ಕರೊನಾ ಸೋಂಕಿತರ ಪ್ರಯಾಣ ಮಾಹಿತಿ

Corona
Published on

ಬೆಳಗಾವಿ: ಜಿಲ್ಲೆಯ ಮೂವರಿಗೆ ಕರೊನಾ ಸೋಂಕು ತಗುಲಿರುವುದು ಜನರ ಆತಂಕಕ್ಕೆ ಕಾರಣವಾಗಿದೆ. ಈ ಸೋಂಕಿತರು ದೆಹಲಿಯ ನಿಜಾಮುದ್ದೀನ್ ತಬ್ಲಿಘಿ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದರು. ಅವರು ಬೆಳಗಾವಿಗೆ ಮರಳಿದ ನಂತರ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡಿದ್ದಾರೆ. ಸಾಮೂಹಿಕ ನಮಾಜ್‌ನಲ್ಲೂ ಭಾಗವಹಿಸಿದ್ದಾರೆ. ಅವರ ಪ್ರಯಾಣದ ಮಾಹಿತಿ ಜಿಲ್ಲಾಡಳಿತಕ್ಕೆ ಲಭ್ಯವಾಗಿದೆ.

37 ಜನರ ಸಂಪರ್ಕ: ಸೋಂಕು ತಗುಲಿರುವ ರಾಜ್ಯದ 126ನೇ ವ್ಯಕ್ತಿ ಮಾ. 4ರಂದು ಬೆಳಗಾವಿಯಿಂದ ದೆಹಲಿಗೆ ಸಂಪರ್ಕ ಕ್ರಾಂತಿ ರೈಲಿನಲ್ಲಿ ಪ್ರಯಾಣಿಸಿದ್ದ. ಬಳಿಕ ಅದೇ ರೈಲಿನಲ್ಲಿ ಮಾ. 19ರಂದು ಬೆಳಗಾವಿಗೆ ಆಗಮಿಸಿದ್ದ. ನಂತರ ಎಂದಿನಂತೆ ಈತ ಕಸಾಯಿಖಾನೆ ಕೆಲಸದಲ್ಲಿ ಭಾಗಿಯಾಗಿದ್ದ. ಕಸಾಯಿಖಾನೆಯಲ್ಲಿ ಸಂಪರ್ಕಕ್ಕೆ ಬಂದವರನ್ನು ಜಿಲ್ಲಾಡಳಿತ ತೀವ್ರ ಹುಡುಕಾಟ ಆರಂಭಿಸಿದೆ. ಸೋಂಕಿತನ ಜತೆಗೆ 37 ಜನ ಪ್ರಾಥಮಿಕ ಸಂಪರ್ಕ ಹೊಂದಿದ್ದ ಮಾಹಿತಿ ಕಲೆ ಹಾಕಿರುವ ಜಿಲ್ಲಾಡಳಿತ, ಅವರ ಗಂಟಲು ದ್ರವವನ್ನು ಪರೀಕ್ಷೆಗೆ ರವಾನಿಸಿದೆ.

ಐವರ ಮೇಲೆ ನಿಗಾ: ಸೋಂಕು ತಗುಲಿರುವ ರಾಜ್ಯದ 127ನೇ ವ್ಯಕ್ತಿ ಮಾ. 9ರಂದು ಬೆಳಗಾವಿಯಿಂದ ಸಂಪರ್ಕ ಕ್ರಾಂತಿ ರೈಲಿನಲ್ಲಿ ದೆಹಲಿಗೆ ಪ್ರಯಾಣ ಮಾಡಿದ್ದು, ಮಾ. 11ರಿಂದ ಮಾ. 18ರ ವರೆಗೆ ದೆಹಲಿಯಲ್ಲಿ ವಾಸ್ತವ್ಯ ಹೂಡಿದ್ದ. ನಿಜಾಮುದ್ದೀನ್ ಮರ್ಕಜ್ ಮಸೀದಿಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಭಾಗಿಯಾಗಿದ್ದ. ಮಾ. 18ರಂದು ಸಂಪರ್ಕ ಕ್ರಾಂತಿ ರೈಲಿನ ಮೂಲಕ ಬೆಳಗಾವಿಗೆ ವಾಪಸ್ ಆಗಿದ್ದನು. ಕುಟುಂಬದ ಐವರ ಸಂಪರ್ಕವನ್ನು ಪ್ರಾಥಮಿಕ ಸಂಪರ್ಕ ಎಂದು ಪರಿಗಣಿಸಿ, ಅವರ ಮೇಲೆ ಆರೋಗ್ಯ ಇಲಾಖೆ ತೀವ್ರ ನಿಗಾ ಇರಿಸಿದೆ.

9 ಜನರಿಗೆ ಕ್ವಾರಂಟೈನ್: ಸೋಂಕು ತಗುಲಿರುವ ರಾಜ್ಯದ 128ನೇ ವ್ಯಕ್ತಿ ಫೆ. 12ರಂದು ಬೆಳಗಾವಿಯಿಂದ ದೆಹಲಿಗೆ ರೈಲಿನಲ್ಲಿ ತೆರಳಿದ್ದನು. ದೆಹಲಿಯಿಂದ ಖಾಸಗಿ ವಾಹನದಲ್ಲಿ ಉತ್ತರ ಪ್ರದೇಶದ ಚೇಕಡಾ ಗ್ರಾಮಕ್ಕೆ ಪ್ರಯಾಣ ಬೆಳೆಸಿ, 36 ದಿನಗಳ ಕಾಲ ಚೇಕಡಾ ಗ್ರಾಮದ ಬಿಲಾಲ್ ಮಸೀದಿಯಲ್ಲಿ ವಾಸವಿದ್ದನು. ಮಾ. 21ರಂದು ಉತ್ತರ ಪ್ರದೇಶದಿಂದ ದೆಹಲಿಗೆ ಸಂಪರ್ಕ ಕ್ರಾಂತಿ ರೈಲಿನಲ್ಲಿ ತೆರಳಿದ್ದ ಮಾ. 22ರಂದು ಬೆಳಗಾವಿಗೆ ಆಗಮಿಸಿದ್ದ ಈತ, ಟಾಟಾ ಏಸ್ ವಾಹನದಲ್ಲಿ ಸ್ವ ಗ್ರಾಮಕ್ಕೆ ಬಂದಿದ್ದನು. ಅಲ್ಲದೆ, ಗ್ರಾಮದ ಮಸೀದಿಯೊಂದರಲ್ಲಿ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗಿಯಾಗಿದ್ದ. ಈತನ ಜತೆಗೆ ತಂದೆ-ತಾಯಿ ಸೇರಿ 9 ಜನರನ್ನು ಆಸ್ಪತ್ರೆಯಲ್ಲಿ ಕ್ವಾರಂಟೈನ್‌ನಲ್ಲಿರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net