

ಮಂಡ್ಯ: ತುಳಿತಕ್ಕೊಳಗಾದವರು, ಶೋಷಿತರು, ದನಿ ಇಲ್ಲದವರಿಗೆ ಬದುಕು ಕಟ್ಟಿಕೊಳ್ಳಲು ಶ್ರಮಿಸಿದ ಮಹಾನ್ ನಾಯಕ ಡಿ.ದೇವರಾಜ ಅರಸು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಬಣ್ಣಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ನಗರಸಭೆ ವತಿಯಿಂದ ನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಡಿ.ದೇವರಾಜ ಅರಸು ಅವರ 110ನೇ ಜನ್ಮದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಅರಸು ರಾಜ್ಯದ ಮುಖ್ಯಮಂತ್ರಿಯಾಗಿ ಈ ನಾಡಿಗೆ ಹತ್ತಾರು ಕೊಡುಗೆ ಕೊಟ್ಟಿದ್ದಾರೆ. ಸಾಮಾಜಿಕ ನ್ಯಾಯಕ್ಕೆ ಒತ್ತು ಕೊಟ್ಟ ಹರಿಕಾರ. ಹಿಂದುಳಿದ ವರ್ಗಕ್ಕೆ ಶಕ್ತಿ ನೀಡಿದ ಮಹಾನ್ ವ್ಯಕ್ತಿ. ಅವರನ್ನು ನಾವೆಲ್ಲರೂ ನೆನೆಸಿಕೊಳ್ಳಬೇಕು. ನಾನು ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದೇನೆ ಎಂದರೆ ಅದಕ್ಕೆ ಅವರು ನೀಡಿದ ಕೊಡುಗೆ ಬಿಸಿಎಂ ಹಾಸ್ಟೆಲ್ ಕಾರಣ. ವಿದ್ಯಾರ್ಥಿ ನಿಲಯ ಕೇವಲ ಕಲ್ಲಿನ ಗೋಡೆಯಲ್ಲ, ಜ್ಞಾನದ ದೇಗುಲ. ಎಷ್ಟೋ ಬಡ ಮಕ್ಕಳು ವಿದ್ಯಾಭ್ಯಾಸದಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಬಿಸಿಎಂ ವಿದ್ಯಾರ್ಥಿ ನಿಲಯಯನ್ನು ಸ್ಥಾಪನೆ ಮಾಡಿದರು ಎಂದು ವಿವರಿಸಿದರು.
ಇತಿಹಾಸದ ಕ್ರಾಂತಿಕಾರಕ ಹೆಜ್ಜೆಯಾದ ಉಳುವವನೇ ಭೂಮಿಯ ಒಡೆಯ ಎಂಬ ಭೂ ಸುಧಾರಣಾ ಕಾಯ್ದೆಯನ್ನು ಜಾರಿಗೆ ತಂದು ಇತಿಹಾಸದ ದಾಖಲೆಗಳ ಪ್ರಕಾರ 7 ಲಕ್ಷದ 70 ಸಾವಿರಕ್ಕೂ ಹೆಚ್ಚು ಜನರಿಗೆ ಸುಮಾರು 30 ಲಕ್ಷ ಹೆಕ್ಟೇರ್ ಜಾಗವನ್ನು ಕಲ್ಪಿಸಿ ಉಳುವವರ ಬದುಕಿಗೆ ಆಸೆರೆಯಾಗಿ ನಿಂತ ಏಕೈಕ ನಾಯಕ. ಮೊಟ್ಟ ಮೊದಲ ಬಾರಿಗೆ ತಲೆಯ ಮೇಲೆ ಮಲವನ್ನು ಹೊರುವ ಅನಿಷ್ಟ ಪದ್ದತಿಯನ್ನು ನಿಷೇಧಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. 60 ವರ್ಷ ಮೇಲ್ಪಟ್ಟವರು ಯಾರಿಗೂ ಕೈ ಚಾಚದೆ ಸ್ವಾಭಿಮಾನ ಬದುಕು ಕಟ್ಟಿಕೊಳ್ಳಲು ವೃದ್ಧಾಪ್ಯ ವೇತನ ಜಾರಿಗೆ ತಂದರು. ಹಳ್ಳಿಯ ಮಕ್ಕಳಿಗೆ ವಿದ್ಯಾಭ್ಯಾಸ ಮಾಡಲು ಸಹಾಕಾರಿಯಾಗುವಂತೆ ಭಾಗ್ಯ ಜ್ಯೋತಿ ಯೋಜನೆ ಮೂಲಕ ಅವರ ಬದುಕಿಗೆ ಬೆಳಕನ್ನು ಚೆಲ್ಲಿದರು ಎಂದು ಹೇಳಿದರು.
ವಿಶೇಷವಾಗಿ ಕನ್ನಡ ನಾಡು ನುಡಿ ಬಗ್ಗೆ ಅಪಾರವಾದ ಅಭಿಮಾನವನ್ನು ಬೆಳಸಿಕೊಂಡಿದ್ದ ದೇವರಾಜ ಅರಸು ಅವರು, 1973ರ ನ.1 ರಂದು ಮೈಸೂರು ಸಂಸ್ಥಾನವನ್ನು ಕರ್ನಾಟಕ ರಾಜ್ಯವೆಂದು ಮರುನಾಮಕರಣ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅಷ್ಟೇ ಅಲ್ಲದೆ ಆಡಳಿತದಲ್ಲಿ ಕನ್ನಡ ಭಾಷೆಯನ್ನು ಕಡ್ಡಾಯಗೊಳಿಸಿದ ಕೀರ್ತಿಯೂ ಸಹ ಅವರಿಗೆ ಸಲ್ಲುತ್ತದೆ. ಹಿಂದಿನ ಕಾಲದಲ್ಲಿಯೇ ನಿರುದ್ಯೋಗಿಗಳಿಗೆ ನಿರುದ್ಯೋಗ ಭತ್ಯೆ ನೀಡಿದ್ದರು. ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ವೃಕ್ಷ ಸಂರಕ್ಷಣಾ ಕಾಯ್ದೆ ಜಾರಿಗೊಳಿಸಿದರು. ಮೊಟ್ಟ ಮೊದಲು ಬಾರಿಗೆ ಹಿಂದುಳಿದ ವರ್ಗಗಳಿಗೂ ಮೀಸಲಾತಿ ಕಲ್ಪಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಕರ್ನಾಟಕ ರಾಜ್ಯ ಅಭಿವೃದ್ಧಿಯ ದೂರದೃಷ್ಟಿ ಇಟ್ಟುಕೊಂಡು ಕೆಲಸ ಮಾಡಿದ ವ್ಯಕ್ತಿ ಅವರು, ಅವರ ಆದರ್ಶ, ಚಿಂತನೆ, ಮೌಲ್ಯವನ್ನು ಅರ್ಥ ಮಾಡಿಕೊಂಡು ಅವರಂತೆ ನಾವೆಲ್ಲರೂ ಮುಂದೆ ಸಾಗೋಣ ಎಂದು ಕರೆ ನೀಡಿದರು.
ಜಿ.ಪಂ ಸಿಇಒ ಕೆ.ಆರ್.ನಂದಿನಿ ಮಾತನಾಡಿ, ಬಡವರ ಪರವಾಗಿ ಧ್ವನಿ ಎತ್ತಿದ ವ್ಯಕ್ತಿಗಳನ್ನು ನಾವು ನೆನೆಯಬೇಕು. ಜನ್ಮದಿನಾಚರಣೆಗಳನ್ನು ಹೆಸರಿಗೆ ಮಾತ್ರ ಮಾಡುವಂತದ್ದಲ್ಲ. ಆ ವ್ಯಕ್ತಿಯ ಸಾಧನೆ, ವಿಚಾರ, ಚಿಂತನೆಯನ್ನು ಮುಂದಿನ ಪೀಳಿಗೆಗೆ ತಿಳಿಸುವ ದೃಷ್ಟಿಯಿಂದ ಮಾಡುವುದು. ವಿದ್ಯಾರ್ಥಿಗಳು ಸಾಧಕರ ಜೀವನ ಚರಿತ್ರೆಯನ್ನು ಕೇವಲ ಅಂಕ ಗಳಿಸಲು ತಿಳಿದುಕೊಳ್ಳಬೇಡಿ. ಅವರ ಸಾಧನೆಗಳನ್ನು ಸದಾ ಕಾಲ ನೆನಪಿಸಿಕೊಂಡು ಮುಂದಿನ ಪೀಳಿಗೆಗೆ ಅದನ್ನು ಪರಿಣಾಮಕಾರಿಯಾಗಿ ಪರಿಚಯಿಸಿ ಎಂದು ಸಲಹೆ ನೀಡಿದರು.
ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಜಿ.ಆರ್.ಅರಸು ಮಾತನಾಡಿ, ಜನಸಂಖ್ಯೆ ಹೆಚ್ಚಾಗಿದೆ. ಎಲ್ಲರಿಗೂ ವಸತಿ ವ್ಯವಸ್ಥೆಯನ್ನು ಕಲ್ಪಿಸಬೇಕಾಗಿದೆ ಎಂದು ಬಹುಮಹಡಿ ಪರಿಕಲ್ಪನೆಯನ್ನು ತಂದವರು ಡಿ.ದೇವರಾಜ ಅರಸು ಎಂದರು.
ಆಹಾರ ಆಯೋಗದ ಅಧ್ಯಕ್ಷ ಡಾ.ಕೃಷ್ಣ, ನಗರಸಭೆ ಅಧ್ಯಕ್ಷ ನಾಗೇಶ್, ಅಪರ ಪೊಲೀಸ್ ಅಧೀಕ್ಷಕ ಗಂಗಾಧರಸ್ವಾಮಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಮಂಜುಳಾ, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್.ಸಂದೇಶ್ ಇತರರಿದ್ದರು.
ಬಿಸಿಎಂ ವಿದ್ಯಾರ್ಥಿ ನಿಲಯದಲ್ಲಿ ವ್ಯಾಸಂಗ ಮಾಡಿ ಎಸ್‌ಎಸ್‌ಎಲ್ಸಿ ಮತ್ತು ಪಿಯುಸಿ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಜಿಲ್ಲೆಯಲ್ಲಿ ಶೇ.100 ರಷ್ಟು ಲಿತಾಂಶ ನೀಡಿದ ಬಿಸಿಎಂ ವಿದ್ಯಾರ್ಥಿ ನಿಲಯಗಳ ಮೇಲ್ವಿಚಾರಕರನ್ನು ಸನ್ಮಾನಿಸಿ ಗೌರವಿಸಲಾಯಿತು. ವಿದೇಶಿ ವಿದ್ಯಾವಿಕಾಸ್ ಯೋಜನೆಯಡಿ ಜಿಲ್ಲೆಯ ಬಿ.ಎಂ.ಧನರಾಜ್ ವಿದ್ಯಾರ್ಥಿಗೆ 10 ಲಕ್ಷ ರೂ ಚೆಕ್ ನೀಡಲಾಯಿತು.
ಇದಕ್ಕೂ ಮುನ್ನ ಬೆಳ್ಳಿ ರಥದ ಮೇಲೆ ಇರಿಸಲಾಗಿದ್ದ ಡಿ.ದೇವರಾಜ ಅರಸು ಭಾವಚಿತ್ರಕ್ಕೆ ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ಕೆ.ಆರ್.ನಂದಿನಿ, ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ನಮನ ಸಲ್ಲಿಸಿ ಪುಷ್ಪಾರ್ಚನೆ ಮಾಡಿದರು. ಪೂರ್ಣ ಕುಂಭ ಹೊತ್ತ ಮಹಿಳೆಯರು, ಬೊಂಬೆ ಕುಣಿತ, ರಂಗ ಕುಣಿತ, ಡೊಳ್ಳು ಕುಣಿತ ಸೇರಿದಂತೆ ಇನ್ನಿತರ ಕಲಾ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು.