ಭಾರತದ ಆರ್ಥಿಕ ಶಕ್ತಿಗೆ ಸೈಬರ್ ಕನ್ನ

h18-cyber
Published on

ಹುಬ್ಬಳ್ಳಿ: ಭಾರತದ ಆರ್ಥಿಕ ಶಕ್ತಿ ಕುಗ್ಗಿಸಲು ಸೈಬರ್ ಅಪರಾಧಗಳು ನಡೆಯುತ್ತಿವೆ. ಆರ್ಥಿಕ ಶಕ್ತಿಯೇ ಕುಗ್ಗಿದರೆ ವಿಶ್ವದಲ್ಲಿ ಭಾರತ ನೆಲಕಚ್ಚಲಿದೆ ಎಂಬ ಉದ್ದೇಶವನ್ನು ಕೆಲ ರಾಷ್ಟ್ರಗಳು ಹೊಂದಿವೆ. ಹಾಗಿಯೇ ನಾವು ಜಾಗೃತರಾಗಬೇಕು ಎಂದು ಸಂಪನ್ಮೂಲ ವ್ಯಕ್ತಿ ಡಾ. ಉದಯ ಶಂಕರ ಪುರಾಣಿಕ ಎಚ್ಚರಿಕೆ ನೀಡಿದರು.
ನಗರದ ಕೆಎಲ್‌ಇ ಸಂಸ್ಥೆಯ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್ ಆ್ಯಂಡ್ ರಿಸರ್ಚ್ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಸೈಬರ್ ಸೆಕ್ಯೂರಿಟಿ ಮತ್ತು ನಿರ್ವಹಣೆ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸೈಬರ್ ಉಗ್ರವಾದ ಈಗ ಹೆಚ್ಚುತ್ತಿದೆ. ಹಣವಂತರನ್ನು ನೋಡಿಯೇ ಅವರು ಕನ್ನ ಹಾಕುತ್ತಿದ್ದಾರೆ. ಡಿಜಿಟಲೀಕರಣ ವ್ಯಾಪಕವಾಗುತ್ತಿದ್ದಂತೆ ಇದರ ದುರ್ಬಳಕೆ ಪ್ರಕರಣಗಳು ಜಾಸ್ತಿಯಾಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಸಿಇಎನ್ ಕ್ರೈಂ ಠಾಣೆ ಪೊಲೀಸ್ ಇನ್‌ಸ್ಪೆಕ್ಟರ್ ಬಿ.ಕೆ. ಪಾಟೀಲ ಮಾತನಾಡಿ, ಪ್ರತಿಯೊಂದಕ್ಕೂ ಒಟಿಪಿ ಕೊಡುವ ಅಗತ್ಯವಿಲ್ಲ. ಕೊಡುವ ಮುನ್ನ ವಿಚಾರ-ಇತರರೊಂದಿಗೆ ಸಂವಹನ ಅತ್ಯಗತ್ಯ. ಫೇಸ್‌ಬುಕ್, ಇನ್‌ಸ್ಟಾಗ್ರಾಂ, ಟೆಲಿಗ್ರಾಂ ಬಳಕೆ ಬಗ್ಗೆ ಎಚ್ಚರವಿರಲಿ. ದುರುಳರು ಯಾವುದರ ಮೂಲಕ ನಿಮ್ಮ ಖಾತೆಗೆ ಕನ್ನಾ ಹಾಕುತ್ತಾರೋ ಗೊತ್ತಾಗುವುದಿಲ್ಲ. ಹಣ ಕಳೆದುಕೊಂಡಾಗ ಎಚ್ಚರವಾದರೆ ಉಪಯೋಗವಿಲ್ಲ ಎಂದರು.
ಪ್ರಾಧ್ಯಾಪಕ ಡಾ. ಗಜೇಂದ್ರ ದೇಶಪಾಂಡೆ ಮಾತನಾಡಿ, ಆಧುನಿಕ ತಂತ್ರಜ್ಞಾನದ ಬಳಕೆಯ ಮಿತಿ ಹಾಗೂ ಕಾನೂನು ಬಗ್ಗೆ ತಿಳಿವಳಿಕೆ ಇರಬೇಕು. ಇಲ್ಲವಾದರೆ ವಂಚನೆಗೊಳಗಾಗುವ ಸಾಧ್ಯತೆ ಹೆಚ್ಚಿದೆ ಎಂದರು.
ಡಾ. ರಾಜೇಂದ್ರಪ್ರಸಾದ ಕೆ.ಎಚ್., ಪ್ರೊ. ಅಶ್ವಿನಿ ಎನ್., ಅಮಿತ್ ಅಂಗಡಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net