

ಮಡಿಕೇರಿ: ಅರಸು ಅವರ ತತ್ವ ಸಂದೇಶಗಳು, ಕಾರ್ಯಕ್ರಮಗಳು ಸಾರ್ವಕಾಲಿಕವಾಗಿವೆ ಎಂದು ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಪ್ರಾಧ್ಯಾಪಕ ಡಾ.ಶ್ರೀಧರ್ ಹೆಗಡೆ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಶನಿವಾರ ಆಯೋಜಿಸಿದ್ದ ಪರಿವರ್ತನೆಯ ಹರಿಕಾರ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸುರವರ ೧೦೭ನೇ ಜನ್ಮ ದಿನಾಚರಣೆಯ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
೭೦ ರ ದಶಕದಲ್ಲಿ ಅರಸು ಅವರು ಮುಖ್ಯಮಂತ್ರಿಯಾಗಿ ಜಾರಿಗೆ ತಂದ ಕಾರ್ಯಕ್ರಮಗಳು ಇಂದಿನ ಯುವಜನರು ಅನುಭವಿಸುತ್ತಿದ್ದಾರೆ. ಅರಸು ಯುಗವೇ ಜನ ಧ್ವನಿ ಯುಗ ಎಂದರೆ ತಪ್ಪಾಗಲಾರದು. ೭೦ರ ದಶಕ ಒಂದು ರೀತಿ ಸುವರ್ಣ ಯುಗದಂತೆ ಅರಸು ಅವರ ಮುಖ್ಯಮಂತ್ರಿ ಅವಧಿಯಲ್ಲಿ ಭಾಸವಾಗುತ್ತಿತ್ತು. ಅರಸು ಅವರ ತತ್ವ ಸಂದೇಶಗಳು, ಕಾರ್ಯಕ್ರಮಗಳು ಸಾರ್ವಕಾಲಿಕವಾಗಿವೆ ಎಂದರು.
’ರಾಜ್ಯದಲ್ಲಿ ಕನ್ನಡ ಭಾಷೆಯನ್ನು ಆಡಳಿತ ಭಾಷೆಯನ್ನಾಗಿ ಜಾರಿಗೊಳಿಸಿದರು. ಅರಸು ಅವರು ಬಡವರ ರಾಜರಾಗಿದ್ದರು. ಸಮಾಜ ಸುಧಾರಣೆಗೆ ಪ್ರಯತ್ನಿಸಿದರು. ಶ್ರೀಮಂತರು ಮತ್ತು ಬಡವರ ನಡುವಿನ ಅಂತರವನ್ನು ಕಡಿಮೆ ಮಾಡಲು ಶ್ರಮಿಸಿದರು ಎಂದು ಶ್ರೀಧರ ಹೆಗಡೆ ಹೇಳಿದರು.’
ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ ಮಾತನಾಡಿ, ಡಿ.ದೇವರಾಜ ಅರಸು ಅವರು ಸರ್ವರಿಗೂ ಸಮಬಾಳು-ಸಮಪಾಲು ನೀಡಲು ಪ್ರಯತ್ನಿಸಿದರು. ಅವರ ಆಡಳಿತ ಅವಧಿಯಲ್ಲಿನ ಕಾರ್ಯಗಳು ಜನಮೆಚ್ಚುಗೆಗೆ ಪಾತ್ರವಾಗಿವೆ ಎಂದು ನುಡಿದರು.
ಡಿ.ದೇವರಾಜ ಅರಸುರವರ ಜನ್ಮ ದಿನಾಚರಣೆ ಪ್ರಯುಕ್ತ ನೀಡಲಾಗುವ ಜಿಲ್ಲಾ ಮಟ್ಟದ ಪ್ರಶಸ್ತಿಯನ್ನು ಕೊಡಗು ಜಿಲ್ಲೆಯ ವಿಕಾಸ ಜನಸೇವಾ ಟ್ರಸ್ಟ್‌ನ ರಮೇಶ್‌ರವರಿಗೆ ಪ್ರಧಾನ ಮಾಡಲಾಯಿತು.
ಅರಸು ಜಿಲ್ಲಾ ಮಟ್ಟದ ಪ್ರಶಸ್ತಿ ಪಡೆದು ಮಾತನಾಡಿದ ರಮೇಶ್, ವಿಕಾಸ ಜನಸೇವಾ ಟ್ರಸ್ಟ್ ನೊಂದವರಿಗೆ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿದೆ. ಮಡಿಕೇರಿಯಿಂದ ಕುಶಾಲನಗರಕ್ಕೆ ವಿಕಾಸ ಜನಸೇವಾ ಟ್ರಸ್ಟ್‌ನ್ನು ಸ್ಥಳಾಂತರಿಸಲಾಗಿದ್ದು, ಸಂಸ್ಥೆಯಲ್ಲಿ ೨೨ ಜನರಿಗೆ ಊಟೋಪಚಾರ ಕಲ್ಪಿಸಲಾಗುತ್ತದೆ. ಬಡವರಿಗೆ, ನಿರ್ಗತಿಕರಿಗೆ ಶಿಕ್ಷಣ, ಆರೋಗ್ಯ ಕಲ್ಪಿಸಲು ಪ್ರಯತ್ನಿಸಲಾಗುತ್ತದೆ. ಮಾನಸಿಕ ಅಸ್ವಸ್ಥರು ಹೀಗೆ ಹಲವು ಜನರಿಗೆ ಆಶ್ರಯವಾಗಿ ಕಾರ್ಯನಿರ್ವಹಿಸಲಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ಇಲಾಖೆ ವ್ಯಾಪ್ತಿಗೆ ಬರುವ ವಸತಿ ಶಾಲೆಗಳು ಮತ್ತು ವಸತಿ ನಿಲಯಗಳಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು, ಕಾಲೇಜಿನ ಪ್ರಾಂಶುಪಾಲರು ಹಾಗೂ ವಿದ್ಯಾರ್ಥಿ ನಿಲಯಗಳ ಮೇಲ್ವಿಚಾರಕರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮಡಿಕೇರಿ ಶಾಸಕರು, ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ, ಜಿ.ಪಂ.ಸಿಇಒ ಭಂವರ್ ಸಿಂಗ್ ಮೀನಾ, ಉಪ ವಿಭಾಗಾಧಿಕಾರಿ ಯತೀಶ್ ಉಳ್ಳಾಲ್, ರೆಹಾನಾ ಸುಲ್ತಾನಾ, ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್ ಇತರರು ಇದ್ದರು.
ಗಮನ ಸೆಳೆದ ವಸ್ತು ಪ್ರದರ್ಶನ
ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ೧೦೭ನೇ ಜನ್ಮ ದಿನಾಚರಣೆ ಪ್ರಯುಕ್ತ ಹಿಂದುಳಿದ ವರ್ಗಗಳ ವಿವಿಧ ಕಾಯಕ ಸಮಾಜದವರ ವಸ್ತುಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಮಡಿಕೇರಿ ಶಾಸಕರು ಚಾಲನೆ ನೀಡಿದರು.
ಕೊಡಗು ಜಿಲ್ಲಾ ಕುಲಾಲ ಕುಂಬಾರ ಮಡಿಕೆ ತಯಾರಿಕ ಸಂಘದ ಪ್ರತಿನಿಧಿಗಳಿಂದ ಮಡಿಕೆ ತಯಾರು ಮಾಡುವ ವಿಧಾನ ಆಕರ್ಷಣೀಯವಾಗಿತ್ತು. ನಗರಸಭೆಯ ವತಿಯಿಂದ ಒಣಕಸ, ಹಸಿಕಸ ಬೇರ್ಪಡಿಸುವುದು, ಪ್ಲಾಸ್ಟಿಕ್ ಬಳಸದಿರುವುದು, ಅಡಿಕೆ ತಟ್ಟೆ, ಮತ್ತಿತರವನ್ನು ಬಳಸುವುದು, ಸಾಂಬಾರು ಪದಾರ್ಥಗಳು, ತರಕಾರಿ, ಹಣ್ಣು, ಮೀನುಗಾರಿಕೆಗೆ ಸಂಬಂಧಿಸಿದ ಕಾರ್ಯಕ್ರಮಗಳು, ಕೃಷಿ, ಕಾರ್ಮಿಕ ಹಾಗೂ ಜವಳಿ ಮತ್ತು ಕೈಮಗ್ಗ ಇಲಾಖೆ ವ್ಯಾಪ್ತಿಯ ಮಳಿಗೆಗಳು ಗಮನ ಸೆಳೆದವು. ಡಿ.ದೇವರಾಜ ಅರಸುರವರ ದೂರದೃಷ್ಟಿ ಆಡಳಿತ, ಜನರೊಂದಿಗಿನ ಸ್ಪಂದನೆ, ಮೊರಾರ್ಜಿ ದೇಸಾಯಿ ಅವರೊಂದಿಗಿನ ಒಡನಾಟ, ಜನರ ಸಂಕಷ್ಟ ಆಲಿಸುವುದು, ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವುದು ಸೇರಿದಂಎತ ಮತ್ತಿತರ ಛಾಯಾಚಿತ್ರ ಪ್ರದರ್ಶನ ಗಮನ ಸೆಳೆಯಿತು.