ನಿವೃತ್ತ ಬ್ಯಾಂಕ್​ ಅಧಿಕಾರಿ ಖಾತೆಗೆ ಕನ್ನ, ಲಕ್ಷಾಂತರ ರೂ. ದೋಚಿದ ಖದೀಮರು!

Cyber Crime
Published on

ಬೆಂಗಳೂರು: ಸೈಬರ್​ ಕಳ್ಳರು ನಿವೃತ್ತ ಬ್ಯಾಂಕ್​ ಅಧಿಕಾರಿಯ ಖಾತೆಗೇ ಕನ್ನ ಹಾಕಿದ್ದಾರೆ.

ಮುರುಗೇಶ್​ಪಾಳ್ಯದ 70 ವರ್ಷದ ನಿವೃತ್ತ ಅಧಿಕಾರಿ ವಂಚನೆಗೆ ಒಳಗಾದವರು. ಐಸಿಐಸಿ ಬ್ಯಾಂಕ್​ ಖಾತೆ ಹೊಂದಿರುವ ಇವರು, ಆ.24ರಂದು ತನ್ನ ಉಳಿತಾಯ ಬ್ಯಾಂಕ್​ ಖಾತೆಯಿಂದ ಗೂಗಲ್​ ಪೇ ಮೂಲಕ ಜಿಯೋ ಮಿನಿ ವ್ಯಾಲೆಟ್​ಗೆ 599 ರೂ. ವರ್ಗಾವಣೆ ಮಾಡಿದ್ದರು. ಆದರೆ, ಆ ಹಣ ವರ್ಗಾವಣೆಗೊಂಡಿರಲಿಲ್ಲ. ಈ ಬಗ್ಗೆ ದೂರು ಕೊಡುವ ಸಲುವಾಗಿ ಗೂಗಲ್​ ಪೇ ಕಸ್ಟಮರ್​ ಕೇರ್​ ನಂಬರ್​ನ್ನು ಗೂಗಲ್​ನಲ್ಲಿ ಸರ್ಚ್​ ಮಾಡಿದಾಗ ಅಪರಿಚಿತ ನಂಬರ್​ ಲಭ್ಯವಾಗಿದೆ. ಆ ಹೆಲ್ಪ್​ಲೈನ್​ಗೆ ಕರೆ ಮಾಡಿದ ನಿವೃತ್ತ ಅಧಿಕಾರಿ 6.94 ಲಕ್ಷ ರೂ. ಕಳೆದುಕೊಂಡಿದ್ದಾರೆ. ಇದನ್ನೂ ಓದಿರಿ ಊಟ ಕೇಳಿದ್ದಕ್ಕೆ ಮಗುವಿನ ಮೈಯನ್ನು ಬೆಂಕಿಯಿಂದ ಸುಟ್ಟಿ ವಿಕೃತಿ ಮೆರೆದ ಅಜ್ಜಿ

ಗೂಗಲ್​ ಸರ್ಚ್​ ಮಾಡಿದಾಗ ಸಿಕ್ಕ ಅಪರಿಚಿತ ನಂಬರ್​ಗೆ ನಿವೃತ್ತ ಅಧಿಕಾರಿ ಕರೆ ಮಾಡಿದ್ದು, ಆ ಕಡೆಯಿಂದ ಮಾತನಾಡಿದವರು 'ನಿಮ್ಮ 599 ರೂಪಾಯಿಯನ್ನು ಹಿಂತಿರುಗಿಸುತ್ತೇವೆ. ಅದಕ್ಕಾಗಿ ಬ್ಯಾಂಕ್​ ಖಾತೆ ವಿವರ ನೀಡಿ' ಎಂದಿದ್ದಾರೆ. ಅಧಿಕಾರಿ ಮಾಹಿತಿ ನೀಡುತ್ತಿದ್ದಂತೆ 20 ಸಾವಿರ ಮತ್ತು 45 ಸಾವಿರ ರೂ. ಕಡಿತ ಮಾಡಿಕೊಂಡಿದ್ದಾರೆ.

45 ಸಾವಿರ ರೂ. ಕಡಿತ ಆಗಿದ್ದನ್ನು ಕಂಡು ಬೆಚ್ಚಿಬಿದ್ದ ನಿವೃತ್ತ ಅಧಿಕಾರಿ, ಈ ಬಗ್ಗೆ ವಿಚಾರಿಸಲು ಮತ್ತೆ ಕರೆ ಮಾಡಿದಾಗ ಕ್ಷಮೆ ಕೋರಿದ ಖದೀಮರು ಸುಳ್ಳು ಹೇಳಿ ನಂಬಿಸಿದ್ದರು. 599 ರೂ. ಜತೆಗೆ 65 ಸಾವಿರ ರೂ. ಅನ್ನು ವಾಪಸ್​ ನಿಮ್ಮ ಬ್ಯಾಂಕ್​ ಖಾತೆಗೆ ವರ್ಗಾವಣೆ ಮಾಡುತ್ತೇವೆ. ಮತ್ತೊಮ್ಮೆ ಬ್ಯಾಂಕ್​ ಖಾತೆಯ ವಿವರದ ಜತೆಗೆ ಮೊಬೈಲ್​ಗೆ ಬಂದ ಒಟಿಪಿ ನಂಬರ್​ ಪಡೆದು ಒಟ್ಟು 6.94 ಲಕ್ಷ ರೂ. ದೋಚಿದ್ದಾರೆ.

ಮೇಲಿಂದ ಮೇಲೆ ಬ್ಯಾಂಕ್​ ಖಾತೆಗೆ ಕನ್ನ ಹಾಕುತ್ತಿರುವುದು ತಡವಾಗಿ ಅರಿತ ನಿವೃತ್ತ ಅಧಿಕಾರಿ, ಕೊನೆಗೆ ಪಶ್ಚಿಮ ವಿಭಾಗ ಸಿಇಎನ್​ ಠಾಣೆಗೆ ಬಂದು ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net