ಡಿ ಗ್ಯಾಂಗ್ ಸದಸ್ಯರ ಬಂಧನ: ಮಾರಕಾಯುಧ ಸಹಿತ ನಾಲ್ಕು ಮಂದಿ ವಶಕ್ಕೆ

D gang arrested
Published on

ವಿಟ್ಲ: ಕರ್ನಾಟಕ ಕೇರಳ ಗಡಿ ಭಾಗದ ಸಾಲೆತ್ತೂರು ಕೊಡಂಗೆಯ ಚೆಕ್‌ಪೋಸ್ಟ್‌ನಲ್ಲಿ ವಾಹನ ತಪಾಸಣೆ ವೇಳೆ ವಿಟ್ಲ ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿ, ಪರಾರಿಯಾಗಿದ್ದ ಡಿ ಗ್ಯಾಂಗ್ ಮುಖ್ಯಸ್ಥ ಸೇರಿ ನಾಲ್ವರು ಆರೋಪಿಗಳನ್ನು ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಪೆರಾಜೆ ಬುಡೋಳಿಯಲ್ಲಿ ಪೊಲೀಸರು ಬಂಧಿಸಿದ್ದಾರೆ.

ಡಿ ಗ್ಯಾಂಗ್ ಮುಖ್ಯಸ್ಥ ಮೀಯಪದವು ಮೂಡಂಬೈಲು ನಿವಾಸಿ ಅಬ್ದುಲ್ ರಹಿಮಾನ್ ಯಾನೆ ರಹೀಂ (25), ಸದಸ್ಯರಾದ ಕಡಂಬಾರು ಬಟ್ಯಪದವು ನಿವಾಸಿ ಮಹಮ್ಮದ್ ಫಯಾಜ್ ಯಾನೆ ಕುವ ಫಯಾಜ್ (22), ಮಂಗಲ್ಪಾಡಿ ಸೋಂಕಾಳ್ ನಿವಾಸಿ ಹೈದರ್ ಅಲಿ ಯಾನೆ ಹೈದರ್ (20), ಮಹಾರಾಷ್ಟ್ರ ಜಲಗಾವ್ ಮುಕುಂದ ನಗರ ನಿವಾಸಿ ರಾಕೇಶ್ ಕಿಶೋರ್ ಬಾವಿಸ್ಕರ್ ಯಾನೆ ರಾಕಿ ಯಾನೆ ರಾಕಿ ಬಾಯ್ (27) ಬಂಧಿತರು.

ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ವೇಳೆ ಆರೋಪಿಗಳನ್ನು ಬಂಧಿಸಲಾಗಿದೆ. ವಿಚಾರಣೆ ವೇಳೆ ಮೂರು 7.65 ಎಂಎಂ ಪಿಸ್ತೂಲ್, 1 ನಾಡ ಕೊವಿ, 13 ಸಜೀವ ಮದ್ದುಗುಂಡು, ಒಂದು ಕಾರನ್ನು ವಶ ಪಡೆದುಕೊಳ್ಳಲಾಗಿದೆ. ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, 15 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೋನವಾನೆ ರಿಷಿಕೇಶ್ ಭಗವಾನ್ ಮಾರ್ಗದರ್ಶನದಲ್ಲಿ ಬಂಟ್ವಾಳ ಡಿವೈಎಸ್‌ಪಿ ವೆಲೆಂಟೈನ್ ಡಿಸೋಜ ನಿರ್ದೇಶನದಂತೆ ಬಂಟ್ವಾಳ ವೃತ್ತ ನಿರೀಕ್ಷಕ ಟಿ.ಡಿ. ನಾಗರಾಜ್ ಅವರನ್ನೊಳಗೊಂಡ ವಿಟ್ಲ ಠಾಣೆಯ ಉಪನಿರೀಕ್ಷಕ ವಿನೋದ್ ರೆಡ್ಡಿ, ಸಹಾಯಕ ಉಪನಿರೀಕ್ಷಕ ಕರುಣಾಕರ್, ಸಿಬ್ಬಂದಿ ಪ್ರಸನ್ನ, ಗಿರೀಶ್, ಪ್ರತಾಪ, ವಿನಾಯಕ, ಲೋಕೇಶ್, ಹೇಮರಾಜ್, ನಜೀರ್, ವಿವೇಕ್, ಪ್ರವೀಣ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net