ಚಾಮುಂಡಿಬೆಟ್ಟದ ಮೆಟ್ಟಿಲು ಹತ್ತಿದ ಡಿ.ಕೆ.ಬದರ್ಸ್‌ ಅಭಿಮಾನಿಗಳು

mysore
Published on

ಮೈಸೂರು: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಗೆಲುವು ಸಾಧಿಸಲಿ ಎಂದು ಹರಕೆ ಹೊತ್ತ ಅವರ ಅಭಿಮಾನಿಗಳು ಚಾಮುಂಡಿ ಬೆಟ್ಟದ ಮೆಟ್ಟಿಲು ಹತ್ತಿ ಶ್ರೀ ಚಾಮುಂಡೇಶ್ವರಿ ದೇವಿಗೆ ಪ್ರಾರ್ಥನೆ ಸಲ್ಲಿಸಿದರು.


ಡಿ.ಕೆ. ಬ್ರದರ್ಸ್‌ ಅಭಿಮಾನಿ ಬಳಗದ ಸುಮಾರು 300 ಸದಸ್ಯರು ಗುರುವಾರ ಬೆಳಗ್ಗೆ ಚಾಮುಂಡೇಶ್ವರಿ ದೇಗುಲಕ್ಕೆ ಭೇಟಿ ನೀಡಿ ತಾಯಿಯ ದರ್ಶನ ಪಡೆದರು. ಡಿ.ಕೆ.ಸುರೇಶ್ ಅವರು ಹೆಚ್ಚಿನ ಮತಗಳ ಅಂತರದಲ್ಲಿ ಗೆಲುವು ಸಾಧಿಸಬೇಕು, ರಾಜ್ಯದ 28 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯ ಗಳಿಸಬೇಕು ಎಂದು ಪ್ರಾರ್ಥಿಸಿದರು.


ಸುದ್ದಿಗಾರರೊಂದಿಗೆ ಮಾತನಾಡಿದ ಅಭಿಮಾನಿಗಳು, ಡಿ.ಕೆ.ಸುರೇಶ್ ಮತ್ತೊಮ್ಮೆ ಸಂಸದರಾಗಿ ಆಯ್ಕೆಯಾಗಬೇಕು ಎಂದು ಸಣ್ಣ ಮಕ್ಕಳಿಂದ ದೊಡ್ಡವರವರೆಗೂ ಎಲ್ಲರೂ ಹರಕೆ ಹೊತ್ತು ಬಂದಿದ್ದೇವೆ. ನಮ್ಮಂತಹ ಗದ್ದೆ, ಹೊಲ ಇಲ್ಲದವರಿಗೆ ಪ್ರತಿ ತಿಂಗಳು ಕಾಂಗ್ರೆಸ್ ಸರ್ಕಾರ 2 ಸಾವಿರ ರೂ. ನೀಡುತ್ತಿದೆ. ಅನ್ನಭಾಗ್ಯ ಯೋಜನೆ ಮೂಲಕ ಅಕ್ಕಿ ನೀಡುತ್ತಿದ್ದಾರೆ. ಇದರಿಂದ ನಮ್ಮ ಸಂಸಾರವನ್ನು ನಡೆಸಲು ಸಹಾಯವಾಗುತ್ತಿದೆ. ಸರ್ಕಾರದ ಈ ಯೋಜನೆಗಳು ನಮಗೆ ಅನುಕೂಲವಾಗಿವೆ. ಈ ಯೋಜನೆಗಳಿಂದ ರಾಜ್ಯಕ್ಕೆ ಯಾವುದೇ ತೊಂದರೆ ಇಲ್ಲ ಎಂದರು.


ಕಾಂಗ್ರೆಸ್ ಮಹಿಳೆಯರಿಗೆ ಶಕ್ತಿ ತುಂಬುವ ಕಾರ್ಯಕ್ರಮ ನೀಡಿದೆ. ಗಂಡಂದಿರು, ಮಕ್ಕಳ ಬಳಿ ಹಣ ಕೇಳುವ ಪರಿಸ್ಥಿತಿಯನ್ನು ನೀಡದೆ ಹಣ ಹಾಕುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಉಚಿತ ಬಸ್ ವ್ಯವಸ್ಥೆ, 2 ಸಾವಿರ ರೂ., ಉಚಿತ ವಿದ್ಯುತ್, ಅನ್ನಭಾಗ್ಯ ಯೋಜನೆ ಎಲ್ಲವನ್ನೂ ಜಾರಿ ಮಾಡಿದ್ದಾರೆ. ಆ ಮೂಲಕ ನುಡಿದಂತೆ ನಡೆದುಕೊಂಡಿದ್ದಾರೆ. ಕೇಂದ್ರದಲ್ಲೂ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಇನ್ನು ಹೆಚ್ಚಿನ ಸವಲತ್ತು ಸಿಗುವ ಭರವಸೆ ಇದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net