ಆರೋಗ್ಯಪೂರ್ಣ ಜನತೆಯೇ ದೇಶದ ಸಂಪತ್ತು, ಡಾ.ಗಣಪತಿ ಎಚ್.ಎ. ಆಶಯ

jatha
Published on

ಹೆಬ್ರಿ: ಆರೋಗ್ಯಪೂರ್ಣ ಜನತೆ ನಮ್ಮ ದೇಶದ ನಿಜವಾದ ಸಂಪತ್ತು, ಆ ನಿಟ್ಟಿನಲ್ಲಿ ನಮ್ಮ ಆರೋಗ್ಯದ ಕಡೆಗೆ ನಾವೇ ಗಮನ ನೀಡಬೇಕಾಗಿದೆ. ಸೈಕಲ್ ಸವಾರಿ ಒಳ್ಳೆಯ ಆರೋಗ್ಯಕ್ಕೆ ದಾರಿದೀಪ ಎಂದು ಹೆಬ್ರಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಗಣಪತಿ ಎಚ್.ಎ. ಹೇಳಿದರು.

ಹೆಬ್ರಿಯ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ರಾಧಾಕೃಷ್ಣ ನಾಯಕ್ ವೇದಿಕೆಯಲ್ಲಿ ಭಾನುವಾರ ಆಯೋಜಿಸಲಾದ ಸೀತಾನದಿ ಸೌಖ್ಯಯೋಗ ಟ್ರಸ್ಟ್‌ನ 4ನೇ ಮತ್ತು ಸ್ವಸ್ಥ ಸಮಾಜದಿಂದ ಬಲಿಷ್ಠ ಭಾರತದ ಹೊಣೆಹೊತ್ತ ಹೆಬ್ಬೇರಿ ಬೈಸಿಕಲ್ ಆರ್ಗನೈಸೇಶನ್ ಆಪ್ ಇಂಡಿಯಾ-ಹೆಬ್ರಾಯ್‌ಯ ಪ್ರಥಮ ವಾರ್ಷಿಕೋತ್ಸವ ಸಂಭ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಬೆಂಗಳೂರು ಸೋಹಮ್ ವೆಲ್‌ನೆಸ್ ಸಂಸ್ಥೆಯ ಉಪಾಧ್ಯಕ್ಷ ಡಾ.ನರೇಂದ್ರ ಆರೋಗ್ಯದ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.

ಹೆಬ್ರಿ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದ ಮುಖ್ಯಸ್ಥ ಡಾ.ಸಂತೋಷ್ ಕುಮಾರ್ ಮಾತನಾಡಿ, ಕೋವಿಡ್ 19ರ ನಿಯಮವನ್ನು ಎಲ್ಲರೂ ಸರಿಯಾಗಿ ಪಾಲಿಸಿ ಕರೊನಾ ಮುಕ್ತ ಹೆಬ್ರಿಯ ಮೂಲಕ ಭಾರತದಿಂದ ಕರೊನಾವನ್ನು ದೂರ ಮಾಡೋಣ ಎಂದರು.

ಹೆಬ್ರಿ ತಾಲೂಕಿನ ಪ್ರಥಮ ತಹಸೀಲ್ದಾರ್ ಆಗಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಹೆಬ್ರಾಯ್ ಸದಸ್ಯ ಕೆ.ಮಹೇಶಚಂದ್ರ ಸನ್ಮಾನ ಸ್ವೀಕರಿಸಿ ಮಾತನಾಡಿ, ಹೆಬ್ರಿ ಜನತೆ ನೀಡಿದ ಪ್ರೀತಿ ಗೌರವಕ್ಕೆ ಋಣಿಯಾಗಿದ್ದೇನೆ ಎಂದರು.

ಮುಂಜಾನೆ ನಡೆದ ಬೃಹತ್ ಸೈಕಲ್ ಜಾಥಾಕ್ಕೆ ಹೆಬ್ರಿ ತಹಸೀಲ್ದಾರ್ ಕೆ.ಪುರಂದರ್ ಚಾಲನೆ ನೀಡಿದರು.

ಪದಾಧಿಕಾರಿಗಳ ಪದಗ್ರಹಣದಲ್ಲಿ ಹೆಬ್ರಾಯ್ ಅಧ್ಯಕ್ಷರಾಗಿ ದಿನಕರ ಪ್ರಭು ಅಯ್ಕೆಗೊಂಡರು. ಸೀತಾನದಿ ಸೌಖ್ಯಯೋಗ ಟ್ರಸ್ಟ್ ಅಧ್ಯಕ್ಷ ಸೀತಾನದಿ ವಿಠ್ಠಲ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನೆಹರು ಯುವ ಕೇಂದ್ರದ ಜಿಲ್ಲಾ ಸಮನ್ವಯ ಅಧಿಕಾರಿ ವಿಲ್ಫ್ರೆಡ್ ಡಿಸೋಜ, ಉದ್ಯಮಿ ಹರ್ಷ ಶೆಟ್ಟಿ, ಹೆಬ್ರಾಯ್ ಗೌರವಾಧ್ಯಕ್ಷ ಡಾ.ರಾಮಚಂದ್ರ ಭಟ್ ಇದ್ದರು. ಹೆಬ್ರಾಯ್ ಕಾರ್ಯದರ್ಶಿ ದಿನಕರ ಪ್ರಭು ಸ್ವಾಗತಿಸಿ ಶಿಕ್ಷಕ ನಿತ್ಯಾನಂದ ಶೆಟ್ಟಿ ನಿರೂಪಿಸಿದರು.

150 ಸೈಕಲ್ ಭಾಗಿ: ಜಾಥಾದಲ್ಲಿ ಸುಮಾರು 150 ಸೈಕಲ್ಗಳು ಭಾಗಿಯಾಗಿದ್ದವು. ಹುಟ್ಟಿನಿಂದಲೇ ಕಾರು, ಬೈಕು ಮತ್ತು ಸ್ಕೂಟರ್ ಉಪಯೋಗಿಸದೆ ಸೈಕಲ್ ಪ್ರಯಾಣ ಮಾಡಿದ 11 ಮಂದಿಯನ್ನು ಗೌರವಿಸಲಾಯಿತು. ಅಲ್ಲದೆ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಸೈಕಲ್ ರಿಪೇರಿ ಅಂಗಡಿಯವರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net