

ಭರತ್ ಶೆಟ್ಟಿಗಾರ್ ಮಂಗಳೂರು
ಅರಬ್ಬಿ ಸಮುದ್ರದಲ್ಲಿ ಈ ವರ್ಷ ಚಂಡಮಾರುತಗಳ ಪ್ರಮಾಣ ಕಡಿಮೆಯಿರಲಿದೆ ಎನ್ನುವ ಹವಾಮಾನದ ತಜ್ಞರ ಅಭಿಮತ ಕರೊನಾದ ನಡುವೆಯೂ ಕರಾವಳಿ ಭಾಗದ ಜನರಿಗೆ ಖುಷಿ ನೀಡುವ ಸುದ್ದಿಯಾಗಲಿದೆ.
ಬಂಗಾಳಕೊಲ್ಲಿಗೆ ಹೋಲಿಸಿದರೆ, ಅರಬ್ಬಿ ಸಮುದ್ರದಲ್ಲಿ ಚಂಡಮಾರುತಗಳ ಸೃಷ್ಟಿ ಕಡಿಮೆ. ಆದರೆ ಕಳೆದ ವರ್ಷ ಕಾಣಿಸಿಕೊಂಡ ಐದು ಚಂಡಮಾರುತ, ಅದರ ಪ್ರಭಾವದಿಂದ ಅಬ್ಬರಿಸಿ ಮಳೆ ಮೊದಲ ಬಾರಿ ಕರಾವಳಿಗರ ಆತಂಕಕ್ಕೆ ಕಾರಣವಾಗಿತ್ತು. ಈ ಬಾರಿಯೂ ಅದೇ ರೀತಿ ಮುಂದುವರಿಯಲಿದೆಯೇ ಎನ್ನುವ ಪ್ರಶ್ನೆಗೆ ಹವಾಮಾನ ಇಲಾಖೆ ಈಗಿರುವ ಹವಾಮಾನ ಸ್ಥಿತಿಗತಿ ಪ್ರಕಾರ ‘ಸಾಧ್ಯತೆ ಕಡಿಮೆ’ ಎನ್ನುವ ಉತ್ತರ ನೀಡಿದೆ.
ಕಳೆದ ವರ್ಷ ಅರಬ್ಬಿ ಸಮುದ್ರ ಮತ್ತು ಬಂಗಾಳ ಕೊಲ್ಲಿಯಲ್ಲಿ ಒಂದರ ಹಿಂದೆ ಒಂದರಂತೆ ಒಟ್ಟು ಎಂಟು ಚಂಡಮಾರುತ ಕಾಣಿಸಿ, ಜನರನ್ನು ಒಂದು ಹಂತಕ್ಕೆ ಭೀತರನ್ನಾಗಿಸಿತ್ತು. ಅದರಲ್ಲೂ ಅರಬ್ಬಿ ಸಮುದ್ರದಲ್ಲಿ ಅತ್ಯಧಿಕ ಐದು ಚಂಡಮಾರುತ ಸೃಷ್ಟಿಯಾಗಿ ಸಾರ್ವಕಾಲಿಕ ದಾಖಲೆ ನಿರ್ಮಾಣವಾಗಿದೆ. ಈ ಬಾರಿಯೂ ಅಧಿಕ ಸಂಖ್ಯೆಯಲ್ಲಿ ಚಂಡಮಾರುತಗಳು ಏಳುವ ಸಾಧ್ಯತೆಯಿದೆ, ಆದರೆ ಬಹುತೇಕ ಬಂಗಾಳಕೊಲ್ಲಿಯ ಪಾಲಾಗಲಿವೆ ಎಂದು ಹವಾಮಾನ ತಜ್ಞರು ಅಭಿಪ್ರಾಯಪಡುತ್ತಾರೆ.
ರಾಜ್ಯದೆಲ್ಲೆಡೆ ಈಗಾಗಲೇ ಬೇಸಿಗೆ ಮಳೆ ಸುರಿಯುತ್ತಿದ್ದು, ಮಾರ್ಚ್ ತಿಂಗಳಿಗಿಂತ ಏಪ್ರಿಲ್ ತಿಂಗಳಲ್ಲಿ ಸ್ವಲ್ಪ ಬಿರುಸಾಗಿದೆ. ಸಾಮಾನ್ಯ ವಾಗಿ ಮಾರ್ಚ್‌ನಿಂದ ಜೂನ್‌ವರೆಗಿನ ಅವಧಿಯನ್ನು ಪೂರ್ವ ಮುಂಗಾರು ಅವಧಿ ಎನ್ನಲಾಗುತ್ತದೆ. ಈ ಬಾರಿ ಬಿಸಿಲು ವಾಡಿಕೆಗಿಂತ ಕೆಲವು ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಾಗಿದೆ. ಸಮುದ್ರದಲ್ಲಿ ಟ್ರಫ್(ಕಡಿಮೆ ಒತ್ತಡ) ಉಂಟಾಗಿದ್ದು, ಬಿಸಿಲೂ ಹೆಚ್ಚಿರುವುದರಿಂದ ಮೋಡಗಳೂ ಹೆಚ್ಚಿನ ಪ್ರಮಾಣದಲ್ಲಿ ಉಂಟಾಗುತ್ತಿದೆ.
ಕಳೆದ ವರ್ಷ ಮಳೆಗಾಲಕ್ಕೆ ಮುನ್ನ ಬಂಗಾಳ ಕೊಲ್ಲಿಯಲ್ಲಿ ಎರಡು ಚಂಡಮಾರುತ ಸೃಷ್ಟಿಯಾಗಿತ್ತು. ಮಳೆಗಾಲ ಆರಂಭದಲ್ಲಿ ಅರಬ್ಬಿ ಸಮುದ್ರದಲ್ಲಿ ಕಾಣಿಸಿಕೊಂಡ ‘ವಾಯು’ ಸೈಕ್ಲೋನ್, ಪಶ್ಚಿಮ ಕರಾವಳಿಯ ಮೊದಲ ಚಂಡಮಾರುತವಾಗಿ ಮುಂಗಾರನ್ನೇ ದೂರಮಾಡಿತ್ತು. ಈ ಬಾರಿಯೂ ಬಂಗಾಳ ಕೊಲ್ಲಿಯಿಂದಲೇ ಚಂಡಮಾರುತಗಳು ಆರಂಭವಾಗಲಿವೆ. ಅರಬ್ಬಿ ಸಮುದ್ರದಲ್ಲೇನಿದ್ದರೂ, ಸೆಪ್ಟೆಂಬರ್ ತಿಂಗಳ ನಂತರ ಕಾಣಿಸಿಕೊಳ್ಳಲಿವೆ. ಕಡಿಮೆ ಒತ್ತಡ ಪ್ರದೇಶಗಳು ನಿರ್ಮಾಣವಾದರೂ, ಅವು ಚಂಡಮಾರುತವಾಗಿ ಬದಲಾಗುವ ಸಾಧ್ಯತೆ ಕಡಿಮೆ.
2019ರ ಚಂಡಮಾರುತ ಅರಬ್ಬಿ ಸಮುದ್ರದಲ್ಲಿ ಮುಂಗಾರು ಅವಧಿಯಲ್ಲಿ ‘ವಾಯು’ ಮುಂಗಾರಿನ ಬಳಿಕ ‘ಹಿಕಾ’ ‘ಕ್ಯಾರ್’,‘ಮಹಾ’, ‘ಪವನ್’ ಚಂಡಮಾರುತಗಳು ಕಾಣಿಸಿಕೊಂಡಿತ್ತು. ಬಂಗಾಳ ಕೊಲ್ಲಿಯಲ್ಲಿ ವರ್ಷಾರಂಭದಲ್ಲೇ ‘ಪಾಬುಕ್’, ಮುಂಗಾರು ಪೂರ್ವದಲ್ಲಿ ‘ಫನಿ’ ಹಾಗೂ ಈಶಾನ್ಯ ಮುಂಗಾರಿನಲ್ಲಿ ‘ಬುಲ್‌ಬುಲ್’ ಚಂಡಮಾರುತ ಎದ್ದಿವೆ. ‘ಫನಿ’ ಒರಿಸ್ಸಾ ಕರಾವಳಿಗೆ ಅಪ್ಪಳಿಸಿ ವ್ಯಾಪಕ ಹಾನಿಗೆ ಕಾರಣವಾಗಿತ್ತು.
ಅರಬ್ಬಿ ಸಮುದ್ರದಲ್ಲಿ ಈ ಮುಂಗಾರು ಅವಧಿಯಲ್ಲಿ ಚಂಡಮಾರುತ ಕಡಿಮೆ. ಕಳೆದ ವರ್ಷ ಮುಂಗಾರು ಆರಂಭದ ವೇಳೆಯಲ್ಲೇ ವಾಯು ಚಂಡಮಾರುತ ಉಂಟಾದ ಪರಿಣಾಮ ಮುಂಗಾರು ವಿಳಂಬವಾಗಿತ್ತು. ಈಶಾನ್ಯ ಮುಂಗಾರು ಅವಧಿಯಲ್ಲಿ ಕರ್ನಾಟಕ ಕರಾವಳಿಯಲ್ಲಿ ಚಂಡಮಾರುತಗಳು ಸೃಷ್ಟಿಯಾಗುವುದು ಸಾಮಾನ್ಯ. ಈ ವೇಳೆ ಪೂರಕ ವಾತಾವರಣ ನಿರ್ಮಾಣವಾಗುತ್ತದೆ. ಸುನೀಲ್ ಗಾವಸ್ಕರ್ ಕೆಎಸ್‌ಎನ್‌ಡಿಎಂಸಿ ವಿಜ್ಞಾನಿ