

ಮೈಸೂರು; ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ವತಿಯಿಂದ ಎರಡು ದಿನಗಳ ‘ಯುಕ್ತಿ 2ಕೆ24’ ಪ್ರಾದೇಶಿಕ ಮಟ್ಟದ ತಾಂತ್ರಿಕ-ಸಾಂಸ್ಕೃತಿಕ ಉತ್ಸವಕ್ಕೆ ಚಾಲನೆ ದೊರೆಯಿತು.
ನಗರದ ವಿಟಿಯು ಕ್ಯಾಂಪಸ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 8 ಜಿಲ್ಲೆಗಳ ಸುಮಾರು 60 ಇಂಜಿನಿಯರಿಂಗ್ ಕಾಲೇಜುಗಳ ಅಂದಾಜು 1200 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಕಲೆಗಳ ಕುರಿತು ಉತ್ತೇಜನ ನೀಡುವ ದೃಷ್ಟಿಯಿಂದ ಹಮ್ಮಿಕೊಂಡಿರುವ ಉತ್ಸವದಲ್ಲಿ ನೃತ್ಯ, ಸಂಗೀತ, ಮೂಕಾಭಿನಯ ಮೊದಲಾದ ಸ್ಪರ್ಧೆಗಳು ನಡೆದವು.
ಕಾರ್ಯಕ್ರಮ ಉದ್ಘಾಟಿಸಿದ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು, ಸುರಕ್ಷಿತ ಸೈಬರ್ ಸರ್ವೀಸ್ ಚಟುವಟಿಕೆಯನ್ನು ರಚಿಸಲು ವಿಟಿಯು ಮತ್ತು ಸೈಬರ್ ಸರ್ವೀಸ್ ನಡುವಿನ ಬಾಂಧವ್ಯವನ್ನು ನೆನಪಿಸಿಕೊಂಡರು.
ವಿವಿಧ ಹಂತಗಳಲ್ಲಿ ಸೈಬರ್ ಭದ್ರತಾ ಜಾಗೃತಿ ಮೂಡಿಸಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರ, ಶೈಕ್ಷಣಿಕ, ಉದ್ಯಮ ಮತ್ತು ಸಮುದಾಯವನ್ನು ಒಂದುಗೂಡಿಸುವ ದೃಢವಾದ ವೇದಿಕೆ ರಚಿಸಬೇಕು. ಈ ಮೂಲಕ ಕಾರ್ಯಗತಗೊಳಿಸುವ ಗುರಿ ಹಾಕಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.
ಸೈಬರ್ ಭದ್ರತೆ ಕುರಿತು ವೃತ್ತಿಪರರ ತಯಾರು ಮಾಡಬೇಕಿದೆ. ಅದಕ್ಕಾಗಿ ವಿಶ್ವವಿದ್ಯಾಲಯಗಳು, ಕಾಲೇಜು ಬೆಂಬಲವಾಗಿ ನಿಲ್ಲಬೇಕು. ಸೈಬರ್ ಅಪರಾಧಗಳಿಗೆ ಕಡಿವಾಣ ಹಾಕಲು ಪೊಲೀಸ್ ಇಲಾಖೆಗೆ ನೆರವಾಗಬೇಕಿದೆ ಎಂದು ಹೇಳಿದರು.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್.ವಿದ್ಯಾಶಂಕರ್ ಮಾತನಾಡಿ, ತಂತ್ರಜ್ಞಾನ ಮತ್ತು ಸಂಸ್ಕೃತಿ ಒಂದಕ್ಕೊಂದು ಪೂರಕ. ಅನೇಕ ವಿದ್ಯಾರ್ಥಿಗಳ ಕೋರಿಕೆಯ ಮೇರೆಗೆ ಮೊದಲ ಬಾರಿಗೆ ವಿಟಿಯು ತನ್ನ ವಿದ್ಯಾರ್ಥಿಗಳಿಗೆ ಕಲಿಯಲು ಅವಕಾಶ ನೀಡಲು, ಪ್ರೋತ್ಸಾಹಿಸಲು ಈ ಉತ್ಸವವನ್ನು ಹಮ್ಮಿಕೊಂಡಿದೆ. ಇನ್ಮುಂದೆ ಪ್ರತಿವರ್ಷ ಬೆಳಗಾವಿ, ಮೈಸೂರು, ಕಲಬುರಗಿ, ಬೆಂಗಳೂರಿನಲ್ಲೂ ಈ ಕಾರ್ಯಕ್ರಮವನ್ನು ನಡೆಸಲಾಗುವುದು ಎಂದರು.
ಯೋಜನೆ, ಸಂಘಟನೆ, ಸಮನ್ವಯ ಮತ್ತು ಅನುಷ್ಠಾನದಂತಹ ಕೌಶಲಗಳು ವಿದ್ಯಾರ್ಥಿಗಳಿಗೆ ಭವಿಷ್ಯದ ಉದ್ಯೋಗ ಅವಕಾಶದಲ್ಲಿ ನೆರವಿಗೆ ಬರಲಿದೆ ಎಂದು ತಿಳಿಸಿದರು.
ವಿಟಿಯು ವ್ಯವಸ್ಥಾಪನಾ ಸಮಿತಿ ಸದಸ್ಯ ಡಾ.ಎನ್.ಕೃಷ್ಣೇಗೌಡ, ವಿವಿ ಮೈಸೂರು ಪ್ರಾದೇಶಿಕ ಕೇಂದ್ರದ ನಿರ್ದೇಶಕ ಡಾ.ಟಿ.ಪಿ.ರೇಣುಕಾಮೂರ್ತಿ ಇತರರು ಇದ್ದರು.