ಪರಿಸರ ರಕ್ಷಣೆಗಾಗಿ ಸೈಕಲ್ ಯಾತ್ರೆ

cycle
Published on

ಮಡಿಕೇರಿ:

ಪರಿಸರ ಸಂರಕ್ಷಣೆ ಮತ್ತು ಸರ್ಕಾರಿ ಶಾಲೆಗಳನ್ನು ಉಳಿಸುವ ಮೂಲಕ ಈ ಶಾಲೆಗಳ ಅಭಿವೃದ್ಧಿಗೆ ಆದ್ಯತೆ ನೀಡಿ ಶಿಕ್ಷಣ ಸಬಲೀಕರಣಕ್ಕೆ ಆದ್ಯತೆ ನೀಡುವುದು ಬಹಳ ಮುಖ್ಯವಾಗಿದೆ ಎಂದು ತುಮಕೂರಿನ ಪರಿಸರ ಪ್ರೇಮಿಯೂ ಆದ ಸೈಕ್ಲಿಸ್ಟ್ ಮಹಾಲಿಂಗಯ್ಯ ಹೇಳಿದರು. ರಾಜ್ಯದಲ್ಲಿ ಸರ್ಕಾರಿ ಶಾಲೆಗಳ ಉಳಿವು ಮತ್ತು ಪರಿಸರ ಬಗ್ಗೆ ಜಾಗೃತಿ ಮೂಡಿಸಲು ಸೈಕಲ್ ಮೂಲಕ ರಾಜ್ಯ ಪರ್ಯಟನೆ ಕೈಗೊಂಡಿರುವ ಮಹಾಲಿಂಗಯ್ಯ ಕೊಡಗು ಸಂಚಾರ ಪೂರೈಸಿ ಮೈಸೂರು ಜಿಲ್ಲೆಗೆ ತೆರಳುವ ಸಂದರ್ಭ ಬುಧವಾರ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಗಿಡ- ಮರಗಳನ್ನು ಬೆಳೆಸುವ ಮೂಲಕ ಪರಿಸರ ಸಂರಕ್ಷಣೆಯೊAದಿಗೆ ದೇಶವನ್ನು ಹಸಿರಿನಿಂದ ಸಮೃದ್ಧಗೊಳಿಸಿ ಕಂಗೊಳಿಸುವುದು ಸೇರಿದಂತೆ ರಾಜ್ಯದಲ್ಲಿರುವ ಕನ್ನಡ ಸರ್ಕಾರಿ ಶಾಲೆಗಳನ್ನು ಉಳಿಸಬೇಕು. ಸೈಕಲ್ ಮೂಲಕ ರಾಜ್ಯಾದ್ಯಂತ ಸಂಚರಿಸುತ್ತಾ ನಮ್ಮ ಸುತ್ತಲಿನ ಪರಿಸರ ಸಂರಕ್ಷಣೆ ಜತೆಗೆ ಪ್ರತಿ ಗ್ರಾಮ ಮತ್ತು ಊರುಗಳಲ್ಲಿಯೂ ಕೆರೆಗಳನ್ನು ಉಳಿಸಿ ಅಲ್ಲಿ ಹಸಿರು ಪರಿಸರ ನಿರ್ಮಿಸಿ ಪಕ್ಷಿ - ಸಂಕುಲಗಳ ಸಂರಕ್ಷಣೆಗೆ ಮನವಿ ಮಾಡಲಾಗುತ್ತಿದೆ. ಜಾಥಾದ ಸಂದರ್ಭದಲ್ಲಿ ಪ್ರತಿ ಜಿಲ್ಲೆಗಳಲ್ಲೂ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಈ ಕುರಿತು ಮನವಿ ಸಲ್ಲಿಸಲಾಗುತ್ತಿದೆ. ಬಡ ಮಕ್ಕಳು ಹೆಚ್ಚಾಗಿ ಕಲಿಯುವ ಸರ್ಕಾರಿ ಶಾಲೆಗಳನ್ನು ಉಳಿಸಿ ಅವುಗಳ ಅಭಿವೃದ್ಧಿ ಮತ್ತು ಬಲವರ್ಧನೆಗೆ ಒತ್ತಾಯಿಸಿ ಮನವಿ ಮಾಡಲಾಗುತ್ತಿದೆ ಎಂದರು.

ಮಹಾಲಿಂಗಯ್ಯ ಅವರ ಪರಿಸರ ಕಾಳಜಿ ಕುರಿತು ಪ್ರಶಂಸೆ ವ್ಯಕ್ತಪಡಿಸಿ ಅವರನ್ನು ಸನ್ಮಾನಿಸಿ ಬೀಳ್ಕೊಟ್ಟ ಕಾವೇರಿ ನದಿ ಸ್ವಚ್ಛತಾ ಆಂದೋಲನದ ಸಂಚಾಲಕ ಎಂ.ಎನ್. ಚಂದ್ರಮೋಹನ್ ಮಾತನಾಡಿ, ಸೈಕ್ಲಿಸ್ಟ್ ಮಹಾಲಿಂಗಯ್ಯ ಅವರ ಪರಿಸರ ಕಾಳಜಿ ಮೆಚ್ಚುವಂಥದ್ದು, ಇಂತಹ ಪರಿಸರ ಜಾಥಾಕ್ಕೆ ಎಲ್ಲರೂ ಸಹಕರಿಸಬೇಕು ಎಂದರು.

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾಧ್ಯಕ್ಷ ಟಿ.ಜಿ. ಪ್ರೇಮಕುಮಾರ್ ಮಾತನಾಡಿ, ಪರಿಸರ ಪ್ರೇಮಿ ಮಹಾಲಿಂಗಯ್ಯ ಅವರು ಪರಿಸರ ಸಂರಕ್ಷಣೆ ಹಾಗೂ ಸರ್ಕಾರಿ ಶಾಲೆಗಳ ಉಳಿವಿಗಾಗಿ ಹಮ್ಮಿಕೊಂಡಿರುವ ಬೈಸಿಕಲ್ ಜಾಥಾ ಶ್ಲಾಘನೀಯವಾದುದು. ಜನರಲ್ಲಿ ಪರಿಸರ ಜಾಗೃತಿ ಮೂಡಿಸುವ ಉತ್ತಮ ಉದ್ದೇಶದೊಂದಿಗೆ ಕೈಗೊಂಡಿರುವ ಬೈಸಿಕಲ್ ಜಾಥಾ ಯಶಸ್ವಿಯಾಗಲಿ ಎಂದು ಹೇಳಿದರು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್. ನಾಗೇಶ್, ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಎಸ್.ಮಹೇAದ್ರ, ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಸಿ.ಟಿ. ಸೋಮಶೇಖರ್, ಅಳಿಲು ಸೇವಾ ತಂಡದ ಕಾರ್ಯಕರ್ತ ಕೆ.ಜಿ. ಮನು, ಕುಮಾರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net