ಸೈಕಲ್ ಹೆಡ್‌ಲೈಟ್ ಕಳವು, ಸಿಸಿಟಿವಿ ನೆರವಿನಿಂದ ಆರೋಪಿ ಪತ್ತೆ

cycle web
Published on

ಸುಳ್ಯ: ಹೋಟೆಲ್ ಮುಂಭಾಗ ನಿಲ್ಲಿಸಿದ್ದ ಸ್ಪೋರ್ಟ್ಸ್ ಬೈಸಿಕಲ್‌ನ ಹೆಡ್‌ಲೈಟ್‌ನ್ನು ಯುವಕನೋರ್ವ ಕದ್ದೊಯ್ದಿದ್ದು, ಸಿಸಿಟಿವಿ ಫೂಟೇಜ್ ನೆರವಿನಿಂದ ಆರೋಪಿಯನ್ನು ಪತ್ತೆಹಚ್ಚಿ, ಆತನಿಂದ ಕಳವುಗೈದ ಸೊತ್ತನ್ನು ವಶಪಡಿಸಿಕೊಂಡ ಘಟನೆ ಸುಳ್ಯದ ಗಾಂಧಿನಗರದಲ್ಲಿ ಬುಧವಾರ ರಾತ್ರಿ ನಡೆದಿದೆ.

ಗಾಂಧಿನಗರ ಕಟ್ಟೆಕ್ಕಾರ್ ಜನರಲ್ ಸ್ಟೋರ್ ಮಾಲೀಕ ನಾಸಿರ್ ಕಟ್ಟೆಕ್ಕಾರ್ ಎಂಬುವರು ತಮ್ಮ ಸ್ಪೋರ್ಟ್ಸ್ ಬೈಸಿಕಲ್ಲನ್ನು ಬುಧವಾರ ರಾತ್ರಿ 8.40ರ ವೇಳೆಗೆ ಪಕ್ಕದ ಹೋಟೆಲ್ ಮುಂಭಾಗ ನಿಲ್ಲಿಸಿ ಊಟಕ್ಕೆ ತೆರಳಿದ್ದರು. ಒಂದು ತಾಸಿನ ಬಳಿಕ ಊಟ ಮುಗಿಸಿ ಹೊರಬಂದಾಗ ಸೈಕಲ್‌ನ ಹೆಡ್ ಲೈಟ್ ಕಳವಾಗಿರುವುದು ಗಮನಕ್ಕೆ ಬಂತು.

ಈ ಸಂದರ್ಭ ಅಲ್ಲಿಯೇ ಇದ್ದ ನಪಂ ಸದಸ್ಯ ರಿಯಾಜ್ ಕಟ್ಟೆಕಾರ್ ಮತ್ತಿತರರು ಹೋಟೆಲ್‌ನ ಹೊರಾವರಣದಲ್ಲಿ ಅಳವಡಿಸಿದ್ದ ಕ್ಯಾಮರಾ ಫೂಟೇಜನ್ನು ಪರಿಶೀಲಿಸಿದ್ದು. ಅದರಲ್ಲಿ ಯುವಕನೋರ್ವ ಹೆಡ್‌ಲೈಟ್ ಬಿಚ್ಚಿಕೊಂಡು ಹೋಗುತ್ತಿರುವುದು ಸೆರೆಯಾಗಿತ್ತು. ಆರೋಪಿಗಾಗಿ ಹುಡುಕಾಟ ನಡೆಸಿದ ರಿಯಾಜ್ ಹಾಗೂ ನಾಸೀರ್, ಆತ ಇರುವ ಸ್ಥಳಕ್ಕೇ ತೆರಳಿ ಸೊತ್ತನ್ನು ವಶಪಡಿಸಿಕೊಂಡರು. ಬಳಿಕ ಆತನಿಗೆ ಬುದ್ಧಿವಾದ ಹೇಳಿ ಮುಂದೆ ಈ ರೀತಿ ಮಾಡದಂತೆ ಎಚ್ಚರಿಕೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net