ಆನೇಕಲ್​ ತಾಲೂಕಿನಲ್ಲಿ ಸಿಲಿಂಡರ್​ ಕದಿಯುವ ಗ್ಯಾಂಗ್​ ಸಕ್ರಿಯ

Untitled-2
Published on

ಆನೇಕಲ್​ : ಚಂದಾಪುರ ಹಾಗೂ ಬನಹಳ್ಳಿ ಭಾಗದಲ್ಲಿ ಅಂಗಡಿಗಳು ಹಾಗೂ ಗ್ಯಾಸ್​ ಏಜೆನ್ಸಿಗಳ ಬಳಿ ಬಂದು ಗ್ರಾಹಕರಂತೆ ನಟನೆ ಮಾಡಿ ಯಾರೂ ಕಾಣಿಸದಿದ್ದರೆ ಬೈಕ್​ಗಳಲ್ಲಿ ಸಿಲಿಂಡರ್​ ಕಳವು ಮಾಡುವ ಗ್ಯಾಂಗ್​ ಸಕ್ರಿಯವಾಗಿದೆ.

ಅಂಗಡಿಗಳು ಹಾಗೂ ಹೋಟೆಲ್​ಗಳ ಒಳಗೆ ರಾಜಾರೋಷವಾಗಿ ಹೋಗಿ ಸಿಲಿಂಡರ್​ ಹೊತ್ತೊಯ್ಯುವ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಬೈಕ್​, ಆಟೋದಲ್ಲಿ ಬಂದು ಸಿಲಿಂಡರ್​ ಕಳವು ಮಾಡಲಾಗುತ್ತಿದೆ.

ಏನೂ ಗೊತ್ತಿಲ್ಲದವರಂತೆ ಬರುವ ಖದೀಮರು, ಮೊದಲು ಕೈ ಕಟ್ಟಿ ನಿಲ್ಲುತ್ತಾರೆ, ಒಬ್ಬ ಅಂಗಡಿ ಒಳಗೆ ಹೋದರೆ ಇನ್ನೊಬ್ಬ ಹೊರಗೆ ಬೈಕಿನಲ್ಲಿ ನಿಂತು ಕಾಯುತ್ತಿರುತ್ತಾನೆ, ಅಂಗಡಿ ಒಳಗೆ ನುಗ್ಗಿದವ ಸಿಲಿಂಡರ್​ ಹೊರಗೆ ತರುತ್ತಿದ್ದಂತೆಯೇ ಬೈಕಿನಲ್ಲಿ ಇಟ್ಟುಕೊಂಡು ಎಸ್ಕೇಪ್​ ಆಗುತ್ತಾರೆ. ಈ ರೀತಿ ಹಲವೆಡೆ ಕಳವು ಮಾಡಿರುವ ಪ್ರಕರಣ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕಿತ್ತಗಾನಹಳ್ಳಿ ಬಳಿ ಖಾಸಗಿ ಎಂಟರ್​ ಪ್ರೆಸಸ್​ ಗ್ಯಾಸ್​ ಅಂಗಡಿಯಲ್ಲಿ 15 ದಿನದಿಂದ ಮೂರು ಬಾರಿ ಖದೀಮರು ಸಿಲಿಂಡರ್​ ಕಳವು ಮಾಡಿದ್ದಾರೆ. ಸಂಬಂಧಪಟ್ಟವರು ಈ ಬಗ್ಗೆ ಪೊಲೀಸರಿಗೂ ಮಾಹಿತಿ ನೀಡಿದ್ದಾರೆ.

ಕನ್ನಡ ಮಾತನಾಡುವ ಈ ಗ್ಯಾಂಗ್​ ತಮಿಳುನಾಡಿನ ಡೆಂಕಣಿಕೋಟೆ ಎಂದು ಹೇಳಿಕೊಳ್ಳುತ್ತಿದ್ದು, ಒಂದು ಕಡೆ ಕದ್ದ ಸಿಲಿಂಡರ್​ ಅನ್ನು ಇನ್ನೊಂದು ಕಡೆ ಗ್ಯಾಸ್​ ಅಂಗಡಿಗೆ ಮಾರಾಟ ಮಾಡುತ್ತಿದ್ದಾರೆ. ನಾಲ್ಕೆದು ಜನರು ಈ ತಂಡದಲ್ಲಿದ್ದಾರೆ. ಬೊಮ್ಮಸಂದ್ರ, ಚಂದಾಪುರ ಭಾಗದಲ್ಲಿ ಗೆಸ್ಟ್​ ಹೌಸ್​ಗಳು ಹೆಚ್ಚಾಗಿದ್ದು, ನಾರಾಯಣ ಹೆಲ್ತ್​ ಸಿಟಿ ಅಕ್ಕ ಪಕ್ಕದಲ್ಲಿರುವ ಗೆಸ್ಟ್​ ಹೌಸ್​ಗಳಲ್ಲಿ ಖಾಲಿ ಆದ ಸಿಲಿಂಡರ್​ಗಳನ್ನು ಬಿಲ್ಡಿಂಗ್​ ಕೆಳಗೆ ತಂದು ಇಡುತ್ತಾರೆ, ಇದನ್ನೇ ಖದೀಮರು ಬಂಡವಾಳ ಮಾಡಿಕೊಂಡು ಕಳವು ಮಾಡುತ್ತಿದ್ದಾರೆ.

ಅಂಗಡಿಯವರು ಮನೆಗೆ ತಿಂಡಿ ಹಾಗೂ ಊಟಕ್ಕೆಂದು ಹೋದರೆ ಈ ಸಮಯದಲ್ಲಿ ಸಿಲಿಂಡರ್​ ಕಳವು ಮಾಡುತ್ತಿದ್ದಾರೆ, ಚಂದಾಪುರ ಸುತ್ತಮುತ್ತ ಇವರ ಉಪಟಳ ಹೆಚ್ಚಾಗಿದೆ. ಪೊಲೀಸರು ಕ್ರಮ ತೆಗೆದುಕೊಳ್ಳಬೇಕು. | ಆನಂದ್​ ಗ್ಯಾಸ್​ ಅಂಗಡಿ ಮಾಲೀಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net