

ಶಿಗ್ಗಾಂವಿ(ಗ್ರಾ): ಸರ್ಕಾರಿ ಶಾಲೆಗಳ ಅಡುಗೆ ಮನೆಯ ಬೀಗ ಮುರಿದು ಸಿಲಿಂಡರ್ ಮತ್ತು ಅಕ್ಕಿ ಮೂಟೆಗಳನ್ನು ಕಳ್ಳರು ಹೊತ್ತೊಯ್ದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
ತಾಲೂಕಿನ ಹೋತನಹಳ್ಳಿ ಸರ್ಕಾರಿ ಪ್ರೌಢಶಾಲೆ, ಚಂದಾಪುರ ಸರ್ಕಾರಿ ಪ್ರಾಥಮಿಕ ಶಾಲೆ ಮತ್ತು ಹುಲಿಕಟ್ಟಿ ಗ್ರಾಮದ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಕಳ್ಳತನ ನಡೆದಿದೆ. ಕಳ್ಳರು ಅಡುಗೆ ಮನೆಯಲ್ಲಿದ್ದ ತುಂಬಿದ 2 ಸಿಲಿಂಡರ್ ಮತ್ತು 50 ಕೆಜಿಯ ಎರಡು ಅಕ್ಕಿ ಮೂಟೆ ಹೊತ್ತೊಯ್ದಿದ್ದಾರೆ ಎಂದು ತಿಳದು ಬಂದಿದೆ.
ಎಂದಿನಂತೆ ಗುರುವಾರ ಸಂಜೆ ಶಾಲೆ ಮುಗಿದ ನಂತರ ಅಕ್ಷರ ದಾಸೋಹದ ಅಡುಗೆ ಮನೆಗಳಿಗೆ ಬೀಗ ಹಾಕಿ ತೆರಳಿದ್ದ ಶಿಕ್ಷಕರು, ಶುಕ್ರವಾರ ರಜೆಯ ನಂತರ ಶನಿವಾರ ಬೆಳಗ್ಗೆ ಶಾಲೆಗೆ ಬಂದಾಗ ಕಳ್ಳತನವಾಗಿದ್ದು ಬೆಳಕಿಗೆ ಬಂದಿದೆ.
ಸ್ಥಳಕ್ಕೆ ಭೇಟಿ ನೀಡಿದ ಪಿಎಸ್ಐ ಶಿವಾನಂದ ವನಹಳ್ಳಿ ಮತ್ತು ಸಿಬ್ಬಂದಿ ಶಿಕ್ಷಕರಿಂದ ಮಾಹಿತಿ ಪಡೆದು ತನಿಖೆ ನಡೆಸಿದ್ದಾರೆ. ಶಾಲೆ ಮಕ್ಕಳ ಅನ್ನಕ್ಕೆ ಕನ್ನ ಹಾಕಿದ ಖದೀಮರನ್ನು ಕೂಡಲೇ ಬಂಧಿಸುವಂತೆ ಗ್ರಾಮಸ್ಥರು ಪೊಲೀಸ್ ಇಲಾಖೆಗೆ ಮನವಿ ಮಾಡಿದರು. ಈ ಕುರಿತು ಬಂಕಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ.