

ಗೋಣಿಕೊಪ್ಪ: ಶ್ರೀ ಕಾವೇರಿ ದಸರಾ ಸಮಿತಿಯ 46ನೇ ವರ್ಷದ ದಸರಾ ಜನೋತ್ಸವದ ಅಂಗವಾಗಿ ಶನಿವಾರ ಯುವ ದಸರಾ ಪ್ರಯುಕ್ತ ಸೈಕ್ಲೋಥಾನ್ ಸೈಕಲ್ ರೇಸ್ ನಡೆಯಿತು.
ದಸರಾ ವೇದಿಕೆ ಮುಂಭಾಗದಲ್ಲಿ 14 ವರ್ಷ, 18 ವರ್ಷ ಹಾಗೂ ಮುಕ್ತ ವಿಭಾಗದಲ್ಲಿ ನೂರಾರು ಕ್ರೀಡಾಪಟುಗಳು ಭಾಗವಹಿಸಿದ್ದರು.
ಯುವ ದಸರಾದ ಸೈಕಲ್ ರೇಸ್‌ಗೆ ಶ್ರೀ ಕಾವೇರಿ ದಸರಾ ಸಮಿತಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.
ಮುಂಜಾನೆ 9 ಗಂಟೆಗೆ ಪ್ರಾರಂಭವಾದ ಸೈಕಲ್ ರೇಸ್‌ನಲ್ಲಿ ವಿವಿಧ ಭಾಗದಿಂದ ಹೆಚ್ಚಿನ ಕ್ರೀಡಾಪಟುಗಳು ಭಾಗವಹಿಸಿದ್ದರು. ದಸರಾ ಜನೋತ್ಸವದ 3ನೇ ದಿನದ ಕಾರ್ಯಕ್ರಮದ ಅಂಗವಾಗಿ ಯುವ ದಸರಾ ಸಮಿತಿ ಅಧ್ಯಕ್ಷರಾದ ನಾಮೇರ ಅಂಕಿತ್ ಅಧ್ಯಕ್ಷತೆಯಲ್ಲಿ ಸೈಕಲ್ ರೇಸ್ ನಡೆಯಿತು.
ತರ ಮಾತನಾಡಿದ ಅವರು, ಯುವ ದಸರಾದ ಅಂಗವಾಗಿ ಸೈಕಲ್ ರೇಸ್‌ಅನ್ನು ಹಮ್ಮಿಕೊಳ್ಳಲಾಗುತ್ತಿದೆ. ಕ್ರೀಡಾಪಟುಗಳಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಮಕ್ಕಳಲ್ಲಿ ಕ್ರೀಡೆಯ ಬಗ್ಗೆ ಆಸಕ್ತಿ ಮೂಡಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಯುವ ದಸರಾ ಸಮಿತಿ ಉಪಾಧ್ಯಕ್ಷ ಶರತ್‌ಕಾಂತ್ ಮಾತನಾಡಿ, ಕ್ರೀಡೆಯ ತವರೂರಿನಲ್ಲಿ ಹಲವು ಕ್ರೀಡೆಗಳಂತೆ ಸೈಕಲ್ ರೇಸ್ ಕೂಡ ಮಕ್ಕಳನ್ನು ಹೆಚ್ಚಾಗಿ ಆಕರ್ಷಣೆ ಮಾಡುತ್ತಿದ್ದು, ದೈಹಿಕವಾಗಿ ಮಕ್ಕಳಿಗೆ ಇದರಿಂದ ಅನುಕೂಲವಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಶ್ರೀ ಕಾವೇರಿ ದಸರಾ ಸಮಿತಿಯ ಖಜಾಂಚಿ ಧ್ಯಾನ್ ಸುಬ್ಬಯ್ಯ, ಮಹಿಳಾ ದಸರಾ ಅಧ್ಯಕ್ಷೆ ಎಂ.ಮಂಜುಳಾ, ಪ್ರಧಾನ ಕಾರ್ಯದರ್ಶಿ ಎನ್.ಎಸ್. ಕಂದಾದೇವಯ್ಯ, ಸಮಿತಿ ಪದಾಧಿಕಾರಿಗಳಾದ ಚಂದನ್ ಕಾಮತ್, ನಾಯಂದರ ಶಿವಾಜಿ, ಧನಲಕ್ಷ್ಮಿ, ಸೈಕ್ಲೋನ್ ರಮೇಶ್, ಪಳನಿ, ದರ್ಶನ್, ಆದಿತ್ಯ ಪೆಮ್ಮಯ್ಯ, ಕೆ.ಎಂ. ಅಂಚಿಫ್, ಸೋಮಣ್ಣ, ಅನೀಶ್, ಜೇಸನ್, ಶಾಹಿದ್, ರಂಶದ್, ಶಮೀರ್, ಸಜೀರ್, ಮಿಲನ್, ರಮೇಶ್, ಕೌಶಿಕ್, ಭರತ್ ಹಾಗೂ ಸಚಿನ್ ಸೇರಿದಂತೆ ಇನ್ನಿತರ ಪದಾಧಿಕಾರಿಗಳು ಭಾಗವಹಿಸಿದ್ದರು.
ಬಹುಮಾನ ವಿಜೇತರು: 14 ವರ್ಷ ಕೆಳಗಿನ ವಿಭಾಗದಲ್ಲಿ ಎಂ.ವಿ.ಅಜ್ಮತ್ (ಪ್ರಥಮ), ಯು.ವಿವಿನ್ (ದ್ವಿತೀಯ), ಸುಮಿತ್(ತೃತೀಯ), 18 ವರ್ಷ ಕೆಳಗಿನ ವಿಭಾಗದಲ್ಲಿ ಪೂದ್ರಿಮಾಡ ನಮನ್(ಪ್ರ). ಎಚ್.ಕ್ರಿತಿಕ್ ಮಿತಿ (ದ್ವಿ), ಎಚ್. ಕೃತಿನ್ ಮಿತಿ (ತೃ), 18 ವರ್ಷ ಮೇಲ್ಪಟ್ಟ ವಿಭಾಗದಲ್ಲಿ ನಿಖಿಲ್ (ಪ್ರ), ಎಚ್.ಎಂ.ಅಭಿಷೇಕ್ (ದ್ವಿ) ಸಚಿನ್ ಕಾಂತ್(ತೃ), ಬಾಲಕಿಯರ ವಿಭಾಗದಲ್ಲಿ ವೇದಪ್ರಿಯ ಪಿ.ಪಾಟೀಲ್(ಪ್ರ), ಎಂ.ಊರ್ವಿ ಪೊನ್ನಣ್ಣ(ದ್ವಿ), ಟಿ.ಎಂ.ವಂದನಾ(ತೃ) ಬಹುಮಾನ ಪಡೆದುಕೊಂಡಿದ್ದಾರೆ. ಹಗ್ಗಜಗ್ಗಾಟ ಸ್ಪರ್ಧೆಯ ಬಾಲಕಿಯರ ವಿಭಾಗದಲ್ಲಿ ಕಾವೇರಿ ಕಾಲೇಜು ಗೋಣಿಕೊಪ್ಪ ಪ್ರಥಮ, ವಿದ್ಯಾನೀಕೇತನ ಪಿ.ಯು.ಕಾಲೇಜು ದ್ವಿತೀಯ ಹಾಗೂ ಬಾಲಕರ ವಿಭಾಗದಲ್ಲಿ ಜಿಂಗಲಾಲ ತಂಡ ಪ್ರಥಮ, ಕಾವೇರಿ ಕಾಲೇಜು ದ್ವಿತೀಯ ಸ್ಥಾನ ಪಡೆದುಕೊಂಡಿವೆ.