ಸೈಕ್ಲೋನ್ ಪ್ರಭಾವ ಘಟ್ಟಪ್ರದೇಶದಲ್ಲಿ ಮಳೆ : ಕರಾವಳಿ, ಮಲೆನಾಡಲ್ಲಿ 3 ದಿನ ಜೋರು

rain
Published on

ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಸೋಮವಾರ ಸೈಕ್ಲೋನ್ ಆಗಿ ರೂಪುಗೊಳ್ಳುವ ಸಾಧ್ಯತೆ ಇದೆ.

ಇದರ ಪರಿಣಾಮದಿಂದ ಘಟ್ಟಪ್ರದೇಶಗಳ ವ್ಯಾಪ್ತಿಯ ಜಿಲ್ಲೆಗಳಲ್ಲಿ ಮುಂದಿನ 3 ದಿನ ಬಿರುಸಾಗಿ ಮಳೆ ಸುರಿಯಲಿದೆ. ಚಂಡಮಾರುತವು ಮಂಗಳವಾರ (ಅ.28) ಇನ್ನಷ್ಟು ತೀವ್ರಗೊಳ್ಳಲಿದ್ದು, ಈ ಹಿನ್ನೆಲೆಯಲ್ಲಿ ಕರ್ನಾಟಕದ ಕರಾವಳಿ, ಆಂಧ್ರಪ್ರದೇಶದ ರಾಯಲಸೀಮಾ, ತಮಿಳುನಾಡು, ಕೇರಳ, ತೆಲಂಗಾಣ, ಒಡಿಶಾ ಮತ್ತು ಛತ್ತೀಸ್‌ಗಢದಲ್ಲಿ ಮುಂದಿನ 3-4 ದಿನ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮಾಹಿತಿ ನೀಡಿದೆ.

ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಯಲ್ಲಿ ಮುಂದಿನ 3 ದಿನ ಜೋರು ಮಳೆಯಾಗುವುದರಿಂದ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಕರಾವಳಿಯ ಸಮುದ್ರ ತೀರದಲ್ಲಿ ಗಂಟೆಗೆ 60 ಕಿಮೀ ವೇಗದಲ್ಲಿ ಗಾಳಿ ಬೀಸುವುದರಿಂದ ಮೀನುಗಾರಿಕೆ ನಡೆಸದಂತೆ ಇಲಾಖೆ ಎಚ್ಚರಿಕೆ ಕೊಟ್ಟಿದೆ.

ಚಿಕ್ಕಮಗಳೂರು, ಶಿವಮೊಗ್ಗದಲ್ಲಿ ಅ.28ರಿಂದ ಮುಂದಿನ 2 ದಿನ, ಹಾಸನ, ಬೆಳಗಾವಿ, ಧಾರವಾಡದಲ್ಲಿ ಅ.28 ಮತ್ತು ಕೊಡಗಿನಲ್ಲಿ ಅ.29ರಂದು ಗುಡುಗು ಸಹಿತ ಧಾರಾಕಾರ ಮಳೆಯಾಗುವುದರಿಂದ ಯೆಲ್ಲೋ ಅಲರ್ಟ್ ಕೊಡಲಾಗಿದೆ. ಬೆಂ.ಗ್ರಾಮಾಂತರ, ಬೆಂ.ದಕ್ಷಿಣ, ಮಂಡ್ಯ, ಮೈಸೂರು, ಚಾಮರಾಜನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು. ಚಿತ್ರದುರ್ಗ. ಬೀದರ್, ಬಾಗಲಕೋಟೆ, ಗದಗ, ಹಾವೇರಿ, ಕಲಬುರಗಿ ಸೇರಿ ಉತ್ತರ ಕರ್ನಾಟಕ ಇತರ ಜಿಲ್ಲೆಗಳಲ್ಲಿ ಮುಂದಿನ 5 ದಿನ ಸಾಧಾರಣ ವರ್ಷಧಾರೆಯಾಗಲಿದೆ.

ಬೆಂಗಳೂರು ನಗರದಲ್ಲಿ ಮುಂದಿನ 2 ದಿನ ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ. ಈ ಅವಧಿಯಲ್ಲಿ ಹಗುರ ಮಳೆಯಾಗುವ ಸಂಭವ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 27 ಡಿ.ಸೆ.ಮತ್ತು 20 ಡಿ.ಸೆ. ದಾಖಲಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net