ಮೂವರು ಸೈಕಲ್ ಕಳ್ಳರ ಬಂಧನ, 1.5 ಲಕ್ಷ ರೂ. ಮೌಲ್ಯದ 9 ಸೈಕಲ್ ವಶ

cycle
Published on

ಮಂಗಳೂರು: ಉರ್ವ ಮಾರುಕಟ್ಟೆ ಬಳಿಯ ಅಪಾರ್ಟ್‌ಮೆಂಟ್‌ನಿಂದ ಕಳವಾದ ಸುರತ್ಕಲ್ ಸಂಚಾರ ಠಾಣಾ ಇನ್‌ಸ್ಪೆಕ್ಟರ್ ಶರೀಫ್ ಅವರ ಪುತ್ರನ ಸೈಕಲ್ ಕಳವು ಪ್ರಕರಣದ ಆರೋಪಿ ಸಹಿತ ಮೂವರು ಸೈಕಲ್ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ.

ಹಾವೇರಿಯ ಹನುಮಂತ(30), ಶಿವಮೊಗ್ಗದ ಮಂಜುರಾಜ್(29) ಹಾಗೂ ಮಂಗಳೂರು ಕುತ್ತಾರ್‌ನ ಶಂಕರ್ ಶೆಟ್ಟಿ(66) ಬಂಧಿತರು. ಆರೋಪಿಗಳಿಂದ ಈ ಹಿಂದೆ ಕಳವು ಮಾಡಲಾದ ಸೈಕಲ್‌ಗಳೂ ಸೇರಿ ಒಟ್ಟು 1.5 ಲಕ್ಷ ರೂ. ಮೌಲ್ಯದ 9 ಸೈಕಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಶರೀಫ್ ಅವರು ನಗರದ ಉರ್ವ ಮಾರುಕಟ್ಟೆ ಬಳಿ ಇರುವ ಚೈತನ್ಯ ಅಪಾರ್ಟ್‌ಮೆಂಟ್‌ನಲ್ಲಿ ಫ್ಲಾೃಟ್ ಹೊಂದಿದ್ದು, ಕಟ್ಟಡದ ಪಾರ್ಕಿಂಗ್ ಸ್ಥಳದಲ್ಲಿ ಇರಿಸಲಾಗಿದ್ದ ಸೈಕಲ್ ಕಳವುಗೈಯ್ಯಲಾಗಿತ್ತು. ಕಳ್ಳ ಅದೇ ದಿನ ಪಕ್ಕದ ಇನ್ನೊಂದು ಅಪಾರ್ಟ್‌ಮೆಂಟ್ ಒಳಗೂ ನುಗ್ಗಿದ್ದು, ಅಲ್ಲಿ ಕಳವಿಗಾಗಿ ಹುಡುಕಾಟ ನಡೆಸಿದ್ದ ಚಿತ್ರಣ ಕೂಡ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಸಿಸಿಟಿವಿ ದೃಶ್ಯಾವಳಿಯನ್ನಾಧರಿಸಿ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ತಾವು ಕದ್ದ ಸೈಕಲ್‌ಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿ, ಅದರಿಂದ ಬಂದ ಹಣದಲ್ಲಿ ಜೂಜಾಡುವುದು ಹಾಗೂ ಕುಡಿಯಲು ಬಳಸುತ್ತಿದ್ದುದಾಗಿ ಪೊಲೀಸ್ ವಿಚಾರಣೆ ವೇಳೆ ಆರೋಪಿಗಳು ಬಾಯ್ಬಿಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net