ಡಿ.ದೇವರಾಜ ಅರಸು ಬಡವರ ಆಶಾಕಿರಣ

TKE 6A
Published on

ತರೀಕೆರೆ: ಬಡವರ ಆಶಾಕಿರಣ ಮಾಜಿ ಸಿಎಂ ಡಿ.ದೇವರಾಜ ಅರಸು ಅವರು ತಮ್ಮ ಅಧಿಕಾರಾವಧಿಯಲ್ಲಿ ಮಾಡಿರುವ ಜನಪರ ಕಾರ್ಯ ಅವಿಸ್ಮರಣೀಯ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದರು.

ಪಟ್ಟಣದ ಕನಕ ಕಲಾ ಭವನದಲಿ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಆಯೋಜಿಸಿದ್ದ ಮಾಜಿ ಸಿಎಂ ಡಿ.ದೇವರಾಜ ಅರಸು ಅವರ ಜಯಂತಿ ಉದ್ಘಾಟಿಸಿ ಮಾತನಾಡಿ, ಎಂಟು ವರ್ಷ ಸಿಎಂ ಆಗಿ ಅಧಿಕಾರ ನಡೆಸಿದ ಅವರು ರಾಜಕಾರಣ ಮತ್ತು ಸಮಾಜಕ್ಕೆ ಒಳ್ಳೆಯ ಸಂದೇಶಗಳನ್ನು ನೀಡಿ ಹೋಗಿದ್ದಾರೆ. ಅವರ ಆದರ್ಶ, ಜೀವನ ತತ್ವಗಳು ಇಂದಿನ ರಾಜಕಾರಣಕ್ಕೆ ಅವಶ್ಯಕ ಎಂದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕಿ ಡಾ.ಸಬೀತಾ ಬನ್ನಾಡಿ ಉಪನ್ಯಾಸ ನೀಡಿ, ದಲಿತ, ಶೋಷಿತರಿಗೆ ಅನುಕೂಲ ಕಲ್ಪಿಸಲು ಡಿ.ದೇವರಾಜ ಅರಸು ಮಾಡಿದ ಕಾರ್ಯ ಅನನ್ಯ. ಭೂ ಸುಧಾರಣೆ ಜಾರಿಗೊಳಿಸುವ ಮೂಲಕ ದುಡಿಯುವ ಕೈಗಳಿಗೆ ಜಮೀನಿನ ಹಕ್ಕು ನೀಡಿದ್ದಲ್ದೇ ಸಣ್ಣ, ಸಣ್ಣ ಸಮುದಾಯವನ್ನು ಗುರುತಿಸಿ ರಾಜಕೀಯ ಪ್ರಾತಿನಿಧ್ಯ ನೀಡಿದ್ದರು. ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿ ಜಾತ್ಯಾತೀತ ಕಲ್ಪನೆ ಹುಟ್ಟು ಹಾಕಿದ್ದರು ಎಂದು ಹೇಳಿದರು.

ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಪುರಸಭೆ ಅಧ್ಯಕ್ಷ ವಸಂತ್‌ಕುಮಾರ್, ಉಪಾಧ್ಯಕ್ಷೆ ಪಾರ್ವತಮ್ಮ, ಸದಸ್ಯರಾದ ಆರ್.ಕುಮಾರಪ್ಪ, ಆದಿಲ್ ಪಾಷಾ, ಮಂಜುನಾಥ, ಮುಖ್ಯಾಧಿಕಾರಿ ಟಿ.ಒ.ವಿಜಯಕುಮಾರ್, ಬಿಸಿಎಂ ಇಲಾಖೆ ಕಲ್ಯಾಣಾಧಿಕಾರಿ ಎಲ್.ಧರ್ಮರಾಜ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net