

ಬೆಂಗಳೂರು: ಅರಬ್ಬಿ ಸಮುದ್ರದ ಉತ್ತರ ಭಾಗದಲ್ಲಿ ಉಂಟಾಗಿರುವ ‘ಶಕ್ತಿ’ ಚಂಡಮಾರುತದಿಂದ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ವಾರಪೂರ್ತಿ ಗುಡುಗು ಸಹಿತ ಮಳೆಯಾಗಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ.
ದ್ವಾರಕಾದಿಂದ ಪಶ್ಚಿಮಕ್ಕೆ ಅಂದಾಜು 470 ಕಿಮೀ ಹಾಗೂ ನಲಿಯಾದಿಂದ ಪಶ್ಚಿಮ-ನೈಋತ್ಯ ದಿಕ್ಕಿನ 470 ಕಿಮೀ ದೂರದಲ್ಲಿ ಪ್ರಸ್ತುತ ಮಾರುತಗಳಿದ್ದು, ಭಾನುವಾರ(ಅ.5) ವಾಯುವ್ಯ ಮತ್ತು ಪಶ್ಚಿಮದ ಅರೇಬಿಯನ್ ಸಮುದ್ರದತ್ತ ಚಲಿಸಲಿದೆ. ನಂತರ, ಮತ್ತೆ ತಿರುಗಿ ಪೂರ್ವ-ಈಶಾನ್ಯ ದಿಕ್ಕಿಗೆ ಚಲಿಸುವ ಮಾರುತಗಳು, ಸೋಮವಾರ ಬೆಳಗ್ಗೆ ಸಮುದ್ರದಲ್ಲೇ ದುರ್ಬಲಗೊಳ್ಳಲಿವೆ. ಈ ಮಾರುತಗಳು ಯಾವುದೇ ಪ್ರದೇಶಕ್ಕೆ ಅಪ್ಪಳಿಸುವುದಿಲ್ಲ. ಹಾಗಾಗಿ, ಸೈಕ್ಲೋನ್‌ನಿಂದ ಅಷ್ಟೇನೂ ಪರಿಣಾಮ ಬೀರಲ್ಲ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮಾಹಿತಿ ನೀಡಿದೆ.
ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಹಾಸನ, ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು, ಬೆಂಗಳೂರು ನಗರ, ಬೆಂ.ಗ್ರಾಮಾಂತರ, ಬೆಂ.ದಕ್ಷಿಣ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ, ಧಾರವಾಡ, ಬೆಳಗಾವಿ ಮತ್ತು ವಿಜಯಪುರ ಸೇರಿ ಉತ್ತರ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಅ.5ರಿಂದ ಅ.11ರವರೆಗೆ ಗುಡುಗು ಸಹಿತ ಮಳೆಯಾಗಲಿದೆ. ಈ ಅವಧಿಯಲ್ಲಿ ಕೆಲವೆಡೆ ಮಳೆಗಿಂತ ಬಿರುಗಾಳಿ ಜಾಸ್ತಿ ಇರಲಿದೆ.
ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ಸೈಕ್ಲೋನ್‌ನಿಂದ ರಾಜ್ಯಕ್ಕೆ ಹೆಚ್ಚು ಪರಿಣಾಮ ಬೀರುವುದಿಲ್ಲ. ಬೆಂಗಳೂರು ನಗರ ಸೇರಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣದೊಂದಿಗೆ ಸಾಧಾರಣ ಮಳೆಯಾಗಲಿದೆ. ಅ.15ರಂದು ನೈಋತ್ಯ ಮಾನ್ಸೂನ್ ಕೊನೆಗೊಳ್ಳುವ ಸಾಧ್ಯತೆ ಇದೆ. ನಂತರ, ಈಶಾನ್ಯ ಮಾನ್ಸೂನ್ ಶುರುವಾಗಲಿದೆ.
-ಸಿ.ಎಸ್.ಪಾಟೀಲ್, ರಾಜ್ಯ ಹವಾಮಾನ ಇಲಾಖೆ ನಿರ್ದೇಶಕ.