

ಸಾಸ್ವೆಹಳ್ಳಿ: ನೀರು ಅಮೂಲ್ಯವಾದ ಆಸ್ತಿ ಅದರ ಮೌಲ್ಯ ಅರಿತು ಮಿತವಾಗಿ ಬಳಕೆ ಮಾಡಿಕೊಳುವುದನ್ನು ಕಲಿಯಬೇಕು ಎಂದು ಶಾಸಕ ಡಿ.ಜಿ. ಶಾಂತನಗೌಡ ಹೇಳಿದರು.
ಹೊನ್ನಾಳಿ ತಾಲೂಕಿನ ಹನಗವಾಡಿ ಗ್ರಾಮದಲ್ಲಿ ಭಾನುವಾರ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಜಲಜೀವನ್ ಮಿಷನ್ ಯೋಜನೆಯಡಿ 1.32 ಕೋಟಿ ರೂ. ಅನುದಾನದಲ್ಲಿ ನಿರ್ವಣಗೊಂಡಿರುವ 24/7 ನೀರು ಸರಬರಾಜು ಯೋಜನೆಯ ಯಶಸ್ವಿ ಗ್ರಾಮ ಘೊಷಣೆ ಹಾಗೂ ಲೋಕಾರ್ಪಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಗ್ರಾಮಸ್ಥರಿಗೆ ನೀರನ್ನು ಹಿತಮಿತವಾಗಿ ಬಳಸುವ ಪ್ರತಿಜ್ಞಾವಿಧಿಯನ್ನು ಶಾಸಕ ಶಾಂತನಗೌಡ ಬೋಧಿಸಿದರು.
ದಾವಣಗೆರೆ ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ಮಾತನಾಡಿ, ಈ ಯೋಜನೆಯ ಉದ್ದೇಶ ಪ್ರತಿಯೊಬ್ಬ ವ್ಯಕ್ತಿಗೂ ಸಮರ್ಪಕ ಶುದ್ಧ ನೀರು ಸಿಗಬೇಕೆಂಬುದಾಗಿದ್ದು ಇದರ ಯಶಸ್ಸಿಗೆ ಗ್ರಾಮಸ್ಥರೆಲ್ಲರೂ ಶ್ರಮಿಸುವ ಅವಶ್ಯವಿದೆ. ಎಲ್ಲರೂ ಅವರವರ ಜವಾಬ್ದಾರಿ ಅರಿತು ಕಾರ್ಯನಿರ್ವಹಿಸಿ ಎಂದು ಗ್ರಾಮಸ್ಥರಿಗೆ ಸಲಹೆ ನೀಡಿದರು.
ಜಿಪಂ ಕಾರ್ಯನಿರ್ವಾಹಣಾಧಿಕಾರಿ ಸುರೇಶ್.ಬಿ. ಇಟ್ನಾಳ್ ಮಾತನಾಡಿ, ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ಹನಗವಾಡಿ ಗ್ರಾಮ ಈ ಯೋಜನೆ ಯಶಸ್ಸು ಕಂಡಿದ್ದು, ಆ.15ರೊಳಗೆ ದಾವಣಗೆರೆ ಜಿಲ್ಲೆಯಲ್ಲಿ 100 ಗ್ರಾಮಗಳು ಈ ಯೋಜನೆಯ ಪ್ರಯೋಜನ ಪಡೆಯಲಿವೆ. ಇದಕ್ಕಾಗಿ ಜಿಲ್ಲಾ ಹಂತದ ಎಲ್ಲ ಅಧಿಕಾರಿಗಳು ಸಂಕಲ್ಪ ತೊಟ್ಟಿದ್ದು, ಪ್ರತಿ ಗ್ರಾಮಸ್ಥರು ಸರ್ಕಾರದ ಪ್ರತಿಯೊಂದು ಯೋಜನೆಗಳು ನನ್ನ ಯೋಜನೆ ಎಂದುಕೊಂಡು ಕೆಲಸ ಮಾಡಿದರೆ ಯೋಜನೆಗಳು ಯಶಸ್ವಿಯಾಗಲು ಸಾಧ್ಯ ಎಂದರು.
ವಿಶ್ವ ಬ್ಯಾಂಕ್ ಮುಖ್ಯಸ್ಥ ಅಜಯ್ ಸಿಂಹ, ಗ್ರಾಪಂ ಅಧ್ಯಕ್ಷೆ ಜ್ಯೋತಿ ಮುರುಗೇಶ್ ಮಾತನಾಡಿದರು.
ಉಪಾಧ್ಯಕ್ಷ ವೆಂಕಟೇಶ್, ಜೆಎಂಎಂ ಎಇಇ ಸೋಮ್ಲಾ ನಾಯ್್ಕ ತಾಪಂ ಇಒ ಪ್ರಕಾಶ್, ತಾಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು, ಮಹಿಳಾ ಸಂಘಟನೆ ಕಾರ್ಯಕರ್ತರು ಇದ್ದರು.