

ಬೆಂಗಳೂರು: ದೇಶಾದ್ಯಂತ ಸೈಬರ್ ಅಪರಾಧವೆಸಗುತ್ತ ಸಾರ್ವಜನಿಕರ ಹಣ ಲಪಟಾಯಿಸುತ್ತಿದ್ದ ಬೃಹತ್ ಸೈಬರ್ ವಂಚಕ ಗ್ಯಾಂಗ್ ಪೊಲೀಸರ ಖೆಡ್ಡಾಗೆ ಬಿದ್ದಿದೆ! ಬರೋಬ್ಬರಿ 200 ಜನರ ಖಾತೆಗೆ ಕನ್ನ ಹಾಕಿರುವ ಸಂಗತಿ ಈವರೆಗಿನ ವಿಚಾರಣೆಯಲ್ಲಿ ಬಹಿರಂಗವಾಗಿದೆ. ಪೊಲೀಸ್ ಆಯುಕ್ತ ಭಾಸ್ಕರ್ರಾವ್ ಹಾಗೂ ಸೈಬರ್ ಕ್ರೖೆಂ ಇನ್ಸ್ಪೆಕ್ಟರ್ ಪ್ರಶಾಂತ್ ಬಾಬು ಹೆಸರಲ್ಲೇ ಇಬ್ಬರಿಗೆ ವಂಚಿಸಿರುವುದು ತನಿಖೆಯಲ್ಲಿ ದೃಢಪಟ್ಟಿದೆ.
ರಾಜಸ್ಥಾನದ ಭರತ್ಪುರದ ಕರಣ್ ಸಿಂಗ್ (35), ಅಕ್ರಮ್ ಖಾನ್ (18), ಹ್ಯಾರಿಸ್ (21), ಜಮೀಲ್ (42) ಹಾಗೂ ಮೆಹಜರ್ (20) ಬಂಧಿತರು. ಬ್ಯಾಂಕ್ ಖಾತೆಗೆ ಕನ್ನ ಹಾಕಿದ ಹಣ ಸಂಗ್ರಹಿಸಲೆಂದು ಬೇರೆಬೇರೆ ಬ್ಯಾಂಕ್ಗಳಲ್ಲಿ ಬೇರೆ ಬೇರೆ ಹೆಸರುಗಳಲ್ಲಿ ನೂರಾರು ಖಾತೆ ತೆರೆದಿದ್ದರು. ಆರೋಪಿಗಳಿಂದ 6 ಮೊಬೈಲ್ ವಶಕ್ಕೆ ಪಡೆದು ಪರಿಶೀಲಿಸಲಾಗಿದೆ. ದೇಶವ್ಯಾಪಿ 200ಕ್ಕೂ ಹೆಚ್ಚು ವಂಚನೆ ಪ್ರಕರಣಗಳು ಪತ್ತೆಯಾಗಿವೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ.
ವಂಚನೆ ಹೇಗೆ?: ಒಎಲ್ಎಕ್ಸ್ನಲ್ಲಿ ಹಳೇ ವಸ್ತುಗಳ ಮಾರಾಟಕ್ಕೆ ಜಾಹೀರಾತು ಪ್ರಕಟಿಸುವ ಜನರನ್ನು ಪರಿಚಯಿಸಿಕೊಳ್ಳುತ್ತಿದ್ದರು. ನೀವು ಮಾರಾಟಕ್ಕೆ ಇಟ್ಟಿರುವ ವಸ್ತು ಇಷ್ಟವಾಗಿದೆ. ಅದನ್ನು ಖರೀದಿಸುತ್ತೇವೆ. ಬೇರೆ ಕೆಲಸದಲ್ಲಿ ತೊಡಗಿರುವುದರಿಂದ ವಸ್ತುವನ್ನು ತೆಗೆದುಕೊಂಡು ಹೋಗಲು ಆಗುವುದಿಲ್ಲ. ಸದ್ಯಕ್ಕೆ ಮುಂಗಡ ಹಣ ಪಾವತಿಸಿ, ಬಿಡುವಿದ್ದಾಗ ತಾವಿರುವ ಸ್ಥಳಕ್ಕೆ ಬಂದು ತೆಗೆದುಕೊಳ್ಳುವುದಾಗಿ ಹೇಳುತ್ತಿದ್ದರು. ಪೇಟಿಎಂ ಮೂಲಕ ಹಣ ಹಾಕುತ್ತೇವೆ. ನಿಮ್ಮ ಮೊಬೈಲ್ಗೆ ಕ್ಯೂಆರ್ ಕೋಡ್ ಬರುತ್ತದೆ. ಅದನ್ನು ಸ್ಕಾ್ಯನ್ ಮಾಡಿದರೆ ಬ್ಯಾಂಕ್ ಖಾತೆಗೆ ಹಣ ಸಂದಾಯವಾಗುತ್ತದೆ ಎಂದು ನಂಬಿಸುತ್ತಿದ್ದರು. ಅವರ ಮಾತನ್ನು ನಂಬಿ ಕ್ಯೂಆರ್ ಕೋಡ್ ಸ್ಕಾ್ಯನ್ ಮಾಡುವ ಜನರ ಖಾತೆಯಿಂದ ಹಣ ಲಪಟಾಯಿಸುತ್ತಿದ್ದರು. ವಂಚನೆಯ ಹಣ ಸಂಗ್ರಹಿಸಲು ಕರಣ್ ಸಿಂಗ್ ನೂರಾರು ಬ್ಯಾಂಕ್ ಖಾತೆಗಳನ್ನು ತೆರೆದಿದ್ದ.
ಯೋಧರ ಸೋಗಿನಲ್ಲಿ ಕೃತ್ಯ!: ಹ್ಯಾರಿಸ್ ಈ ಹಿಂದೆ ಎಚ್ಡಿಎಫ್ಸಿ ಬ್ಯಾಂಕ್ ಮತ್ತು ಪೇಟಿಎಂ ಕಂಪನಿಯಲ್ಲಿ ಕೆಲಸ ಮಾಡಿದ್ದ. ಈ ವೇಳೆ ಪೇಟಿಎಂ ವ್ಯಾಲೆಟ್ ಕುರಿತು ತಿಳಿದುಕೊಂಡಿದ್ದ. ಆತ ಮೆಹಜರ್, ಕರಣ್ಸಿಂಗ್, ಅಕ್ರಮ್ ಮತ್ತು ಜಮೀಲ್ ಜತೆಗೂಡಿ ಗ್ಯಾಂಗ್ ಮಾಡಿಕೊಂಡಿದ್ದ. ಮೆಹಜರ್ ಮತ್ತು ಅಕ್ರಮ್ ಒಎಲ್ಎಕ್ಸ್ನಲ್ಲಿ ಬೈಕ್, ಕಾರು ಸೇರಿ ಇನ್ನಿತರ ಗೃಹೋಪಯೋಗಿ ವಸ್ತುಗಳ ಮಾರಾಟಕ್ಕೆ ಜಾಹೀರಾತು ಪ್ರಕಟಿಸುವವರ ಮೇಲೆ ನಿಗಾ ಇಡುತ್ತಿದ್ದರು. ಅವರ ಫೋನ್ ನಂಬರ್ಗಳಿಗೆ ಕರೆ ಮಾಡಿ ಯೋಧ, ಟೆಕ್ಕಿ ಹಾಗೂ ಉದ್ಯಮಿಗಳೆಂದು ಪರಿಚಯಿಸಿಕೊಳ್ಳುತ್ತಿದ್ದರು. ವಾಟ್ಸ್ಆಪ್ಗೆ ಯೋಧರ ಹೆಸರಿನ ಐಡಿ ಹಾಗೂ ಸಮವಸ್ತ್ರ ಧರಿಸಿದ್ದ ಫೋಟೋ ಕಳುಹಿಸಿ ನಂಬಿಸುತ್ತಿದ್ದರು.
ಪೊಲೀಸರ ಕಾರ್ಯಾಚರಣೆ ಡಿಸೆಂಬರ್ ನಂತರ ಆನ್ಲೈನ್ ಲಿಂಕ್ ಮತ್ತು ಕ್ಯೂಆರ್ ಕೋಡ್ ಕಳುಹಿಸಿ ಬ್ಯಾಂಕ್ ಖಾತೆಯಿಂದ ಹಣ ದೋಚುತ್ತಿದ್ದ ಪ್ರಕರಣಗಳು ಹೆಚ್ಚಾಗಿದ್ದವು. ಪೊಲೀಸ್ ಕಮಿಷನರ್ ಕಚೇರಿ ಆವರಣದಲ್ಲಿದ್ದ ಸೈಬರ್ ಕ್ರೖೆಂ ಪೊಲೀಸ್ ಠಾಣೆಯಲ್ಲಿ 300ಕ್ಕೂ ಹೆಚ್ಚು ಪ್ರಕರಣ ದಾಖಲಾಗಿದ್ದವು. ಅದನ್ನು ಗಂಭೀರವಾಗಿ ಪರಿಗಣಿಸಿದ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಆರೋಪಿಗಳ ಪತ್ತೆಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು. ಸೈಬರ್ ಕ್ರೖೆಂ ಇನ್ಸ್ಪೆಕ್ಟರ್ ಪ್ರಶಾಂತ್ಬಾಬು ಹಾಗೂ ಸಿಸಿಬಿ ಇನ್ಸ್ಪೆಕ್ಟರ್ ಹಜರೇಶ್ ನೇತೃತ್ವದ 12 ಮಂದಿಯ ತಂಡ ಕಳೆದ ಒಂದು ತಿಂಗಳಿಂದ ಕಾರ್ಯಾಚರಣೆ ನಡೆಸಿದ್ದು, ಆರೋಪಿಗಳನ್ನು ಬಂಧಿಸಿದೆ. ಕೃತ್ಯದ ಬಳಿಕ ಆರೋಪಿಗಳು ನಿರಂತರವಾಗಿ ಫೋನ್ ನಂಬರ್ ಬದಲಾಯಿಸಿ ಸುಳಿವು ಸಿಗದಂತೆ ಎಚ್ಚರಿಕೆ ವಹಿಸುತ್ತಿದ್ದರು. ಆರೋಪಿಗಳು ಫೋನ್ ನಂಬರ್ ಬಳಸಿರುವ ಮೊಬೈಲ್ನ ಐಎಂಇಐ ನಂಬರ್ ಪತ್ತೆ ಮಾಡಿ ಅದರ ಜಾಡು ಹಿಡಿದಾಗ ಆರೋಪಿಗಳು ರಾಜಸ್ಥಾನದ ಭರತ್ಪುರ ಜಿಲ್ಲೆಯ ಗ್ರಾಮಗಳಲ್ಲಿ ಇರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಮೊದಲಿಗೆ ಕರಣ್ಸಿಂಗ್ ಸಿಕ್ಕಿಬಿದ್ದಿದ್ದ. ವಿಚಾರಣೆ ವೇಳೆ ಆತ ನೀಡಿದ ಸುಳಿವಿನ ಮೇರೆಗೆ ಇತರ ನಾಲ್ವರನ್ನು ಬಂಧಿಸಲಾಗಿದೆ.
ಭಾಸ್ಕರ್ ರಾವ್ ಹೆಸರಲ್ಲಿ ವಂಚಿಸಿದ್ದ ಗ್ಯಾಂಗ್!: ರಾಜಸ್ಥಾನದ ಕಿಸಾನ್ಪುರದಲ್ಲಿ ಮೊದಲಿಗೆ ಕರಣ್ಸಿಂಗ್ನನ್ನು ಬಂಧಿಸಲಾಯಿತು. ಈ ವೇಳೆ ಆರೋಪಿಗಳ ಕುಟುಂಬಸ್ಥರಿಗೆ ಸೈಬರ್ ಕ್ರೖೆಂ ಇನ್ಸ್ಪೆಕ್ಟರ್ ಪ್ರಶಾಂತ್ ಬಾಬು ತಮ್ಮ ಫೋನ್ ನಂಬರ್ ಮತ್ತು ಠಾಣೆಯ ವಿಳಾಸ ಕೊಟ್ಟು ಬಂದಿದ್ದರು. ಕರಣ್ನನ್ನು ಬಂಧಿಸಿರುವುದು ಆತನ ಗ್ಯಾಂಗ್ಗೆ ಗೊತ್ತಾಗಿತ್ತು. ಇದೇ ವಿಚಾರಕ್ಕೆ ಬೆಂಗಳೂರು ಪೊಲೀಸರ ಮೇಲೆ ಸಿಟ್ಟು ಇಟ್ಟುಕೊಂಡಿದ್ದರು. ಕರಣ್ ಕುಟುಂಬಸ್ಥರಿಂದ ಇನ್ಸ್ಪೆಕ್ಟರ್ ಪ್ರಶಾಂತ್ ಬಾಬು ಫೋನ್ ನಂಬರ್ ಪಡೆದು, ವಾಟ್ಸ್ಆಪ್ ಡಿಪಿಗೆ ಹಾಕಿದ್ದ ಫೋಟೋ ಬಳಸಿ ಅವರ ಹೆಸರಿನಲ್ಲಿ ನೋಯ್ಡಾದ ವ್ಯಕ್ತಿಯೊಬ್ಬರಿಗೆ ವಂಚಿಸಿದ್ದಾರೆ. ಅಲ್ಲದೆ, ಗೂಗಲ್ನಲ್ಲಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಮಾಹಿತಿ ಸಂಗ್ರಹಿಸಿ ಫೋಟೋ ತೆಗೆದುಕೊಂಡಿದ್ದಾರೆ. ವಾಟ್ಸ್ ಆಪ್ ಡಿಪಿಗೆ ಅವರ ಫೋಟೋ ಬಳಸಿ, ಒಎಲ್ಎಕ್ಸ್ನಲ್ಲಿ ಟ್ರೇಡ್ವಿುಲ್ ಯಂತ್ರ ಮಾರಾಟಕ್ಕೆ ಇಟ್ಟಿದ್ದ ನಿವೃತ್ತ ಅಧಿಕಾರಿಯನ್ನು ಪರಿಚಯಿಸಿಕೊಂಡಿದ್ದರು. ಟ್ರೂ ಕಾಲರ್ನಲ್ಲಿ ‘ಭಾಸ್ಕರ್ ರಾವ್ ಐಪಿಎಸ್’ ಎಂದು ಬರೆದುಕೊಂಡಿದ್ದರು. ಭಾಸ್ಕರ್ ರಾವ್ ಎಂದು ಬಿಂಬಿಸಿ ನಿವೃತ್ತ ಅಧಿಕಾರಿ ಖಾತೆಯಿಂದ 50 ಸಾವಿರ ರೂ. ದೋಚಿದ್ದರು.
ಪೊಲೀಸರನ್ನೇ ಬೆದರಿಸಿ ಕಳುಹಿಸಿದ್ದರು!: ಆರೋಪಿಗಳು ಗುಜರಾತ್, ಮಹಾರಾಷ್ಟ್ರ, ದೆಹಲಿ ಸೇರಿ ವಿವಿಧ ರಾಜ್ಯಗಳ ಪೊಲೀಸರಿಗೂ ಬೇಕಾಗಿದ್ದಾರೆ. ಈ ಹಿಂದೆ ಆರೋಪಿಗಳನ್ನು ಬಂಧಿಸಲು ರಾಜಸ್ಥಾನದ ಭರತ್ಪುರ ಜಿಲ್ಲೆಯ ಕಾಮ ಮತ್ತು ದೌಲ್ಬಾಸ್ ಹಳ್ಳಿಗೆ ಹೋದ ಕೆಲ ರಾಜ್ಯಗಳ ಪೊಲೀಸರನ್ನು ಬೆದರಿಸಿ ವಾಪಸ್ ಕಳುಹಿಸಿದ್ದಾರೆ. ಮನೆಯಲ್ಲಿ ನಾಡಪಿಸ್ತೂಲ್ಗಳನ್ನು ಹೊಂದಿದ್ದಾರೆೆ. ಸ್ಥಳೀಯ ಪೊಲೀಸರ ನೆರವು ಪಡೆದು ಹಗಲು-ರಾತ್ರಿ ಕಾರ್ಯಾಚರಣೆ ನಡೆಸಿ ಆರೋಪಿಗಳ ಚಲನವಲನಗಳ ಮೇಲೆ ನಿಗಾ ವಹಿಸಲಾಗಿತ್ತು. ಬಂಧಿತರ ವಿರುದ್ಧ ರಾಜಸ್ಥಾನದ ಪೊಲೀಸ್ ಠಾಣೆಗಳಲ್ಲಿ ಸೈಬರ್ ವಂಚನೆಯ ದೂರುಗಳಿಲ್ಲ. ಹೊರ ರಾಜ್ಯದವರಿಗೆ ವಂಚಿಸಿದರೆ ಸಿಕ್ಕಿ ಬೀಳುವುದಿಲ್ಲ ಎಂಬುದು ಆರೋಪಿಗಳಿಗೆ ಗೊತ್ತಿತ್ತು. ಹಾಗಾಗಿ ಹೊರ ರಾಜ್ಯದವರನ್ನೇ ಟಾರ್ಗೆಟ್ ಮಾಡಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಅಮಾಯಕರ ಆಧಾರ್ ಪಡೆದು ಖಾತೆ: ಕರಣ್ಸಿಂಗ್ ಬೇರೆಬೇರೆ ರಾಜ್ಯಗಳಲ್ಲಿ ತಿರುಗಿ ಅಮಾಯಕರಿಗೆ ಒಂದಷ್ಟು ಹಣ ಕೊಟ್ಟು ಆಧಾರ್ ಕಾರ್ಡ್, ಗುರುತಿನ ಚೀಟಿ ಪಡೆದು ಬ್ಯಾಂಕ್ಗೆ ಕರೆದೊಯ್ದು ಖಾತೆ ತೆರೆಸುತ್ತಿದ್ದ. ಬಳಿಕ ಎಟಿಎಂ ಕಾರ್ಡ್ ಮತ್ತು ಆನ್ಲೈನ್ ಬ್ಯಾಂಕಿಂಗ್ ವಿವರವನ್ನು ತಾನೇ ಪಡೆಯುತ್ತಿದ್ದ. ಕ್ಯೂಆರ್ ಕೋಡ್ನಿಂದ ಕನ್ನ ಹಾಕುವ ಹಣ ವನ್ನು ಅಮಾಯಕರ ಬ್ಯಾಂಕ್ ಖಾತೆಗೆ ವರ್ಗಾಯಿಸುತ್ತಿದ್ದ. ಬ್ಯಾಂಕ್ ಖಾತೆಯ ಸುಳಿವು ಆಧರಿಸಿ ತನಿಖೆಗೆ ಇಳಿದಾಗ ಮೂಲ ಆರೋಪಿಗಳು ಸಿಗುತ್ತಿರಲಿಲ್ಲ.