

ವಿಜಯವಾಣಿ ಸುದ್ದಿಜಾಲ ಧಾರವಾಡ
ಸೈಬರ್ ಭಯೋತ್ಪಾದನೆ, ಮಾನವ ಕಳ್ಳ ಸಾಗಾಣಿಕೆ, ಉದ್ಯಮ, ಆಸ್ಪತ್ರೆ, ಸಾಹಿತ್ಯ, ಸಂಗೀತ, ಕಲೆ ಹೀಗೆ ಎಲ್ಲ ಕ್ಷೇತ್ರಗಳಲ್ಲೂ ಸೈಬರ್ ಅಪರಾಧಗಳು ನಡೆಯುತ್ತಿವೆ. ವಿಜ್ಞಾನದ ಸದ್ಬಳಕೆಗಿಂತ ರ್ದುಬಳಕೆ ಅಧಿಕವಾಗುತ್ತಿದೆ. ಜಗತ್ತಿನಾದ್ಯಂತ 1 ಗಂಟೆಯಲ್ಲಿ 450 ಕೋಟಿ ಸೈಬರ್ ಅಪರಾಧಗಳು ನಡೆಯುತ್ತಿವೆ ಎಂದು ಡೈನಾಮಿಕ್ಸ್ (ಎಂಜಿಐ) ಯುಎಸ್ಎಯ ಎಐ ಮತ್ತು ಸೈಬರ್ ಸೆಕ್ಯುರಿಟಿ ಥೀಟಾದ ನಿರ್ದೇಶಕ ಡಾ. ಉದಯ ಶಂಕರ ಪುರಾಣಿಕ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ಪ್ರೊ. ಎಂ.ಐ. ಸವದತ್ತಿ ದತ್ತಿ ನಿಮಿತ್ತ ಆಯೋಜಿಸಿದ್ದ ಉಪನ್ಯಾಸ ಮತ್ತು ರಾಷ್ಟ್ರೀಯ ವಿಜ್ಞಾನ ದಿನ ಸಮಾರಂಭದಲ್ಲಿ ಸೈಬರ್ ಸುರಕ್ಷತೆ: ವರ್ತಮಾನ ಮತ್ತು ಭವಿಷ್ಯ ಕುರಿತು ಮಾತನಾಡಿದರು.
ಸೈಬರ್ ಅಪರಾಧಿಗಳು ಆರ್ಥಿಕವಾಗಿ ಮುಂದುವರೆದ ದೇಶಗಳಿಗಿಂತ ಹೆಚ್ಚಿನ ಹಣ ಗಳಿಸುತ್ತಿದ್ದಾರೆ. ಕಂಪನಿ ಅರೆಸ್ಟ್, ಡಿಜಿಟಲ್ ಅರೆಸ್ಟ್ಗಳಿಗೆ ಅಂಜಬೇಕಿಲ್ಲ. ಕಾಳಸುಲಿಗೆ ಕಂಡು ಬಂದರೆ 1930 ಸಂಖ್ಯೆಗೆ ತಿಳಿಸಿದರೆ ವಂಚಕರಿಂದ ಪಾರಾಗಬಹುದು ಎಂದರು.
ಪ್ರೊ. ಬಿ.ಜಿ. ಮೂಲಿಮನಿ ಮಾತನಾಡಿ, ಸೈಬರ ಅಪರಾಧದ ಬಗ್ಗೆ ಜನರಿಗೆ ಭಯವಿದೆ. ಆದರೆ ತಿಳಿವಳಿಕೆ ಇಲ್ಲ. ಜನರಿಗಾಗಿ ವಿಜ್ಞಾನವಿದ್ದು, ದೇಶದ ಸುಸ್ಥಿರ ಅಭಿವೃದ್ಧಿಗೆ ವಿಜ್ಞಾನ ಬಳಕೆಯಾಗಬೇಕು. ಆತ್ಮವಿಶ್ವಾಸ, ಆತ್ಮ ನಿರ್ಭರತೆ ಮುಖ್ಯವಾಗಿದ್ದು, ಎಲ್ಲರೂ ಸೃಜನಶೀಲತೆ ಬೆಳೆಸಿಕೊಳ್ಳಬೇಕು ಎಂದರು.
ಡಾ. ಧನವಂತ ಹಾಜವಗೋಳ, ಪ್ರೊ. ಎಸ್.ಎಲ್. ಸಂಗಮ, ಸುರೇಶ ಸಾವಳಗಿ, ರಾಜೇಂದ್ರ ಸಾವಳಗಿ, ಗಿರಿಜಾ ಸಾವಳಗಿ, ಪ್ರಕಾಶ ಧರಣೆಪ್ಪಗೌಡ, ಡಾ. ಎಸ್.ವಿ. ಅಯ್ಯನಗೌಡರ, ಡಾ. ಡಿ. ಎಂ. ಹಿರೇಮಠ, ಡಾ. ಲಿಂಗರಾಜ ಅಂಗಡಿ, ಕೆ.ಜಿ. ದೇವರಮನಿ, ಶಾಂತವೀರ ಬೆಟಗೇರಿ, ಇತರರು ಇದ್ದರು.
ಡಾ. ಮಹೇಶ ಹೊರಕೇರಿ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಜಿನದತ್ತ ಹಡಗಲಿ ನಿರೂಪಿಸಿದರು. ಶಂಕರ ಕುಂಬಿ ವಂದಿಸಿದರು.