ಅಪಾಯಕಾರಿ ಸ್ಥಳಗಳಲ್ಲಿ ನಿರಂತರ ನಿಗಾವಹಿಸಲು ಜಿಲ್ಲಾಧಿಕಾರಿ ಸೂಚನೆ

mng-21may-d c meeting
Published on



ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿರುವುದರಿಂದ ಸಂಭಾವ್ಯ ನೆರೆ ಹಾಗೂ ಮುಳುಗಡೆ ಪ್ರದೇಶಗಳಲ್ಲಿ ನಿರಂತರ ನಿಗಾ ವಹಿಸುವಂತೆ ಪ್ರಭಾರ ಜಿಲ್ಲಾಧಿಕಾರಿ ಡಾ.ಕೆ. ಆನಂದ್ ಸೂಚಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ
ಅವರು ‘ ಹಿಂದಿನ ಮಳೆಗಾಲದಲ್ಲಿ ಮುಳುಗಡೆಯಾದ ಪ್ರದೇಶಗಳಲ್ಲಿ ನೀರು ನಿಲ್ಲದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು. ಅಂತಹ ಪ್ರದೇಶಗಳಿಗೆ ನಿರಂತರ ಭೇಟಿ ನೀಡಿ ನೀರಿನ ಹರಿವಿಗೆ ತಡೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.’
ಮಾನವ ನಿರ್ಲಕ್ಷದಿಂದ ಯಾವುದೇ ಪ್ರಾಣ ಹಾನಿ ಆಗದಂತೆ ಎಚ್ಚರಿಕೆ ವಹಿಸಬೇಕು. ಭೂಕುಸಿತ,ನೆರೆ ಸೇರಿದಂತೆ ಅಪಾಯಕಾರಿ ಸ್ಥಳಗಳನ್ನು ಮೊದಲೇ ಗುರುತಿಸಿ ರೆಡ್ ಅಲರ್ಟ್ ಸಮಯದಲ್ಲಿ ಅಲ್ಲಿನ ನಿವಾಸಿಗಳನ್ನು ತೆರವುಗೊಳಿಸಬೇಕು. ಪ್ರಾಕೃತಿಕ ದುರಂತ ನಡೆದರೆ ತಕ್ಷಣವೇ ಅಧಿಕಾರಿಗಳು ಸ್ಪಂದಿಸಬೇಕು. ವಿಪತ್ತು ನಿರ್ವಹಣೆ ಕಾರ್ಯದಲ್ಲಿ ನಿರ್ಲಕ್ಷೃ ವಹಿಸಿದರೆ ಯಾವುದೇ ಕಾರಣಕ್ಕೂ ಸಹಿಸಲಾಗದು. ನಿರ್ಲಕ್ಷೃ ತೋರುವ ಅಧಿಕಾರಿ ರುದ್ಧ ವಿಪತ್ತು ನಿರ್ವಹಣಾ ಕಾಯ್ದೆ ಅಡಿಯಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು
ಎಚ್ಚರಿಕೆ ನೀಡಿದರು.
ಗ್ರಾಮಕರಣಿಕರು, ಪಿಡಿಒ, ನಗರ ಸ್ಥಳೀಯ ಸಂಸ್ಥೆಗಳ ಮುಖ್ಯ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಬೇಕು. ಕಂಟ್ರೋಲ್ ರೂಂ 24 ಗಂಟೆಯೂ ಚಾಲನೆಯಲ್ಲಿರಬೇಕು . ಮಳೆಗಾಲದಲ್ಲಿ ಮರ ಹಾಗೂ ವಿದ್ಯುತ್ ಲೈನ್ ಗಳಿಂದ ಯಾವುದೇ ಸಮಸ್ಯೆ ಅಥವಾ ಪ್ರಾಣ ಹಾನಿ ಆಗದಂತೆ ಅರಣ್ಯ ಇಲಾಖೆ ಹಾಗೂ ಮೆಸ್ಕಾಂ ಕ್ರಮ ಕೈಗೊಳ್ಳಬೇಕು. ಅಪಾಯಕಾರಿ ಮರಗಳನ್ನು ತೆರವುಗೊಳಿಸಬೇಕು. ನಗರ ಸ್ಥಳೀಯ ಸಂಸ್ಥೆಗಳಲ್ಲಿ ವಾರ್ಡ್‌ವಾರು ವಿಪತ್ತು ಸಮಿತಿಗಳನ್ನು ಸಕ್ರಿಯಗೊಳಿಸಬೇಕು ಎಂದು
ಎಂದು ಡಾ. ಆನಂದ್ ಕೆ ಸೂಚಿಸಿದರು..
ಅಗ್ನಿಶಾಮಕ ಮತ್ತು ಮೆಸ್ಕಾಂ ಇಲಾಖೆಗಳು ಅಗತ್ಯ ಬಿದ್ದರೆ ಹೆಚ್ಚುವರಿ ವಾಹನ ಬಳಸಿಕೊಳ್ಳಬೇಕು. ಹೆದ್ದಾರಿಗಳಲ್ಲಿ ನೀರು ನಿಲ್ಲದಂತೆ ಎರಡು ಬದಿಗಳಲ್ಲಿ ಚರಂಡಿಗಳನ್ನು ಸ್ವಚ್ಛಗೊಳಿಸಬೇಕು. ಶಾಲೆ ಮತ್ತು ಅಂಗನವಾಡಿಗಳ ಶಿಥಿಲಗೊಂಡಿರುವ ಕಟ್ಟಡಗಳನ್ನು ಕೂಡಲೇ ತೆರವುಗೊಳಿಸಬೇಕು. ಶಾಲೆಗಳಲ್ಲಿ ಮಕ್ಕಳು ವಿದ್ಯುತ್ ಸ್ವಿಚ್, ಕೇಬಲ್‌ಗಳನ್ನು ಮುಟ್ಟದಂತೆ ಶಿಕ್ಷಕರು ನಿಗಾ ವಹಿಸಬೇಕು. ಶಿಥಿಲಗೊಂಡಿರುವ ಕೊಠಡಿಗಳಲ್ಲಿ ಯಾವುದೇ ಕಾರಣಕ್ಕೂ ಪಠ್ಯ ಪ್ರವಚನ ಮಾಡಬಾರದು ಎಂದು ಅವರು ತಿಳಿಸಿದರು.
* ಏರ್‌ಪೋರ್ಟ್ ನೀರು
ಮಂಗಳೂರು ವಿಮಾನ ನಿಲ್ದಾಣದ ರನ್ ವೇಯಿಂದ ಮಳೆ ನೀರು ತಗ್ಗು ಪ್ರದೇಶದ ಬಂದು ತೊಂದರೆಯಾಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದಿದ್ದು, ಈ ಬಗ್ಗೆ ಅಗತ್ಯ ಕ್ರಮವಹಿಸಿ ಸ್ಥಳೀಯರೊಂದಿಗೆ ವಿಶ್ವಾಸ ಮೂಡಿಸುವಂತೆ ಜಿಲ್ಲಾಧಿಕಾರಿಗಳು ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಸೂಚಿಸಿದರು. ಇದಕ್ಕೆ ಉತ್ತರಿಸಿದ ಏರ್‌ಪೋರ್ಟ್ ಅಧಿಕಾರಿಗಳು,
ರನ್ ವೇಯಲ್ಲಿ ಮಳೆ ನೀರು ಸಂಗ್ರಹವಾಗುತ್ತಿಲ್ಲ. ಈ ಸಮಸ್ಯೆ ಬಗ್ಗೆ ಎನ್‌ಐಟಿಕೆಯೊಂದಿಗೆ ತಾಂತ್ರಿಕ ಅಧ್ಯಯನ ಮಾಡಲಾಗುತ್ತಿದೆ ಎಂದು ತಿಳಿಸಿದರು.
*ಕುಡಿಯುವ ನೀರು ಪರೀಕ್ಷೆ
ನಗರ ಸ್ಥಳೀಯ ಸಂಸ್ಥೆಗಳು ಮತ್ತು ಗ್ರಾಮ ಪಂಚಾಯಿತಿ ಸರಬರಾಜು ಮಾಡುವ ಕುಡಿಯುವ ನೀರನ್ನು 15 ದಿವಸಕ್ಕೊಮ್ಮೆ ಪ್ರಯೋಗಾಲಯದಲ್ಲಿ ಪರೀಕ್ಷೆಗೊಳಪಡಿಸುವಂತೆ ಪ್ರಭಾರ ಜಿಲ್ಲಾಧಿಕಾರಿ ತಿಳಿಸಿದರು. ಕುಡಿಯುವ ನೀರಿನ ಪೈಪ್ ಹಾಗೂ ಚರಂಡಿ ನೀರು ಸಂಪರ್ಕವಾಗದಂತೆ ಗಮನಹರಿಸಬೇಕು ಎಂದು ಅವರು ತಿಳಿಸಿದರು.
ಸಾಂಕ್ರಾಮಿಕ ರೋಗಗಳು ಹರಡದಂತೆ ಕುಡಿಯುವ ನೀರು ಬಿಸಿ ಮಾಡಿ ಸೇವಿಸಲು ಆರೋಗ್ಯ ಇಲಾಖೆ ಜಾಗೃತಿ ಮೂಡಿಸಬೇಕು. ತೀವ್ರ ಮಳೆ ಸಂದರ್ಭ ಮಲೆನಾಡಿನ ಜಲಪಾತಗಳಿಗೆ ಹಾಗೂ ಸಮುದ್ರ ಕಿನಾರೆಗೆ ಪ್ರವಾಸಿಗರು ತೆರಳದಂತೆ ನಿಬರ್ಂಧ ವಹಿಸಬೇಕು. ಅಗತ್ಯವಿದ್ದರೆ ಹೋಂ ಗಾರ್ಡ್ ಅಥವಾ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.
ಮೀನುಗಾರಿಕಾ ದೋಣಿಗಳು ನದಿಗಿಳಿಯದಂತೆ ಈಗಾಗಲೇ ಸೂಚಿಸಲಾಗಿದೆ. ಮೀನುಗಾರಿಕಾ ರಜಾ ಅವಧಿಯಲ್ಲಿ ಬೋಟ್‌ನಲ್ಲಿ ಕಾರ್ಮಿಕರು ಮಲಗದಂತೆ ಸೂಚಿಸಬೇಕು. ಸಣ್ಣ ನೀರಾವರಿ ಇಲಾಖೆಯ ಅಧೀನದ ಡ್ಯಾಮ್, ಕಿರು ಅಣೆಕಟ್ಟುಗಳ ಹೂಳೆತ್ತಲು ಕ್ರಮ ಕೈಗೊಳ್ಳಬೇಕು. ಮರಳು ಹಳ್ಳಗಳಲ್ಲಿ ಮಳೆ ನೀರು ನಿಲ್ಲುವುದರಿಂದ ಮಕ್ಕಳು ಈಜಾಡಲು ಹೋಗಿ ಪ್ರಾಣ ಕಳೆದುಕೊಂಡಿರುವ ಹಲವಾರು ಘಟನೆ ನಡೆದಿದೆ. ಗಣಿ ಇಲಾಖೆ ಅಧಿಕಾರಿಗಳು ಈ ಬಗ್ಗೆ ಕಾರ್ಯ ಪ್ರವೃತ್ತರಾಗಬೇಕು ಎಂದು ಅವರು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಡಾ. ಜಿ.ಸಂತೋಷ್, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ರವಿಚಂದ್ರ ನಾಯಕ್, ಎಸಿಪಿ
ಗೀತಾ ಕುಲಕರ್ಣಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net