

ಶಿಗ್ಗಾಂವಿ: ಮನೆಯಲ್ಲಿನ ಅಡುಗೆ ಅನಿಲದ ಸಿಲಿಂಡರ್ ಸ್ಪೋಟಗೊಂಡು ಚಿನ್ನ, ಬೆಳ್ಳಿ, ಬಟ್ಟೆ ಬೆಂಕಿಗೆ ಆಹುತಿಯಾದ ಘಟನೆ ಬುಧವಾರ ತಡರಾತ್ರಿ ತಾಲೂಕಿನ ಹೊಸೂರಎತ್ತಿನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಹೊಸೂರಎತ್ತಿನಹಳ್ಳಿ ಗ್ರಾಮದ ಇಮಾಮಹುಸೇನ್ ಮಾಬೂಸಾಬ್ ಬಾಡದ ಎಂಬುವವರ ಮನೆಯಲ್ಲಿ ತಡರಾತ್ರಿ ಮನೆಯಲ್ಲಿನ ಅಡುಗೆ ಅನಿಲದ ಸಿಲಿಂಡರ್ ಸ್ಪೋಟಗೊಂಡಿದೆ. ಮನೆಯಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನ, ಬೆಳ್ಳಿ, ಬಟ್ಟೆ ಹಾಗೂ ಹಣ ಸುಟ್ಟು ಕರಕಲಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ, ಬೆಂಕಿ ನಂದಿಸಿದರು.
ಮದುವೆ ತಯಾರಿಯಲ್ಲಿದ್ದವರಿಗೆ ಆಘಾತ: ಕೂಲಿ ಕಾರ್ವಿುಕ ಇಮಾಮಹುಸೇನ್ ಅವರ ಮಗನ ಮದುವೆ ನಿಶ್ಚಯವಾಗಿತ್ತು. ಮದುವೆಗೆ ಇನ್ನು 15 ದಿನ ಇತ್ತು. ಅಷ್ಟರಲ್ಲಿ ಸಿಲಿಂಡರ್ ಸ್ಪೋಟಗೊಂಡು ಲಗ್ನಕ್ಕೆ ಖರೀದಿಸಿದ ಬಂಗಾರ, ಬಟ್ಟೆ ಸುಟ್ಟು ಭಸ್ಮವಾಗಿದೆ. ಮಗನ ಮದುವೆ ತಯಾರಿಯಲ್ಲಿದ್ದ ಕುಟುಂಬದವರಿಗೆ ಘಟನೆಯಿಂದ ಆಘಾತಗೊಂಡಿದ್ದಾರೆ. ಘಟನೆ ಕುರಿತು ತಡಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.