ಸೈಕಲ್ ಬಳಕೆಯಿಂದ ಬೊಜ್ಜಿನ ಸಮಸ್ಯೆಗೆ ಪರಿಹಾರ

15-JUNE-GPT-1-
ಗುಂಡ್ಲುಪೇಟೆ ಪಟ್ಟಣದಲ್ಲಿ ಆಯೋಜಿಸಿದ್ದ ಸೈಕಲ್ ರ‌್ಯಾಲಿಗೆ ಕೆ.ಎನ್.ಮಹದೇವಸ್ವಾಮಿ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು. ರಮೇಶ್, ಡಾ.ಚಂದ್ರಶೇಖರ್, ಮಂಜುನಾಥ್, ಚಿಕ್ಕಶೆಟ್ಟಿ, ದೊಡ್ಡಪ್ಪಾಜಿ ಇದ್ದರು.
Published on

ಗುಂಡ್ಲುಪೇಟೆ: ಎಲ್ಲರೂ ಆರೋಗ್ಯಕ್ಕಾಗಿ ಸೈಕಲ್ ಬಳಕೆ ಮಾಡುವುದರಿಂದ ಬೊಜ್ಜುತನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹಿರಿಯ ಉಪನ್ಯಾಸಕ ರಮೇಶ್ ಹೇಳಿದರು.

ಪಟ್ಟಣದಲ್ಲಿ ಸಾಯಿ ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ, ಕಾಲೇಜು ಶಿಕ್ಷಣ ಇಲಾಖೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕಾರ್ಯನಿರತ ಪತ್ರಕರ್ತರ ಸಂಘ, ಪೊಲೀಸ್ ಮತ್ತು ಆರೋಗ್ಯ ಇಲಾಖೆ, ವಿವಿಧ ಶಾಲಾ- ಕಾಲೇಜುಗಳು ಮತ್ತು ಸಂಘ- ಸಂಸ್ಥೆಗಳು ಆಶ್ರಯದಲ್ಲಿ ಭಾನುವಾರ ಆಯೋಜಿಸಿದ್ದ ಸೈಕಲ್ ರ‌್ಯಾಲಿ ಉದ್ಘಾಟಿಸಿ ಮಾತನಾಡಿದರು.

ಯುವ ಜನತೆಯಲ್ಲಿ ಹೆಚ್ಚುತ್ತಿರುವ ಬೊಜ್ಜುತನದಿಂದ ನಾನಾ ಆರೋಗ್ಯದ ಸಮಸ್ಯೆಗಳು ಎದುರಾಗುತ್ತಿವೆ. ಸೈಕಲ್ ಬಳಕೆಯಿಂದ ಪರಿಸರ ಮತ್ತು ಹೃದಯದ ಆರೋಗ್ಯದ ರಕ್ಷಣೆ ಮಾಡಿಕೊಳ್ಳಬಹುದು. ಇದಕ್ಕಾಗಿ ಕೇಂದ್ರ ಸರ್ಕಾರದ ನಿರ್ದೇಶನ ಮೇರೆಗೆ ಕಾಲೇಜು ಶಿಕ್ಷಣ ಸಂಸ್ಥೆಯು ಚಿತ್ರದುರ್ಗ, ಕಲಬುರಗಿ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ವಿದ್ಯಾರ್ಥಿಗಳಿಗೆ ಸೈಕಲ್ ರ‌್ಯಾಲಿ ಆಯೋಜಿಸಿದ್ದು ಇದರಲ್ಲಿ 10 ವರ್ಷ ಮೇಲ್ಪಟ್ಟ ಸುಮಾರು 230 ಜನರು ಪಾಲ್ಗೊಂಡಿರುವುದು ಸಂತಸ ತಂದಿದೆ ಎಂದು ಹೇಳಿದರು.

ಕಾರ್ಯಕ್ರಮದ ಆಯೋಜಕ, ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಕೆ.ಚಂದ್ರಶೇಖರ್ ಮಾತನಾಡಿ, ಇಂದಿನ ಸೈಕಲ್ ರ‌್ಯಾಲಿಯಲ್ಲಿ ಹೆಚ್ಚಿನ ಯುವಜನತೆ ಪಾಲ್ಗೊಂಡಿದ್ದರಿಂದ ಸಾಯಿ ಸ್ಪೋರ್ಟ್ಸ್ ಸಂಸ್ಥೆಯು 500 ಸೈಕಲ್‌ಗಳನ್ನು ಕೊಡುಗೆಯಾಗಿ ನೀಡಲು ಒಪ್ಪಿಗೆ ನೀಡಿದೆ ಎಂದು ಹೇಳಿದರು.

ಕಾಲೇಜಿನ ಪ್ರಾಂಶುಪಾಲೆ ಡಾ.ಜಿ.ಬಿ.ಪವಿತ್ರಾ, ಇಂಗ್ಲಿಷ್ ಮುಖ್ಯಸ್ಥ ಮಂಜುನಾಥ್, ಕನ್ನಡ ಪ್ರಾಧ್ಯಾಪಕ ಎಚ್.ಆರ್. ರವಿಕುಮಾರ್, ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಕೆ.ಎನ್.ಮಹದೇವಸ್ವಾಮಿ, ನಿರ್ದೇಶಕ ಭೈರೇಶ್ ಗಾಣಿಗ್, ದೈಹಿಕ ಶಿಕ್ಷಣ ಶಿಕ್ಷಕರಾದ ಚಿಕ್ಕಶೆಟ್ಟಿ, ಭರತ್, ದೊಡ್ಡಪ್ಪಾಜಿ, ಸ್ವಾಮಿ, ಚಂದ್ರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net