ಬೋಟ್‌ನಲ್ಲಿ ಸಿಲಿಂಡರ್ ಸ್ಫೋಟ,

boat
Published on

ಮಂಗಳೂರು: ಸಮುದ್ರ ಮಧ್ಯೆ ಮೀನುಗಾರಿಕಾ ದೋಣಿಯಲ್ಲಿ ಸಿಲಿಂಡರ್ ಸ್ಫೋಟಕೊಂಡು ಅಪಾಯಕ್ಕೆ ಸಿಲುಕಿದ್ದ 11 ಮೀನುಗಾರರನ್ನು ಕರಾವಳಿ ರಕ್ಷಣಾ ಪಡೆ ರಕ್ಷಿಸಿದೆ.

ತಮಿಳುನಾಡು ಮೂಲದ ಮೀನುಗಾರಿಕಾ ನೌಕೆ ಮಂಗಳೂರಿನಿಂದ 140 ನಾಟಿಕಲ್ ಮೈಲಿ ಪಶ್ಚಿಮದಲ್ಲಿ ಮೀನುಗಾರಿಕೆ ನಡೆಸುತ್ತಿದ್ದು, ಆ ವೇಳೆ ಗ್ಯಾಸ್ ಸಿಲಿಂಡರ್ ಸ್ಫೋಟದಿಂದಾಗಿ ಬೋಟ್‌ನಲ್ಲಿ ಬೆಂಕಿ ಆವರಿಸಿದೆ. ಈ ಬಗ್ಗೆ ದೋಣಿಯವರಿಂದ ಅಪಾಯದ ಸಂದೇಶ ಕೋಸ್ಟ್‌ಗಾರ್ಡ್‌ಗೆ ತಲಪಿದೆ.

ತಕ್ಷಣವೇ ಮುಂಬೈ ಕರಾವಳಿ ರಕ್ಷಣಾ ಪಡೆಯಿಂದ ಸಾಚೇತ್ ಮತ್ತು ಸುಜೀತ್ ಎನ್ನುವ ಎರಡು ಕಾವಲು ನೌಕೆಗಳನ್ನು ಸಹಾಯಕ್ಕಾಗಿ ಕಳುಹಿಸಲಾಯಿತು. ಅಪಾಯಕ್ಕೆ ಸಿಲುಕಿದ್ದ ಬೋಟ್‌ನ ತ್ವರಿತ ಪತ್ತೆಗಾಗಿ ಡಾರ್ನಿಯರ್ ವಿಮಾನವನ್ನೂ ಕಳುಹಿಸಲಾಯಿತು. ಬೋಟ್ ಪತ್ತೆ ಮಾಡಿದ್ದಲ್ಲದೆ ಮೀನುಗಾರರ ನೌಕೆಯೊಂದಿಗೆ ಸಂವಹನ ಸಾಧಿಸಿ ಧೈರ್ಯ ತುಂಬಲಾಯಿತು.

ಅದೇ ಸ್ಥಳಕ್ಕೆ ಕೋಸ್ಟ್‌ಗಾರ್ಡ್ ನೌಕೆಗಳೆರಡೂ ತಲುಪಿದ್ದು ತಕ್ಷಣವೇ ತೀವ್ರ ಗಾಯಗೊಂಡ ಒಬ್ಬರನ್ನು ಪ್ರಥಮ ಚಿಕಿತ್ಸೆಗೊಳಪಡಿಸಿ ಕೋಸ್ಟ್‌ಗಾರ್ಡ್ ನೌಕೆಗೆ ಸ್ಥಳಾಂತರಿಸಲಾಯಿತು.

ಗಾಯಗೊಂಡ ಒಬ್ಬ ಮೀನುಗಾರ ಹಾಗೂ ಇತರ ಮೂವರನ್ನು ನವಮಂಗಳೂರು ಬಂದರಿಗೆ ಕರೆತರಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net