ಬಸ್ ಹರಿದು ಸೈಕಲ್ ಸವಾರ ಸಾವು

ಬಸ್ ಹರಿದು ಸೈಕಲ್ ಸವಾರ ಸಾವು
Published on

ಕೆ.ಆರ್.ನಗರ: ತಾಲೂಕಿನ ಹಂಪಾಪುರ ಗ್ರಾಮದ ಬಸ್ ನಿಲ್ದಾಣದಲ್ಲಿ ಬುಧವಾರ ಸೈಕಲ್ ಸವಾರನ ಮೇಲೆ ಕೆಎಸ್‌ಆರ್‌ಟಿಸಿ ಬಸ್ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಂಪಾಪುರದ ಚಂದಾವರಶೆಟ್ಟಿ (70) ಮೃತರು.

ಎಂದಿನಂತೆ ಬೆಳಗ್ಗೆ ಚಂದಾವರಶೆಟ್ಟಿ ಡೇರಿಗೆ ಹಾಕಲು ಹಾಲನ್ನು ಸೈಕಲ್‌ನಲ್ಲಿ ಕೊಂಡೊಯ್ಯುತ್ತಿದ್ದರು. ಹಾಸನ-ಮೈಸೂರು ಹೆದ್ದಾರಿ ಬದಿಯ ಬಸ್ ನಿಲ್ದಾಣದ ಬಳಿ ಹಾಸನ ಕಡೆಯಿಂದ ವೇಗವಾಗಿ ಬಂದ್ ಬಸ್ ಡಿಕ್ಕಿ ಹೊಡೆದಿದೆ. ಬಸ್ ಚಾಲಕ ಇನ್ನೊಂದು ವಾಹನವನ್ನು ಹಿಂದಿಕ್ಕುವ ಭರದಲ್ಲಿ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.

ಬಸ್ ಡಿಕ್ಕಿ ರಭಸಕ್ಕೆ ಚಂದಾವರಶೆಟ್ಟಿ ಬಸ್ ಚಕ್ರದಡಿ ಸಿಲುಕಿದ್ದು, ತಲೆ ಹಾಗೂ ಬಲ ಕಾಲಿನ ಮೇಲೆ ಚಕ್ರ ಹರಿದ ಪರಿಣಾಮ ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಬಸ್ ಅಲ್ಲಿಯೇ ನಿಲ್ಲಿಸಿ ಚಾಲಕ ಮತ್ತು ಕಂಡಕ್ಟರ್ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಚಂದಾವರಶೆಟ್ಟಿ ಮಗ ನಾಗೇಶ್ ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮೃತರಿಗೆ ಪತ್ನಿ ಹಾಗೂ ನಾಲ್ವರು ಮಕ್ಕಳಿದ್ದಾರೆ.

ಗ್ರಾಮಸ್ಥರ ಪ್ರತಿಭಟನೆ: ಅಪಘಾತದ ಸ್ಥಳಕ್ಕೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಬರಬೇಕೆಂದು ಪಟ್ಟು ಹಿಡಿದ ಗ್ರಾಮಸ್ಥರು ಹಾಸನ- ಮೈಸೂರು ಹೆದ್ದಾರಿ ಸಂಚಾರ ತಡೆ ನಡೆಸಿದರು. ಕೆ.ಆರ್.ನಗರ ಪೊಲೀಸ್ ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್ ಎಸ್.ಶಿವಪ್ರಕಾಶ್ ಸಿಬ್ಬಂದಿ ಜತೆ ಸ್ಥಳಕ್ಕಾಗಮಿಸಿ ಗ್ರಾಮಸ್ಥರ ಜತೆ ಚರ್ಚಿಸಿದರು. ಬಳಿಕ ಕೆಎಸ್‌ಆರ್‌ಟಿಸಿ ಘಟಕದ ವ್ಯವಸ್ಥಾಪಕ ಮಹೇಶ್ ಅವರನ್ನು ಸ್ಥಳಕ್ಕೆ ಕರೆಸಲಾಯಿತು. ಬಸ್ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ವಹಿಸಿ ದೂರು ದಾಖಲಿಸುವುದಾಗಿ ಅವರು ಗ್ರಾಮಸ್ಥರಿಗೆ ಭರವಸೆ ನೀಡಿದರು.

ಅಲ್ಲದೆ ಮೃತ ವ್ಯಕ್ತಿ ಕುಟುಂಬದವರಿಗೆ ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಿದರು. ಜತೆಗೆ ಸ್ಥಳದಲ್ಲೇ 25 ಸಾವಿರ ರೂ.ಗಳನ್ನು ಶವಸಂಸ್ಕಾರಕ್ಕಾಗಿ ನೀಡಿದರು.

ವಿದ್ಯಾರ್ಥಿಗಳ ಪರದಾಟ: ಗ್ರಾಮಸ್ಥರು ರಸ್ತೆ ಸಂಚಾರ ತಡೆದಿದ್ದರಿಂದ ಬುಧವಾರ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ತೆರಳುತ್ತಿದ್ದ ವಿದ್ಯಾರ್ಥಿಗಳು ಪರದಾಡಿದರು. ಅಲ್ಲದೆ ಕೆಲವು ವಿದ್ಯಾರ್ಥಿಗಳು ತಮ್ಮ ಪಾಲಕರನ್ನು ಕರೆಸಿಕೊಂಡು ಬೈಕ್, ಇತರ ವಾಹನಗಳಲ್ಲಿ ತಡವಾಗಿ ಪರೀಕ್ಷಾ ಕೇಂದ್ರಕ್ಕೆ ತೆರಳಿದರು ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net