ಡಿ.ದೇವರಾಜ ಅರಸು ಹಿಂದುಳಿದ ವರ್ಗದ ಅಭಿವೃದ್ಧಿ ಹರಿಕಾರ

mysore
Published on

ಮೈಸೂರು; ಹಿಂದುಳಿದ ವರ್ಗಗಳ ಅಭಿವೃದ್ಧಿಯ ಹರಿಕಾರ ಡಿ.ದೇವರಾಜ ಅರಸು ಅವರು ಹಾಕಿ ಕೊಟ್ಟಿರುವ ಮಾರ್ಗಗಳು ಮಾದರಿಯಾಗಿದ್ದು, ಸಾರ್ವಜನಿಕ ಜೀವನ ಮತ್ತು ರಾಜಕೀಯದಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದು ಶಾಸಕ ಕೆ.ಹರೀಶ್‌ಗೌಡ ಹೇಳಿದರು.


ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮೈಸೂರು ಮಹಾನಗರ ಪಾಲಿಕೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ನಗರದ ಕಲಾಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ 109ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.


ಅವರ ಆಡಳಿತ ಅವಧಿಯಲ್ಲಿ ಭೂ ಸುಧಾರಣೆ, ಜೀತ ಪದ್ಧತಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ತಂದಂತಹ ಕಾಯ್ದೆಗಳು, ಅಂಗವಿಕಲರಿಗೆ ಮಾಸಿಕ ವೇತನ, ವಿಧವಾ ವೇತನ ಸೇರಿದಂತೆ ಇನ್ನಿತರ ಜನಪರ ಕಾರ್ಯಗಳು ಸಾಮಾಜಿಕ ಸುಧಾರಣೆ ಕಾರಣವಾಗಿವೆ. ಆಶ್ರಯ ಯೋಜನೆಯಡಿ ನಿವೇಶನ ಇಲ್ಲದಿರುವವರಿಗೆ ಮನೆ ನೀಡುವ ಯೋಜನೆ ಇವೆಲ್ಲವೂ ಮರೆಯಲಾಗದಂತಹ ಕೊಡುಗೆಗಳು ಎಂದು ಸ್ಮರಿಸಿದರು.


ಸಣ್ಣ ಗ್ರಾಮದಲ್ಲಿ ಹುಟ್ಟಿದ ಅವರು ರಾಜಕೀಯವಾಗಿ ಬೆಳೆದು ಮುಖ್ಯಮಂತ್ರಿ ಸ್ಥಾನ ತಲುಪಿದ್ದರು. ಅವರು ತಂದಂತಹ ಸುಧಾರಣೆಗಳನ್ನು ಈಗಲೂ ಆಡಳಿತದಲ್ಲಿ ಅಳವಡಿಸಿಕೊಂಡು ಹೋಗುತ್ತಿದ್ದು, ಇಡೀ ರಾಜ್ಯ ಅಭಿವೃದ್ಧಿ ಪಥದತ್ತ ಹೋಗಲು ಅಡಿಪಾಯ ಹಾಕಿಕೊಟ್ಟರು. ಹೀಗಾಗಿ ಅವರ ಆಡಳಿತ ರಾಜ್ಯಕ್ಕೆ ಮಾದರಿ. ಅವರ ಆಡಳಿತವನ್ನು ಇಂದಿಗೂ ರಾಜ್ಯ ಸರ್ಕಾರ ನೆನೆದು ನಡೆಯುತ್ತಿದೆ ಎಂದರು.


ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ ಮಾತನಾಡಿ, ಡಿ.ದೇವರಾಜ ಅರಸು ಅವರು ತಮ್ಮ ಹೆಸರಿನಲ್ಲೇ ಇರುವಂತೆ ಜನರಿಗೆ ದೇವರ ರೂಪದಲ್ಲಿ ರಾಜನಂತೆ ಆಳ್ವಿಕೆ ನಡೆಸಿ ಅರಸನಂತೆ ಬದುಕಿದ್ದಂತಹ ಚೇತನ. ಮುಖ್ಯಮಂತ್ರಿ ಆಗಿ ಅಧಿಕಾರ ತೆಗೆದುಕೊಂಡ ನಂತರ ಬಡವರ ಪರ ನಿಂತರು. ರಾಷ್ಟ್ರ ರಾಜಕಾರಣ ಇತಿಹಾಸದಲ್ಲೇ ಉಳುವವನೇ ಭೂಮಿಯ ಒಡೆಯ ಕಾಯ್ದೆ ಜಾರಿಗೊಳಿಸಿದ ಮೊದಲ ವ್ಯಕ್ತಿಯಾಗಿದ್ದಾರೆ ಎಂದರು.


ಶತಮಾನಗಳಿಂದ ಬಂದಂತಹ ಜೀತ ಪದ್ಧತಿ, ಜಮೀನ್ದಾರಿ ಪದ್ಧತಿಯನ್ನು ಹೋಗಲಾಡಿಸಿ ಪ್ರತಿಯೊಬ್ಬ ವ್ಯಕ್ತಿಯೂ ಸಮಾನತೆಯಿಂದ ಸ್ವಾಭಿಮಾನದಿಂದ ಬದುಕಲು ಅವಕಾಶ ಮಾಡಿಕೊಟ್ಟರು. ಇವರ ಗುಣ, ವ್ಯಕ್ತಿತ್ವ ಪ್ರತಿಯೊಬ್ಬ ಯುವ ಪೀಳಿಗೆಗೂ ಮಾದರಿ ಎಂದು ಹೇಳಿದರು.
ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಡಾ.ಪುಷ್ಪ್ಪಾ ಅಮರನಾಥ್ ಮಾತನಾಡಿ, ಶೋಷಿತ ವರ್ಗದ ಸಮಗ್ರ ಅಭಿವೃದ್ಧಿಯ ಹರಿಕಾರ, ನೊಂದವರ ನಂದಾದೀಪ, ಧೀಮಂತ ನಾಯಕ, ಸಾಮಾಜಿಕ ನ್ಯಾಯಕ್ಕಾಗಿ ನಿರಂತರ ಹೋರಾಡಿದ ಅದಮ್ಯ ಚೇತನ ದೇವರಾಜ ಅರಸು ಅವರು. ಇಂತಹ ಮಹಾನ್ ವ್ಯಕ್ತಿ ಮೈಸೂರಿನವರಾಗಿರುವುದು ಹೆಮ್ಮೆ ಎಂದರು.


ಅರಸು ಅವರು ಮಾಡಿದ ಕಾರ್ಯಗಳೇ ಅಭಿವೃದ್ಧಿಯ ಹರಿಕಾರ ಎಂಬ ಬಿರುದಿಗೆ ಸಾಕ್ಷಿಯಾಗಿವೆ. ಶೋಷಿತ ವರ್ಗಗಳ ಧ್ವನಿಯಾಗಿ ನಿಂತು ಸಾಮಾಜಿಕವಾಗಿ, ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ಬಡವರ ಅಭಿವೃದ್ಧಿಗಾಗಿ ಶ್ರಮಿಸಿದಂತಹವರು. ಭೂ-ಸುಧಾರಣೆ ಕಾಯ್ದೆ ಜಾರಿದರು. ಇದರಿಂದ ಬಡವರಿಗೆ ಆರ್ಥಿಕ ಸಬಲೀಕರಣ ಸಿಕ್ಕಂತಾಗಿದೆ. ಅನೇಕ ಬಡವರು ಹಿಂದುಳಿದ ವರ್ಗದ ಜನರಿಗೆ ಸಹಕಾರಿಯಾಗಿದೆ ಎಂದು ಹೇಳಿದರು.
ಅರಸು ಅವರ ಕಾಲದ ಭಾಗ್ಯ ಜ್ಯೋತಿ ಕಾರ್ಯಕ್ರಮ ಬಡವರ ಬದುಕನ್ನು ಕತ್ತಲೆಯಿಂದ ಬೆಳಕಿನೆಡೆಗೆ ಕರೆದೊಯ್ಯುತ್ತಿದ್ದು, ಇಂದಿನ ಸರ್ಕಾರದ ಆಡಳಿತಕ್ಕೆ ಸ್ಫೂರ್ತಿದಾಯಕವಾಗಿದೆ. ಅವರ ಆದರ್ಶಗಳನ್ನು ಪಾಲಿಸಿ ಬೆಳೆಸೋಣ ಎಂದರು.


ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಂ ಗಾಯತ್ರಿ, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ರಂಗೇಗೌಡ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್, ಜಾನಪದ ವಿದ್ವಾಂಸ ಹಿ.ಸಿ.ರಾಮಚಂದ್ರೇಗೌಡ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿ ರಾಘವೇಂದ್ರ ಸೇರಿದಂತೆ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net