ಸೈಬರ್ ತರಬೇತಿ ಕೋರ್ಸ್ ಶೀಘ್ರ ಆರಂಭ: ಯದುವೀರ್ ಕೃಷ್ಣದತ್ತ ಒಡೆಯರ್ ಮಾಹಿತಿ

Cyber Crime
Published on

ಮೈಸೂರು: ಸೈಬರ್ ದಾಳಿಯ ದುರುಪಯೋಗ ತಡೆಯುವುದು ಹಾಗೂ ಸೈಬರ್ ಭದ್ರತೆ ಬಗ್ಗೆ ತರಬೇತಿ ನೀಡುವ ಉದ್ದೇಶದಿಂದ ಸೈಬರ್‌ವರ್ಸ್‌ ಸಂಸ್ಥೆ ಹಾಗೂ ಐ ತ್ರಿಬರಲ್ ಇ ಸಹಯೋಗದೊಂದಿಗೆ ಸೈಬರ್ ತರಬೇತಿ ಕೋರ್ಸ್ ಆರಂಭಿಸಲಾಗುತ್ತದೆ ಎಂದು ಯದುವೀರ್ ಸಂಸ್ಥೆ ಸಲಹಾ ಮಂಡಳಿ ಮುಖ್ಯಸ್ಥ ಯದುವೀರ್ ಕೃಷ್ಣದತ್ತ ಒಡೆಯರ್ ತಿಳಿಸಿದರು.

ನಗರದ ಬೆಳವಾಡಿ ಗ್ರಾಮದ ಬಳಿ ಇರುವ ಮೈರಾ ಸ್ಕೂಲ್ ಆಫ್ ಬಿಸಿನೆಸ್ ಸಂಸ್ಥೆಯಲ್ಲಿ ಆಯೋಜಿಸಿದ್ದ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಸೈಬರ್ ದಾಳಿ ಹೆಚ್ಚಾಗುತ್ತಿದ್ದು ಜನ ಸಾಮಾನ್ಯರೂ ಡಿಜಿಟಲ್ ಸೈಬರ್ ಬಗ್ಗೆ ಮಾಹಿತಿ ತಿಳಿದುಕೊಳ್ಳುವುದು ಬಹಳ ಮುಖ್ಯ ಎಂದು ಹೇಳಿದರು.

ಸೈಬರ್ ಭದ್ರತೆ ಎಂಬುದು ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚು ಚರ್ಚೆಯಾಗುತ್ತಿರುವ ವಿಷಯವಾಗಿದ್ದು, ಫೇಸ್‌ಬುಕ್, ಟ್ವಿಟ್ಟರ್ ಇತ್ಯಾದಿ ಸೋಷಿಯಲ್ ಡಿಜಿಟಲ್ ಆಂಟಿ ವೈರಸ್ ಬಳಸಿಕೊಂಡು ಗಣ್ಯ ವ್ಯಕ್ತಿಗಳು ಸೇರಿದಂತೆ ಸಾಮಾನ್ಯ ಜನರ ಖಾತೆಗಳನ್ನು ಹ್ಯಾಕ್ ಮಾಡಲಾಗುತ್ತದೆ ಎಂದರು.

ಇಂತಹ ಕೃತ್ಯಗಳನ್ನು ತಡೆಯಲು ಹಾಗೂ ಈ ವಿಷಯದ ಬಗ್ಗೆ ಕೋರ್ಸ್ ರಚಿಸಿ ತರಬೇತಿ ನೀಡುವುದರಿಂದ ಇದರ ತರಬೇತಿ ಪಡೆದ ವಿದ್ಯಾರ್ಥಿಗಳಿಗು ಸೈಬರ್ ಅನಾಹುತಗಳ ಬಗ್ಗೆ ಜಾಗೃತಿ ವಹಿಸಬಹುದು. ಅಲ್ಲದೆ, ಈ ಕೋರ್ಸ್ ಪಡೆದು ಪರಿಣಿತಿ ಪಡೆದುಕೊಳ್ಳುವುದರಿಂದ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವಕಾಶ ಪಡೆದುಕೊಳ್ಳಬಹುದು ಎಂದು ಹೇಳಿದರು.

ಸೈಬರ್ ವರ್ಸ್‌ನ ಕೇಂದ್ರ ಕಚೇರಿ ಬೆಂಗಳೂರಿನಲ್ಲಿದ್ದು, ಮೈಸೂರಿನಲ್ಲಿ ಇದೇ ಪ್ರಥಮ ಬಾರಿಗೆ ಈ ಕೋರ್ಸ್ ಪರಿಚಯಿಸಲಾಗುತ್ತಿದೆ. ಮೈಸೂರು ವಿಶ್ವವಿದ್ಯಾಲಯದ ಸೇರಿದಂತೆ ನಗರದ ಕೆಲವು ಪ್ರಮುಖ ಕಾಲೇಜುಗಳಲ್ಲಿ ಡಿಜಿಟಲ್ ಸೈಬರ್ ಕೋರ್ಸ್ ಪ್ರಾರಂಭಿಸಲು ಚಿಂತಿಸಲಾಗಿದೆ. ಈಗಾಗಲೇ ಮೂರು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಕೋರ್ಸ್‌ಗೆ ಪ್ರವೇಶ ಪಡೆಯಲು ನೋಂದಾಯಿಸಿಕೊಂಡಿದ್ದಾರೆ. ಕೋರ್ಸ್ ಆರಂಭಿಸಲು ಬೇಕಾದ ಮೂಲಸೌಕರ್ಯಗಳ ಅನುಷ್ಠಾನಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಕಾರ ನೀಡುವ ಸಂಬಂಧ ಧನಾತ್ಮಕ ಪ್ರತಿಕ್ರಿಯೆ ದೊರೆತಿದೆ ಎಂದು ಹೇಳಿದರು.

ಐಇಇಇ ಟೆಕ್ನಾಲಜಿ ಸಂಸ್ಥೆಯ ಹಿರಿಯ ನಿದೇರ್ಶಕ ಶ್ರಿಕಾಂತ ಚಂದ್ರಶೇಖರ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಸೈಬರ್ ದಾಳಿ ಎಂಬುದು ಹೆಚ್ಚಾಗಿ ನಡೆಯತ್ತಿದೆ. ಪ್ರಪಂಚದ ಬಹತೇಕ ರಾಷ್ಟ್ರಗಳು ಈ ಸಮಸ್ಯೆಯನ್ನು ಎದುರಿಸುತ್ತಿವೆ. ಆದ್ದರಿಂದ ಸೈಬರ್ ಭದ್ರತೆಯ ಬಗ್ಗೆ ಅರಿವು ಮೂಡಿಸುವುದ ಹಾಗೂ ಈ ವಿಷಯನ್ನು ಒಂದು ಅಧ್ಯಯನವಾಗಿ ರೂಪಿಸುವ ಉದ್ದೇಶದಿಂದ ಐಇಇಇ ಟೆಕ್ನಾಲಜಿ ಸಂಸ್ಥೆಯು ಸೈಬರ್‌ವರ್ಸ್‌ ಸಂಸ್ಥೆಯೊಂದಿಗೆ ಕೈ ಜೋಡಿಸಿದೆ ಎಂದು ಹೇಳಿದರು.

ಸೈಬರ್‌ವರ್ರ್ಸ್‌ ಫೌಂಡೇಶನ್ ಮುಖ್ಯಸ್ಥೆ ತ್ರಿಶಿಕಾ ದೇವಿ ಒಡೆಯರ್, ಪ್ರಧಾನ ಮಂತ್ರಿ ಕಚೇರಿ ಮಾಜಿ ಕಾರ್ಯದರ್ಸಿ ವಿಜಯ ರಾಘವೇಂದ್ರ, ಶ್ರಿಕಾಂತ್ ಆನಂದ ನಾಯ್ಡು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net