿದರು.
.....................