

ಭದ್ರಾವತಿ: ಡಿ.ದೇವರಾಜ ಅರಸು ಅವರು ಜಾರಿಗೆ ತಂದ ಭೂ ಸುಧಾರಣೆ ನೀತಿಗಳು ಶ್ರೀಮಂತರು, ಬಡವರನ್ನು ಸರಿಸಮಾನವಾಗಿ ನೋಡುವಂತೆ ಮಾಡಿತು. ನಗರಸಭೆ ಆಡಳಿತ ಚುಕ್ಕಾಣಿ ಹಿಡಿದಿರುವ ನಾವುಗಳು ಅವರ ಆದರ್ಶ, ತತ್ವಗಳನ್ನು ಪರಿಪಾಲಿಸಿ ಆಡಳಿತ ನಡೆಸುವ ಅಗತ್ಯವಿದೆ ಎಂದು ನಗರಸಭೆ ಅಧ್ಯಕ್ಷೆ ಶ್ರುತಿ ವಸಂತ ಕುಮಾರ್ ತಿಳಿಸಿದರು.
ಭಾನುವಾರ ನಗರಸಭೆ ಕಚೇರಿ ಆವರಣದಲ್ಲಿ ಏರ್ಪಡಿಸಿದ್ದ ಡಿ. ದೇವರಾಜ ಅರಸು ಜಯಂತ್ಯುತ್ಸವ ಹಾಗೂ ನನ್ನ ಮಣ್ಣು ನನ್ನ ದೇಶ ಅಭಿಯಾನದಲ್ಲಿ ನಿವೃತ್ತ ಸೈನಿಕರನ್ನು ಸನ್ಮಾನಿಸಿದ ಅವರು, ರಾಜಕೀಯ ಶಕ್ತಿಗಳ ಜತೆ ಸೈನಿಕ ಶಕ್ತಿಯೂ ಒಟ್ಟುಗೂಡಿದರೆ ನಗರದಲ್ಲಿ ಉತ್ತಮ ಆಡಳಿತ ಸಾಧ್ಯವಾಗುತ್ತದೆ ಎಂದರು.
ಪೌರಾಯುಕ್ತ ಮನುಕುಮಾರ್ ಮಾತನಾಡಿ, ಡಿ.ದೇವರಾಜ ಅರಸು ಸಾಕಷ್ಟು ಜನಪರ ಯೋಜನೆಗಳನ್ನು ಜಾರಿಗೆ ತಂದರು. ಅನೇಕ ಅನಿಷ್ಟ ಪದ್ಧತಿಗಳನ್ನು ಹೋಗಲಾಡಿಸಿದರು. ಶೋಷಿತ ವರ್ಗದವರ ದನಿಯಾಗಿ, ದಲಿತರ ಏಳಿಗೆಗೆ ಬುನಾದಿ ಹಾಕಿಕೊಟ್ಟರು. ಬಡವರ ಪರ ಕಾಳಜಿ ಹೊಂದಿದ್ದ ಅವರು, ಕಲೆ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದರು. ಅವರ ತತ್ವ ಆದರ್ಶಗಳನ್ನು ಆಡಳಿತದಲ್ಲಿ ಅನುಕರಣೆ ಮಾಡುವುದು ಸೂಕ್ತವೆಂದು ಇಂದಿನ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಇಂದಿಗೂ ಸ್ಮರಿಸಿಕೊಳ್ಳುತ್ತಾರೆ ಎಂದರು.
ಮೇಜರ್ ವಿಕ್ರಂ ಕೆತ್ಲಾಯ್ ಮಾತನಾಡಿ, ದೇಶ ಸೇವೆ ಮಾಡಬೇಕಾದರೆ ಸದೃಢ ಮನಸ್ಸಿರಬೇಕು. ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ ನಿವೃತ್ತರಾಗುವ ಯೋಧರನ್ನು ಗುರುತಿಸುವ ಕೆಲಸ ಯಾರೂ ಮಾಡುವುದಿಲ್ಲ. ಆದರೆ ಇಂದು ನಗರಸಭೆವತಿಯಿಂದ ನಮ್ಮನ್ನು ಗುರುತಿಸಿ ಗೌರವಿಸುವ ಕೆಲಸ ನಡೆಯುತ್ತಿರುವುದು ನಿಜಕ್ಕೂ ಹೆಮ್ಮೆ ತಂದಿದೆ ಎಂದರು.
ನಗರಸಭೆ ಉಪಾಧ್ಯಕ್ಷೆ ಸರ್ವಮಂಗಳಾ ಬೈರಪ್ಪ, ಮಾಜಿ ಸೈನಿಕರ ಸಂಘದ ಅಧ್ಯಕ್ಷ ಅಶೋಕ್, ಪ್ರಮುಖರಾದ ಗಿರೀಶ್, ದಿನೇಶ್, ಶ್ರೀನಿವಾಸ್, ಚನ್ನಪ್ಪ, ಸುಹಾಸಿನಿ, ಸುನೀತಾ, ಆನೆಕೊಪ್ಪ ಬಸವರಾಜ್ ಇತರರಿದ್ದರು.