ತುರ್ತು ಪರಿಸ್ಥಿತಿ ಸಮರ್ಥನೆಗೆ ದ.ಕ.ಜಿಲ್ಲಾ ಬಿಜೆಪಿ ಖಂಡನೆ

mmmmmmmmmmmmmm
Published on



ಮಂಗಳೂರು : ತುರ್ತು ಪರಿಸ್ಥಿತಿಯಿಂದ ದ.ಕ. ಜಿಲ್ಲೆಗೆ ಯಾವುದೇ ಕೆಡುಕಾಗಲಿಲ್ಲ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿಕೆ ನೀಡಿರುವುದನ್ನು ದ.ಕ.ಜಿಲ್ಲಾ ಬಿಜೆಪಿ ಖಂಡಿಸಿದೆ.
ಒಂದೊಮ್ಮೆ ಇದೇ ತುರ್ತುಪರಿಸ್ಥಿತಿ ವಿರುದ್ದ ಹೋರಾಟದಲ್ಲಿ ರಮಾನಾಥ ರೈ ಭಾಗವಹಿಸಿರುವುದನ್ನು ಈಗ ಅವರು ಮರೆತಿದ್ದಾರೆ. ಅಧಿಕಾರ ಪಡೆಯುವ ಹಂಬಲದಿಂದ ತಮ್ಮ ಆತ್ಮಸಾಕ್ಷಿಗೆ ವಿರುದ್ದ ಮಾತಾಡಿದ್ದಾರೆ. ಕಾಂಗ್ರೆಸ್ ಸರ್ಕಾರ ಹಾಗೂ ರಾಹುಲ್ ಗಾಂಧಿ ಪರಿವಾರಕ್ಕೆ ಅಂಧಭಕ್ತಿ ಪ್ರದರ್ಶನಕ್ಕೆ ರಮಾನಾಥ ರೈ ಇಂತಹ ಹೇಳಿಕೆ ನೀಡಿರುವುದು ಖೇದಕರ ಎಂದು ಬಿಜೆಪಿ ಜಿಲ್ಲಾ ವಕ್ತಾರ
ಅರುಣ್ ಜಿ ಶೇಟ್ ಟೀಕಿಸಿದ್ದಾರೆ.
ತುರ್ತು ಪರಿಸ್ಥಿತಿ ಸಂದರ್ಭ ದ.ಕ. ಜಿಲ್ಲೆಯಲ್ಲಿ ಪೊಲೀಸರು ಅವ್ಯಾಹತವಾಗಿ ದೌರ್ಜನ್ಯ ನಡೆಸಿದ್ದಾರೆ. 500ಕ್ಕೂ ಅಧಿಕ ಮಂದಿ ಜೈಲಿನಲ್ಲಿ ನರಕ ಯಾತನೆ ಅನುಭವಿಸಿದ್ದಾರೆ. ಮಂಗಳೂರಿನ ಮಧುಕರ್ ಅವರನ್ನು ಬಂದರ್ ಪೊಲೀಸ್ ಸ್ಟೇಷನ್‌ನ
ಮಾಳಿಗೆಯಿಂದ ಕೆಳಕ್ಕೆ ತಳ್ಳಿ ಕಾಲು ಮುರಿದಿದ್ದಾರೆ. ನಾಗೇಶ್ ಶೇಟ್ ಅವರಿಗೆ ಪೋಲೀಸರು ಹೊಡೆದ ಏಟಿನ ನೋಚು ಐವತ್ತು ವರ್ಷ ಕಳೆದರೂ ಬಾಧಿಸುತ್ತಿದೆ. ಅನೇಕರು ಜೈಲಿನಲ್ಲೇ ಕೊನೆಯುಸಿರು ಎಳೆದಿದ್ದಾರೆ. ತುರ್ತು ಪರಿಸ್ಥಿತಿ ವಿರುದ್ದ ಹೋರಾಟ ಮಾಡಿದ ನೂರಾರು ಮಂದಿ ಈಗಲೂ ಜಿಲ್ಲೆಯಲ್ಲಿ ಜೀವಂತವಾಗಿದ್ದಾರೆ. ಜಿಲ್ಲೆಯ ಹೋರಾಟಗಾರರು ಹಾಗೂ ಹುತಾತ್ಮರನ್ನು ನೆನೆಸಿಯಾದರೂ ರಮಾನಾಥ ರೈ ಅವರು ಇಂತಹ ಕಪಟ ಹೇಳಿಕೆ ನೀಡಬಾರದಿತ್ತು. ರಮಾನಾಥ ರೈ ಅವರು ಹೇಳಿದ ಸುಳ್ಳಿನಂತೆ ಯಾವುದೇ
ಸುಧಾರಣೆಗಾಗಿ ತುರ್ತು ಪರಿಸ್ಥಿತಿ ಹೇರಿಲ್ಲ. ನ್ಯಾಯಾಲಯದ ತೀರ್ಪಿನಿಂದ ಲೋಕಸಭಾ ಸದಸ್ಯ ಸ್ಥಾನವನ್ನು ಕಳೆದುಕೊಳ್ಳುವ
ಪರಿಸ್ಥಿತಿ ಬಂದ ಕಾರಣ ಇಂದಿರಾ ಗಾಂಧಿ ಇಡೀ ದೇಶವನ್ನು ತುರ್ತುಪರಿಸ್ಥಿತಿಯ ಕರಾಳ ಕೂಪಕ್ಕೆ ತಳ್ಳಿ ಸಂವಿಧಾನದ ಹತ್ಯೆ ಮಾಡಿದ್ದರು ಎಂದು ಅರುಣ್ ಜಿ ಶೇಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net