

ಆನೇಕಲ್: ನೆರಳೂರಿನ ರಾಘವ ನಗರದಲ್ಲಿ ಸೋಮವಾರ ಬೆಳ್ಳಂಬೆಳಗ್ಗೆ ಅಡುಗೆ ಅನಿಲ ಸಿಲಿಂಡರ್ ಸ್ಫೋಟಗೊಂಡು ಮನೆ ಛಿದ್ರವಾಗಿದ್ದು, ವ್ಯಕ್ತಿ ಗಂಭೀರ ಗಾಯಗೊಂಡಿದ್ದಾನೆ.
ಬಿಹಾರ ಮೂಲದ ದಿನೇಶ್ ದಾಸ್(38) ಗಂಭೀರ ಗಾಯಗೊಂಡಿದ್ದು, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಖಾಸಗಿ ಕಂಪನಿಯಲ್ಲಿ ದಿನೇಶ್‌ದಾಸ್ ಕೆಲಸ ಮಾಡುತ್ತಿದ್ದು, ಕ್ರಾಂತಿ ಮುನಿರಾಜು ಎಂಬುವರ ಮನೆಯಲ್ಲಿ ವಾಸವಿದ್ದ. ಸೋಮವಾರ ಬೆಳಗ್ಗೆ 7.10ರ ಸಮಯದಲ್ಲಿ ಕಾಫಿ ಮಾಡಲು ಮುಂದಾದಾಗ ಸಿಲಿಂಡರ್ ಇದ್ದಕ್ಕಿದ್ದಂತೆ ಸ್ಫೋಟಗೊಂಡು ಮನೆಯ ಛಾವಣಿಗೆ ಹಾಕಿದ್ದ ಸಿಮೆಂಟ್ ಶೀಟು ಛಿದ್ರಗೊಂಡಿವೆ. ದಿನೇಶ್ ದಾಸ್ ದೇಹಕ್ಕೆ ಶೇ.30 ಬೆಂಕಿ ತಗುಲಿದ್ದು, ಅಕ್ಕಪಕ್ಕದ ನಿವಾಸಿಗಳು ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನಿಸಿದ್ದಾರೆ.
ಅತ್ತಿಬೆಲೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದು, ರಾತ್ರಿ ಗ್ಯಾಸ್ ಲೀಕೇಜ್ ಆಗಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ.