ಜಾಗತಿಕ ಶಾಂತಿಗಾಗಿ ವಿವಿಧೆಡೆ ಸೈಕಲ್ ಜಾಥಾ

07
Published on

ಮೈಸೂರು: ಯುದ್ಧ ವಿರೋಧಿ ಹಾಗೂ ಜಾಗತಿಕ ಶಾಂತಿ ಬಯಸಿ ಕೇರಳದ ಕ್ಯಾಲಿಕಟ್‌ನಿಂದ ಆರಂಭಗೊಂಡಿರುವ ಸೈಕಲ್ ಜಾಥಾ ಭಾನುವಾರ ನಗರಕ್ಕೆ ಆಗಮಿಸಿತು.
ಜಾಗತಿಕ ಮಹಾ ಯುದ್ಧವನ್ನು ತಡೆದು ಶಾಂತಿ ಸ್ಥಾಪಿಸಬೇಕು ಎನ್ನುವ ಸಂದೇಶ ಹೊತ್ತ ಜಾಗತಿಕ ಅಹ್ಮದಿಯಾ ಮುಸ್ಲಿಂ ಸಂಘಟನೆಯ ಭಾರತೀಯ ಯುವ ವಿಭಾಗದ ಸದಸ್ಯರ ತಂಡವನ್ನು ಮೈಸೂರಿನ ಸೈಕ್ಲಿಂಗ್ ಕ್ಲಬ್‌ನಿಂದ ಆತ್ಮೀಯವಾಗಿ ಸ್ವಾಗತಿಸಲಾಯಿತು.
ಕ್ಲಬ್‌ನ ಅಂಕುರ್ ಘೋಷ್ ಮಾತನಾಡಿ, ಜಾಗತಿಕ ಆಹ್ಮದಿಯಾ ಮುಸ್ಲಿಂ ಸಂಘಟನೆಯು ಒಂದು ಪ್ರಗತಿಪರ ಸಂಘಟನೆಯಾಗಿದ್ದು, ಲೋಕದಲ್ಲಿ ಶಾಂತಿ ಸ್ಥಾಪನೆಗಾಗಿ ಮತ್ತು ವಿನಾಶಕಾರಿ ಯುದ್ಧವನ್ನು ತಡೆಯಲಿಕ್ಕಾಗಿ ಜಗತ್ತಿನ ಎಲ್ಲ ರಾಜಕೀಯ ಮತ್ತು ಧಾರ್ಮಿಕ ನೇತಾರರಿಗೆ ಪತ್ರ ಬರೆಯುವ ಮೂಲಕ ಕೋರುತ್ತಿದೆ ಎಂದರು.
ವಿವಿಧ ದೇಶಗಳ ಸಂಸದರನ್ನು ಭೇಟಿ ಮಾಡಿ ಶಾಂತಿ ಸ್ಥಾಪನೆಗಾಗಿ ಹಝರತ್ ಮಿರ್ಝಾ ಮಸ್ರೂರ್ ಅಹ್ಮದ್ ಅವರು ಇಪ್ಪತ್ತು ವರ್ಷಗಳಿಂದ ಅಹರ್ನಿಶಿ ಪ್ರಯತ್ನಿಸುತ್ತಿದ್ದಾರೆ. ಇದರಿಂದ ಪ್ರೇರಣೆ ಪಡೆದು ನಾವು ಈ ಸಣ್ಣ ಹೆಜ್ಜೆಯನ್ನು ಇಟ್ಟಿದ್ದೇವೆ. ಪ್ರೀತಿ ಎಲ್ಲರೊಂದಿಗೂ, ಹಗೆಯಿಲ್ಲ ಯಾರೊಂದಿಗೂ’ ಎನ್ನುವ ಧ್ಯೇಯವಾಕ್ಯ, ಆದರ್ಶ ಘೋಷಣೆಯೊಂದಿಗೆ ಮುಂದಿನ ಹೆಜ್ಜೆ ಇಟ್ಟಿದ್ದೇವೆ ಎಂದು ಹೇಳಿದರು.
ದೇಶದಲ್ಲಿ ಐಕ್ಯಮತ ಸಾಧಿಸಲು, ಸೌಹಾರ್ದವನ್ನು ಬೆಳೆಸಲು, ಪರಿಸರವನ್ನು ಕಾಪಾಡಲು ಹಾಗೂ ಸೇವಾ ಮನೋಭಾವನೆಯನ್ನು ವೃದ್ಧಿಸಲು ಈ ಸೈಕಲ್ ಜಾಥವನ್ನು ಕೊಂಡೊಯ್ಯುತ್ತಿದ್ದೇವೆ ಎಂದು ತಿಳಿಸಿದರು.
ಸೆ.6ರಂದು ಕೇರಳದ ಕ್ಯಾಲಿಕಟ್‌ನಿಂದ ಆರಂಭಗೊಂಡ ಸೈಕಲ್ ಜಾಗೃತಿ ಜಾಥಾ, ಪ್ರಕೃತಿ ವಿಕೋಪಕ್ಕೆ ಒಳಗಾಗಿದ್ದ ವಯನಾಡ್ ತಲುಪಿ ಅಲ್ಲಿಯ ನಾಗರಿಕರಿಗೆ ಸಾಂತ್ವನ ಹಾಗೂ ಬೆಂಬಲವನ್ನು ವ್ಯಕ್ತಪಡಿಸಿ ಮುಂದುವರಿದಿದೆ. ಸೆ.8ರಂದು ಮೈಸೂರಿಗೆ ಆಗಮಿಸಿ ಜಾಗೃತಿ ಮೂಡಿಸಲಾಯಿತು. ಸೆ. 9ರಂದು ಮೈಸೂರಿನಿಂದ ಬೆಂಗಳೂರಿಗೆ ಪಯಣ ಬೆಳೆಸಲಿದೆ. ಬಳಿಕ ಬೆಂಗಳೂರಿನಿಂದ ಹೈದರಾಬಾದ್ ಮಾರ್ಗವಾಗಿ ದೇಶದ ಪ್ರಮುಖ ನಗರಗಳಾದ ಪುಣೆ, ಮುಂಬೈ, ಅಹ್ಮದಾಬಾದ್, ಜೈಪುರ್, ದೆಹಲಿ ಮೂಲಕ ಪಂಜಾಬಿನ ಅಮೃತಸರದ ಬಳಿಯ ಕಾಡಿಯಾನ್‌ನಲ್ಲಿ ಜಾಥಾ ಮುಕ್ತಾಯವಾಗಲಿದೆ. ಈ ಸೈಕ್ಲಿಂಗ್ ತಂಡದಲ್ಲಿ ಮಿಶಲ್, ಅಮೀರ್, ಸಲಾಂ, ಫಸಲ್, ರಹೀಂ ಇದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net