

ಯಳಂದೂರು: ಪಟ್ಟಣದ ಎಸ್‌ಡಿವಿಎಸ್ ವಿದ್ಯಾಸಂಸ್ಥೆ ವಿದ್ಯಾರ್ಥಿಗಳು ಮಂಗಳವಾರ ವಿಶ್ವ ಸೈಕಲ್ ದಿನಾಚರಣೆ ಅಂಗವಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸೈಕಲ್ ತುಳಿಯುವ ಮೂಲಕ ಜಾಗೃತಿ ಮೂಡಿಸಿದರು.
ಶಾಲೆಯಿಂದ ಸೈಕಲ್‌ನಲ್ಲಿ ಶಿಕ್ಷಕರೊಂದಿಗೆ ಸಾಲಾಗಿ ತೆರಳಿದ ವಿದ್ಯಾರ್ಥಿಗಳು, ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಪಟ್ಟಣದ ಬಸ್ ನಿಲ್ದಾಣದ ಬಳಿ ನಿಂತು ಧ್ವನಿವರ್ಧಕ ಮೂಲಕ ಘೋಷಣೆ ಕೂಗಿ ಸೈಕಲ್ ತುಳಿಯುವುದರಿಂದಾಗುವ ಪ್ರಯೋಜನಗ ಬಗ್ಗೆ ಜಾಗೃತಿ ಮೂಡಿಸಿದರು.
ಕನ್ನಡ ಶಿಕ್ಷಕ ಗುಂಬಳ್ಳಿ ಬಸವರಾಜು ಮಾತನಾಡಿ, ಸೈಕಲ್ ಪರಿಸರ ಸ್ನೇಹಿ ವಾಹನವಾಗಿದೆ. ಇದು ಯಾವುದೇ ಇಂಧನ ಅಥವಾ ಹೊಗೆ ಬಿಡದ ವಾಹನವಾಗಿದೆ. ಸೈಕಲ್ ತುಳಿಯುವುದು ಉತ್ತಮ ವ್ಯಾಯಾಮವಾಗಿದ್ದು, ಇದರಿಂದ ಕಾಲಿನ ಸ್ನಾಯುಗಳು ಸದೃಢಗೊಳ್ಳುತ್ತದೆ. ಜತೆಗೆ ದೇಹದಲ್ಲಿರುವ ಅಧಿಕ ಕೊಬ್ಬಿನಾಂಶವೂ ಕರಗುತ್ತದೆ. ಹೃದಯದ ಆರೋಗ್ಯಕ್ಕೂ ಇದು ಸಹಕಾರಿಯಾಗಿದೆ ಎಂದರು.
ಪ್ರಸ್ತುತ ಸಣ್ಣ ಕೆಲಸಗಳಿಗೂ ದ್ವಿಚಕ್ರ ವಾಹನ ಬಳಕೆ ಹೆಚ್ಚಾಗಿದೆ. ಅಂತರ ಕಡಿಮೆಯಿರುವ ಕಡೆಗೆ ನಾವು ಸೈಕಲ್ ಬಳಸಿದ್ದಲ್ಲಿ ಪರಿಸರ ಮಾಲಿನ್ಯ ತಡೆಗಟ್ಟಬಹುದು. ಇದರಿಂದ ನಮ್ಮ ಪರಿಸರ ಶುದ್ಧವಾಗುವುದರ ಜತೆಗೆ ದೇಹಕ್ಕೆ ವ್ಯಾಯಾಮವೂ ಲಭಿಸುತ್ತದೆ. ಹಾಗಾಗಿ ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿ ಸೈಕಲ್ ಸವಾರಿ ಮಾಡಬೇಕು. ಆ ಮೂಲಕ ಸೈಕಲ್‌ಗಳನ್ನು ಹೆಚ್ಚು ಬಳಸುವಂತಾಗಬೇಕು ಎಂದು ಸಲಹೆ ನೀಡಿದರು.
ಇದಕ್ಕೂ ಮುನ್ನ ಜಾಥಾಗೆ ವಿದ್ಯಾಸಂಸ್ಥೆ ಅಧ್ಯಕ್ಷ ವಿ.ಮಲ್ಲಿಕಾರ್ಜುನಸ್ವಾಮಿ ಚಾಲನೆ ನೀಡಿದರು. ದೈಹಿಕ ಶಿಕ್ಷಕರಾದ ಮಹಾದೇವ, ಬಂಗಾರು ಸೇರಿದಂತೆ ಅನೇಕರು ಇದ್ದರು.