ಜನಪರ ಯೋಜನೆ ಜಾರಿಗೆ ತಂದ ಡಿ.ದೇವರಾಜ ಅರಸು: ಬಿಜೆಪಿ ಮಾಜಿ ನಗರಾಧ್ಯಕ್ಷ ಎಚ್.ಆರ್.ಅರವಿಂದ್ ಬಣ್ಣನೆ

D. Devaraja Arasu birthday Mandya
Published on

ಮಂಡ್ಯ: ಉಳುವವನಿಗೆ ಭೂಮಿ ಸೇರಿದಂತೆ ಬಡವರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೊಳಿದ ದೇವರಾಜ ಅರಸು ಅವರ ಕಾರ್ಯ ಶ್ಲಾಘನೀಯ. ಜನಪರ ಯೋಜನೆಗಳಿಂದಲೇ ಅರಸು ಅವರು ರಾಷ್ಟ್ರಾದ್ಯಂತ ಮನೆ ಮಾತಾದರು ಎಂದು ಬಿಜೆಪಿ ಮಾಜಿ ನಗರಾಧ್ಯಕ್ಷ ಎಚ್.ಆರ್.ಅರವಿಂದ್ ಬಣ್ಣಿಸಿದರು.

ನಗರದ ಸರ್ಕಾರಿ ಪ್ರೌಢಶಾಲೆ(ಮಾಜಿ ಪುರಸಭೆ) ಆವರಣದಲ್ಲಿ ಬದುಕು ಬೆಳಕು ಸೇವಾ ಸಮಿತಿ, ಮಂಡ್ಯ ಅಮೃತ ಲಯನ್ಸ್, ಸರ್ಕಾರಿ ಪ್ರೌಢಶಾಲೆ (ಮಾಜಿ ಪುರಸಭೆ) ಸಹಯೋಗದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಪತ್ರಿಕಾ ದಿನಾಚರಣೆ, ಡಿ.ದೇವರಾಜ ಅರಸು ಜನ್ಮದಿನಾಚರಣೆ ಹಾಗೂ ಮಾದಕ ವಸ್ತುಗಳ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಅರಸು ಅವರು ತಮ್ಮ ಅಧಿಕಾರಾವಧಿಯಲ್ಲಿ ರೈತರ, ದೀನದಲಿತರ ಹಾಗೂ ಹಿಂದುಳಿದ ವರ್ಗಗಳ ಪರವಾಗಿ ಅನೇಕ ಯೋಜನೆ ಜಾರಿಗೆ ತಂದರು. ಜೀತ ಪದ್ಧತಿ ನಿರ್ಮೂಲನೆ, ಉಳುವವನೆ ಭೂಮಿಯ ಒಡೆಯ ಎಂಬ ಭೂ ಸುಧಾರಣೆ ಕಾಯ್ದೆಗಳನ್ನು ಜಾರಿಗೆ ತಂದರು. ಹಿಂದುಳಿದ ವರ್ಗಗಳ ಹಾಸ್ಟೆಲ್‌ಗಳನ್ನು ನಿರ್ಮಿಸಿದರು. ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡುವ ಮೂಲಕ ಜನಮನ್ನಣೆ ಗಳಿಸಿದರು ಎಂದು ಹೇಳಿದರು.

ಸಮಾಜದಲ್ಲಿ ಪತ್ರಕರ್ತರ ಪಾತ್ರ ಅಪಾರ. ಕೆಆರ್‌ಎಸ್ ಸುತ್ತ ಗಣಿಗಾರಿಕೆ ನಿಷೇದಿಸಬೇಕು. ಟ್ರಯಲ್ ಬ್ಲಾಸ್ಟ್‌ಗೆ ಅನುಮತಿ ನೀಡಬಾರದು ಎಂದು ಮಾಧ್ಯಮಗಳಲ್ಲಿ ಪ್ರತಿಪಾದಿಸಿದ ಕಾರಣ ಇಂದು ಟ್ರಯಲ್ ಬ್ಲಾಸ್ಟ್‌ಗೆ ಅನುಮತಿ ನಿರಾಕರಿಸಿದೆ. ಇದಕ್ಕೆ ರೈತರು, ಎಲ್ಲ ಸಂಘ ಸಂಸ್ಥೆಗಳೂ ಸಹ ಪತ್ರಕರ್ತರಿಗೆ ಜತೆಯಾಗಿ ನಿಂತಿದ್ದರು. ಇಂತಹ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿರುವ ಪತ್ರಕರ್ತರ ಕಾರ್ಯವನ್ನು ಶ್ಲಾಘಿಸಿದರು.

ಅಭಿನಂದನೆ ಸ್ವೀಕರಿಸಿದ ಪತ್ರಕರ್ತ ಕೆ.ಶ್ರೀನಿವಾಸ್ ಮಾತನಾಡಿ, ಅಭಿನಂದನೆ, ಸನ್ಮಾನಗಳು ವ್ಯಕ್ತಿಗೆ ಜವಾಬ್ದಾರಿ ಮತ್ತು ಕರ್ತವ್ಯ ಹೆಚ್ಚಿಸುತ್ತದೆ. ಇದನ್ನು ಪ್ರತಿಯೊಬ್ಬರೂ ಅರಿತು ಸಮಾಜಕ್ಕೆ ತಮ್ಮ ಕೈಲಾದ ಸೇವೆ ಮಾಡುವತ್ತ ಗಮನ ಹರಿಸಬೇಕು. ಮಾದಕ ವ್ಯಸನಗಳಿಂದ ಏನೆಲ್ಲ ತೊಂದರೆಗಳಾಗುತ್ತವೆ ಎಂಬುದನ್ನು ಅರಿತು ವ್ಯಾಸಂಗದಲ್ಲಿ ತೊಡಗಿಸಿಕೊಳ್ಳುವುದರೊಂದಿಗೆ ತಮ್ಮ ಬದುಕನ್ನು ರೂಪಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಮಾದಕ ವ್ಯಸನಗಳಿಂದಾಗುವ ದುಷ್ಪರಿಣಾಮದ ಕುರಿತು ಹಿರಿಯ ಮನೋವೈದ್ಯಕೀಯ ಆಪ್ತ ಸಮಾಲೋಚಕ ಮಹಮ್ಮದ್ ಸುಹೇಲ್ ಉಪನ್ಯಾಸ ನೀಡಿದರು. ಅಮೃತ ಅಲಯನ್ಸ್ ಕ್ಲಬ್ ಅಧ್ಯಕ್ಷ ಎಂ.ಲೋಕೇಶ್, ಪತ್ರಕರ್ತ ಎ.ಎಲ್.ಬಸವೇಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net