ನಾಡು ಕಂಡ ಅಪರೂಪದ ರಾಜಕಾರಣಿ ಅರಸು: ಕೃಷಿಕ ಲಯನ್ಸ್ ಸಂಸ್ಥೆ ಆಡಳಿತಾಧಿಕಾರಿ ಕೆ.ಟಿ.ಹನುಮಂತು ಬಣ್ಣನೆ

1 (3)
Published on

ಮಂಡ್ಯ: ರಾಜ್ಯಕಂಡ ಅಪರೂಪದ ಧೀಮಂತ ನಾಯಕರು, ಜನಪರ, ಹಿಂದುಳಿದ ಮತ್ತು ರೈತಪರ ರಾಜಕಾರಣಿ ದೇವರಾಜ ಅರಸು ಎಂದು ಕೃಷಿಕ ಲನ್ಸ್ ಸಂಸ್ಥೆ ಆಳಿತಾಧಿಕಾರಿ ಕೆ.ಟಿ.ಹನುಮಂತು ಅಭಿಪ್ರಾಯಪಟ್ಟರು.

ತಾಲೂಕಿನ ಉಮ್ಮಡಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಕೃಷಿಕ ಲಯನ್ಸ್ ಸಂಸ್ಥೆ, ಸಕ್ಕರೆ ನಾಡು ಲಯನ್ಸ್ ಸಂಸ್ಥೆ ಸಹಯೋಗದಲ್ಲಿ ಡಿ.ದೇವರಾಜ ಅರಸು ಅವರ 108ನೇ ಜನ್ಮ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಗಿಡ ನೆಡುವುದು, 351 ತೆಂಗಿನ ಸಸಿ ವಿತರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿ, ಹಿಂದುಳಿದ ವರ್ಗಗಳ ಏಳಿಗೆ, ಸ್ವಾಭಿಮಾನದ ಬದುಕಿಗಾಗಿ ಹತ್ತಾರು ಜನಪರ ಯೋಜನೆಗಳನ್ನು ನೀಡಿದ ಮಹಾನ್ ವ್ಯಕ್ತಿ. ವಿಶೇಷವಾಗಿ ಯುವಕರಿಗೆ ಶಿಕ್ಷಣ, ಉದ್ಯೋಗಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಬೇಕೆನ್ನುವ ಸಂಕಲ್ಪಕ್ಕೆ ನಾಂದಿಹಾಡಿದ ನಾಯಕರು ಎಂದು ಸ್ಮರಿಸಿದರು.

ದೇವರಾಜ ಅರಸು ಅವರು ಜಾರಿಗೆ ತಂದ ಕ್ರಾಂತಿಕಾರಿ ಭೂ ಸುಧಾರಣೆ ಕಾಯ್ದೆ, ಅದೆಷ್ಟೋ ಜನರಿಗೆ ದಾರಿದೀಪವಾಯಿತು. ಅತ್ಯಂತ ಸ್ಫೂರ್ತಿದಾಯಕ ಜೀವನ ನಡೆಸಲು ಸಾಧ್ಯವಾಯಿತು. ಕರ್ನಾಟಕದಲ್ಲಿ ‘ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು’ ಎನ್ನುವ ಘೋಷಣೆಯನ್ನು ಅಕ್ಷರಶಃ ಪಾಲಿಸಿದವರು ದೇವರಾಜ ಅರಸು. ಹಲವಾರು ನಾಯಕರನ್ನು ಬೆಳೆಸಿದ್ದಾರೆ. ರಾಜ್ಯ ರಾಜಕಾರಣದಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸಿದ್ದಾರೆ. ಅವರ ಅಭಿವೃದ್ಧಿಯ ಹೆಜ್ಜೆ ಗುರುತುಗಳು ಕರ್ನಾಟಕದ ಭೂಮಿಯಲ್ಲಿ ಶಾಶ್ವತವಾಗಿದೆ. ಅವರ ಹೆಸರಿನಲ್ಲಿ ಇಂದಿಗೂ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿದೆ. ಅವರ ವಿಚಾರಧಾರೆಗಳು ಪಕ್ಷಾತೀತ, ಸರ್ವ ಸಮ್ಮತವಾಗಿ ಒಪ್ಪುವಂಥದ್ದಾಗಿವೆ ಎಂದರು.

70ರ ದಶಕದಲ್ಲಿ ಎರಡು ಬಾರಿ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸು ಇವರನ್ನು ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗಗಳ ಹರಿಕಾರ ಎಂದು ಕರೆಯಲಾಗುತ್ತದೆ ಎಂದು ತಿಳಿಸಿದರು.

ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವವರು ಹಾಗೂ ಶಿಕ್ಷಕರನ್ನು ಅಭಿನಂದಿಸಲಾಯಿತು. ಗ್ರಾಮಸ್ಥರು, ವಿದ್ಯಾರ್ಥಿಗಳಿಗೆ ತೆಂಗಿನ ಸಸಿಗಳನ್ನು ವಿತರಿಸಲಾಯಿತು. ಗಾಯಕರಾದ ಶೇಖರ್, ಬಸವರಾಜು ವಿವಿಧ ಪರಿಸರ, ಶೈಕ್ಷಣಿಕ ಜಾಗೃತಿ ಗೀತೆಗಳನ್ನು ಹಾಡಿದರು. ಆರ್‌ಎಪಿಸಿಎಂಎಸ್ ಅಧ್ಯಕ್ಷ ಯು.ಸಿ.ಶೇಖರ್, ಬಿಸಿಎಂ ಇಲಾಖೆ ವಿಸ್ತರಣಾಧಿಕಾರಿಗಳಾದ ಎಚ್.ಆರ್.ಸತೀಶ್, ಎಂ.ಟಿ.ಶ್ರೀನಿವಾಸ್, ಕೃಷಿಕ ಲಯನ್ಸ್ ಸಂಸ್ಥೆ ಅಧ್ಯಕ್ಷ ಕೆ.ಪಿ.ವೀರಪ್ಪ, ಸಕ್ಕರೆನಾಡು ಲಯನ್ಸ್ ಸಂಸ್ಥೆ ಅಧ್ಯಕ್ಷ ಶಶಿಧರ್ ಈಚಗೆರೆ, ನಿರ್ದೇಶಕರಾದ ರತ್ನಮ್ಮ, ನೀನಾ ಪಟೇಲ್, ಮುಖ್ಯಶಿಕ್ಷಕ ನಾಗರಾಜು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net