ಸೈಕಲ್ ಟ್ರಾೃಕ್ ಗೆ ಬೇಕು ವರ್ಷ !

city problems (7)
Published on

| ಮಂಜುನಾಥ ಕೋಳಿಗುಡ್ಡ ಬೆಳಗಾವಿ

ನಗರದಲ್ಲಿ ಕಿರಿದಾದ ರಸ್ತೆಗಳು, ಸಂಚಾರ ದಟ್ಟಣೆ ಹಾಗೂ ಫುಟ್‌ಪಾತ್ ತೊಂದರೆಯಿಂದ ನಾಗರಿಕರು ಪ್ರತ್ಯೇಕ ಸೈಕಲ್ ಟ್ರಾೃಕ್, ಫುಟ್‌ಪಾತ್‌ಗಾಗಿ ಇನ್ನೂ ಒಂದು ವರ್ಷ ಕಾಯಬೇಕು. ಮತ್ತೊಂದೆಡೆ ಸ್ಮಾರ್ಟ್‌ಸಿಟಿ ರಸ್ತೆ ಕಾಮಗಾರಿಗಳ ವಿಳಂಬವೇ ಮುಂದಿನ ಯೋಜನೆಗಳಿಗೆ ತೊಡಕಾಗಿದೆ.

ಕೇಂದ್ರ ಸರ್ಕಾರದ ಸ್ಮಾರ್ಟ್‌ಸಿಟಿ ಯೋಜನೆಯಡಿ ಸುಮಾರು 33 ಕೋಟಿ ರೂ. ವೆಚ್ಚದಲ್ಲಿ 31 ಕಿ.ಮೀ. ಸೈಕಲ್ ಟ್ರಾೃಕ್ ಹಾಗೂ ಫುಟ್‌ಪಾತ್ ನಿರ್ಮಾಣ ಯೋಜನೆ ಹಾಕಿಕೊಂಡಿದೆ. ಆದರೆ, ಇಲ್ಲಿಯವರೆಗೆ ಅಶೋಕ ವೃತ್ತದಿಂದ ಸುರಭಿ ಹೋಟೆಲ್‌ವರೆಗೆ ಸುಮಾರು 1.4 ಕಿ.ಮೀ. ಸೈಕಲ್ ಟ್ರಾೃಕ್ ಪೂರ್ಣಗೊಂಡಿದೆ. ಇನ್ನುಳಿದ ಕಡೆ ಸೈಕಲ್ ಟ್ರಾೃಕ್ ಕಾಮಗಾರಿ ನಡೆಯುತ್ತಿದ್ದು, ವರ್ಷ ಕಳೆದರೂ 31 ಕಿ.ಮೀ.ಉದ್ದದ ಸೈಕಲ್ ಪಥ ಪೂರ್ಣಗೊಳ್ಳುವುದು ಕನಸಿನ ಮಾತಾಗಿದೆ.

6 ಕಾಮಗಾರಿ ಪೂರ್ಣ: ಮಾಲಿನ್ಯ ಕಡಿಮೆ ಮಾಡುವ ಪ್ರಯತ್ನ ಹಾಗೂ ಆರೋಗ್ಯಕ್ಕೆ ಒತ್ತು ನೀಡುವ ಜತೆಗೆ ಸೈಕಲ್ ಸವಾರಿಯ ಖುಷಿ ಒಟ್ಟಿಗೆ ಸಿಗುವಂತೆ ಮಾಡುವುದು ಸೈಕಲ್ ಟ್ರಾೃಕ್‌ನ ಮುಖ್ಯ ಆಶಯವಾಗಿದೆ. ಆದರೆ, ಸ್ಮಾರ್ಟ್‌ಸಿಟಿ ಯೋಜನೆಯಡಿ ನಗರದಲ್ಲಿ 568 ಕೋಟಿ ರೂ.ಅನುದಾನದಲ್ಲಿ ಕೈಗೆತ್ತಿಕೊಂಡಿರುವ ಕಾಮಗಾರಿಗಳ ಪೈಕಿ 4.53 ಕೋಟಿ ರೂ. ವೆಚ್ಚದ 6 ಕಾಮಗಾರಿಗಳು ಮಾತ್ರ ಪೂರ್ಣಗೊಂಡಿವೆ. ಇನ್ನೂ 226.50 ಕೋಟಿ ರೂ.ವೆಚ್ಚದ 6 ಕಾಮಗಾರಿ ಪ್ರಗತಿ ಹಂತದಲ್ಲಿವೆ. ಹಾಗಾಗಿ ಈ ಕಾಮಗಾರಿಗಳು ಪೂರ್ಣಗೊಳ್ಳುವವರೆಗೂ ಸಾರ್ವಜನಿಕರು ಓಡಾಡಲು ಸೈಕಲ್ ಟ್ರಾೃಕ್ ಹಾಗೂ ಫುಟ್‌ಪಾತ್ ಸೌಲಭ್ಯಕ್ಕಾಗಿ ಕಾಯಬೇಕು. ಈಗಾಗಲೇ ಸ್ಮಾಟ್‌ಸಿಟಿ ಯೋಜನೆಯಡಿ ಕೈಗೊಂಡಿರುವ ರಸ್ತೆ ಕಾಮಗಾರಿ ಹೊರತುಪಡಿಸಿ ನಗರದ ಇನ್ನಿತರ ಕಡೆ ಅಗಲವಾದ ರಸ್ತೆಗಳಿರುವಲ್ಲಿ ಸೈಕಲ್ ಟ್ರಾೃಕ್, ಫುಟ್‌ಪಾತ್ ನಿರ್ಮಾಣ ಮಾಡಲಾಗುವುದು. ಆದರೆ, ಸದ್ಯ ವಿವಿಧ ಕಡೆ ರಸ್ತೆ, ಒಳಚರಂಡಿ, ಹೆಸ್ಕಾಂ ಮಾರ್ಗದ ಕಾಮಗಾರಿಗಳು ಪ್ರಗತಿ ಹಂತದಲ್ಲಿರುವ ಹಿನ್ನೆಲೆಯಲ್ಲಿ ಎಲ್ಲ ಕೆಲಸಗಳು ಪೂರ್ಣಗೊಂಡ ಬಳಿಕ ಎಲ್ಲ ಕಡೆ ಏಕಕಾಲದಲ್ಲಿ ಸೈಕಲ್ ಟ್ರಾೃಕ್ ನಿರ್ಮಿಸಿ ಚಾಲನೆ ಸಿಗಲಿದೆ. ಸೈಕಲ್ ಟ್ರಾೃಕ್ ನಿರ್ಮಾಣದ ಬಳಿಕ ಅದನ್ನು ನಿರ್ವಹಣೆ ಮಾಡಲು 9 ಕೋಟಿ ರೂ.ವೆಚ್ಚದಲ್ಲಿ ಸಾರ್ವಜನಿಕ ಸಹಭಾಗಿತ್ವದಲ್ಲಿ ಕೈಗೊಳ್ಳಲಾಗುವುದು ಎಂದು ಸ್ಮಾರ್ಟ್‌ಸಿಟಿ ಇಂಜಿನಿಯರ್‌ಗಳು ತಿಳಿಸಿದ್ದಾರೆ.

1.5 ಮೀಟರ್ ಅಗಲ: ಸ್ಮಾರ್ಟ್‌ಸಿಟಿ ಯೋಜನೆಯಡಿ ಅನುಷ್ಠಾನಗೊಳ್ಳಲಿರುವ ಬೈಸಿಕಲ್ ಸರ್ವಿಸ್ ನೆಟ್‌ವರ್ಕ್ ಯೋಜನೆ ಅನುಷ್ಠಾನಕ್ಕೆ ಸುಮಾರು 68 ಕೋಟಿ ರೂ.ಅನುದಾನ ಲಭ್ಯವಿದೆ. ಇದಕ್ಕಾಗಿ ನಗರದಲ್ಲಿ 31 ಕಿ.ಮೀ.ಉದ್ದದ ಸೈಕಲ್ ಪಥದಲ್ಲಿ 1.5 ಮೀಟರ್ ಅಗಲದ ಪ್ರತ್ಯೇಕ ಮಾರ್ಗ ರಚಿಸಲಾಗುವುದು. ಇಲ್ಲಿ ಸೈಕಲ್‌ನಲ್ಲಿ ಮಾತ್ರ ಸಂಚಾರ ನಡೆಸಬೇಕು. ವಿವಿಧ ಕಡೆ ಸ್ಟೇಷನ್‌ಗಳನ್ನು ನಿರ್ಮಿಸಲಾಗುತ್ತಿದ್ದು, ಮೊಬೈಲ್ ಆ್ಯಪ್ ಮೂಲಕ ಆನ್‌ಲೈನ್ ಪೇಮಿಂಟ್ ಮಾಡಿ ಸೈಕಲ್ ಪಡೆಯಬಹುದು.

ಎಲ್ಲೆಲ್ಲಿ ಸೈಕಲ್ ಟ್ರಾೃಕ್‌ಗಳು

ಬೆಳಗಾವಿ ನಗರದ ವಾಲ್ಮೀಕಿ ವೃತ್ತದಿಂದ ಕೆಎಲ್‌ಇ ಶಾಲೆ ವರೆಗೆ, ಹಿಂಡಲಗಾ ಗಣಪತಿ ಮಂದಿರದಿಂದ ಎಪಿಎಂಸಿ ಜಂಕ್ಷನ್, ಕಂಗ್ರಾಳಿ ಕ್ರಾಸ್‌ನಿಂದ ಅಜಂ ನಗರ ವೃತ್ತ, ಸದಾಶಿವ ನಗರ ವೃತ್ತದಿಂದ ಕೆಎಲ್‌ಇ ಶಾಲೆ ವರೆಗೆ, ಸದಾಶಿವ ನಗರ ಕ್ರಾಸ್‌ನಿಂದ ಇನ್ಮಾರ್ಕ್ ಷೋರೂಂ, ಬಾಕ್ಸೈಟ್ ರಸ್ತೆಯಿಂದ ಹನುಮಾನ ನಗರ ಕ್ರಾಸ್‌ವರೆಗೆ, ಅಶೋಕ ವೃತ್ತದಿಂದ ಸುರಭಿ ಹೋಟೆಲ್ ವರೆಗೆ ಸೈಕಲ್ ಟ್ರಾೃಕ್ ಜತೆಗೆ ಫುಟ್‌ಪಾತ್ ಸೌಲಭ್ಯವೂ ಒಳಗೊಂಡಿವೆ.

ಸ್ಮಾರ್ಟ್‌ಸಿಟಿ ಯೋಜನೆಯಡಿ ಎಲ್ಲ ಕಡೆ ಕಾಮಗಾರಿ ಕೈಗೊಳ್ಳಲಾಗಿದೆ. ಮುಂದಿನ 9 ತಿಂಗಳಲ್ಲಿ ಸೈಕಲ್ ಟ್ರಾೃಕ್ ಕಾಮಗಾರಿ ಆರಂಭವಾಗಲಿದೆ. ವಿದ್ಯಾರ್ಥಿಗಳಿಗೆ ಹೆಚ್ಚು ಬಳಕೆಗಾಗಿ ಶಾಲಾ-ಕಾಲೇಜು ಬಳಿ, ಬಸ್ ನಿಲ್ದಾಣ ಸೇರಿ ಸಾರ್ವಜನಿಕರಿಗೆ ಅನುಕೂಲವಾಗುವ ಸ್ಥಳಗಳಲ್ಲಿ ಸೈಕಲ್ ಟ್ರಾೃಕ್ ನಿರ್ಮಿಸಲು ಯೋಜನೆ ಹಾಕಿಕೊಳ್ಳಲಾಗಿದೆ. | ಶಶಿಧರ ಕುರೇರ ಸ್ಮಾರ್ಟ್‌ಸಿಟಿ ವ್ಯವಸ್ಥಾಪಕ ನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net