

ರಮೇಶ್ ಹಂಡ್ರಂಗಿ ಹಾಸನ
‘ಸಾಮಾಜಿಕ ಜಾಲತಾನದ ಜಾಹೀರಾತು, ಲಾಟರಿ, ಮನೆಯಲ್ಲಿ ಕುಳಿತು ಹಣ ಗಳಿಸುವ ಅವಕಾಶ, ಹಣ ಡಬಲ್ ಮಾಡಿಕೊಡುವುದು, ಇನ್‌ಸ್ಟೆಂಟ್ ಲೋನ್, ಲಾಭದಾಯಕ ಹೂಡಿಕೆ ಇವು ಸೈಬರ್ ವಂಚಕರು ಎಣೆದಿರುವ ಮೋಸದ ಬಲೆಯಾಗಿರಬಹುದು. ಇಂತಹ ವಂಚನೆಗಳಿಗೆ ಬಲಿಯಾಗಬೇಡಿ. ಯಾವುದೇ ವಂಚನೆ ಕರೆಗಳ ಬಗ್ಗೆ ಅನುಮಾನವಿದ್ದಲ್ಲಿ ಸಹಾಯವಾಣಿ ಸಂಖ್ಯೆ 1903 ಕ್ಕೆ ಕರೆ ಮಾಡಿ. ಇದು ಗೃಹ ಸಚಿವಾಲಯದ ಪ್ರಕಟಣೆ.’
ಈ ಎಚ್ಚರಿಕೆಯ ಸಂದೇಶವನ್ನು ನಾವು ಮೊಬೈಲ್‌ನಲ್ಲಿ ಕರೆ ಮಾಡುವ ಮುನ್ನ ಪ್ರತಿನಿತ್ಯ ಕೇಳುತ್ತಲೇ ಇರುತ್ತೇವೆ. ಆದರೆ, ಈ ಎಚ್ಚರಿಕೆಯ ಸಂದೇಶ ಬಂದಾಗಲೆಲ್ಲ ಎಲ್ಲರಿಗೂ ಕಿರಿಕಿರಿ ಎನಿಸುವುದು ಬಿಟ್ಟು ಇದನ್ನು ಗಂಭೀರವಾಗಿ ಪರಿಗಣಿಸುವವರ ಸಂಖ್ಯೆ ಬಹಳ ವಿರಳ. ಇದರಿಂದಾಗಿಯೇ ಸೈಬರ್ ವಂಚಕರು ಬಹಳ ಸುಲಭವಾಗಿ ಜನರನ್ನು ವಿವಿಧ ರೀತಿಯಲ್ಲಿ ಪ್ರತಿನಿತ್ಯ ಮೋಸದ ಬಲೆಗೆ ಬೀಳಿಸಿಕೊಳ್ಳುತ್ತಲೇ ಇದ್ದಾರೆ.
ಇತ್ತೀಚೆಗೆ ಹಾಸನದ ಮಹಿಳೆಯೊಬ್ಬರಿಗೆ ಅಪರಿಚಿತ ಸಂಖ್ಯೆಯಿಂದ ಮೆಸೇಜ್ ಬಂದಿದೆ. ಅದರಲ್ಲಿ ಇದು ಕೇರಳ ಲಾಟರಿ, ಇಲ್ಲಿ ನೀಡಿರುವ ಸಂಖ್ಯೆಗಳಲ್ಲಿ ಒಂದು ಸಂಖ್ಯೆಯನ್ನು ಆಯ್ಕೆ ಮಾಡಿರಿ. ಅದಕ್ಕೂ ಮುನ್ನ 49 ರೂಪಾಯಿ ಕಟ್ಟಿ ಎಂದು ತಿಳಿಸಿದೆ. ಅದರಂತೆ 49 ರೂ. ಕಟ್ಟಿದ ಅವರು ಒಂದು ಸಂಖ್ಯೆಯನ್ನು ಆಯ್ಕೆ ಮಾಡಿದ್ದಾರೆ. ಕೆಲವು ಗಂಟೆಗಳ ಬಳಿಕ ನೀವು ಆಯ್ಕೆ ಮಾಡಿರುವ ಸಂಖ್ಯೆಗೆ ಆರು ಲಕ್ಷ ರೂ. ಬಂದಿದೆ. ಅದನ್ನು ಪಡೆಯಲು ನೀವು ಮೊದಲು 6 ಸಾವಿರ ರೂ. ಕಟ್ಟಿ ಎಂದು ಅಪರಿಚಿತ ವ್ಯಕ್ತಿ ಕರೆ ಮಾಡಿ ತಿಳಿಸಿದ್ದಾನೆ. ತನ್ನ ಮೇಲೆ ನಂಬಿಕೆ ಬರಲು ತನ್ನ ಆಧಾರ್ ಕಾರ್ಡ್, ಪಾನ್ ಕಾರ್ಡ್, ಇತರೆ ಎಲ್ಲ ವಿಳಾಸವನ್ನು ವಾಟ್ಸಾಪ್ ಮಾಡಿದ್ದಾನೆ. ಇದನ್ನು ನಂಬಿದ ಅವರು 6 ಸಾವಿರ ರೂ. ಕಟ್ಟಿದ್ದಾರೆ. ಅದಾದ ಬಳಿಕವೂ ಟ್ಯಾಕ್ಸ್ ಹಣ ಮೊದಲೇ ಕಟ್ಟಬೇಕು ಎಂದು ಮತ್ತೆ 60 ಸಾವಿರ ರೂ. ಹಣ ಕಟ್ಟಿ ಎಂದು ತಿಳಿಸಿದ್ದಾನೆ. ಆಗ ಅನುಮಾನಗೊಂಡ ಅವರು ಪರಿಚಿತ ಪೊಲೀಸರಿಗೆ ಕರೆ ಮಾಡಿ ಕೇಳಿದಾಗ, ‘ಇದು ಸೈಬರ್ ವಂಚಕರ ಜಾಲ. ನೀವು ಹಣ ಕಟ್ಟಬೇಡ. ಈ ಬಗ್ಗೆ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ,’ ಎಂದು ತಿಳಿಸಿದ್ದಾರೆ. ಆದರೆ ಅವರು ದೂರು ನೀಡಲಿಲ್ಲ. ಬದಲಿಗೆ 60 ಸಾವಿರ ಹಣ ಉಳಿಯಿತಲ್ಲಾ ಎಂದು ನಿಟ್ಟುಸಿರು ಬಿಟ್ಟು ಸುಮ್ಮನಾದರು.
ಇದು ಸೈಬರ್ ವಂಚಕರು ಜನರನ್ನು ಯಾಮಾರಿಸಿ ಹಣ ಪೀಕುವ ತಂತ್ರಗಳ ಒಂದು. ಇದೇ ರೀತಿ ಹಲವು ವಿಧಾನಗಳ ಮೂಲಕ ಸೈಬರ್ ವಂಚಕರು ಎಲ್ಲೋ ಕತ್ತಲೆ ಲೋಕದಲ್ಲಿಯೇ ಕುಳಿತು ಜನರ ಜೇಬಿಗೆ ಕತ್ತರಿ ಹಾಕುತ್ತಿದ್ದಾರೆ. ಇದಕ್ಕೆ ಕೇವಲ ಅವಿದ್ಯಾವಂತರು ಮಾತ್ರವಲ್ಲದೇ ವಿದ್ಯಾವಂತರು, ದೊಡ್ಡ ದೊಡ್ಡ ಸ್ಥಾನದಲ್ಲಿ ಇರುವವರು ಕೂಡ ಬಲಿಯಾಗುತ್ತಿರುವುದು ವಿಷಾದದ ಸಂಗತಿ.
ಮೊನ್ನೆಯಷ್ಟೇ ಮೈಸೂರಿನಲ್ಲಿ ವೈದ್ಯರೊಬ್ಬರು ಯುಟ್ಯೂಬ್ ವೀಕ್ಷಣೆ ಮಾಡುವಾಗ ಬಂದ ಲಿಂಕ್ ಕ್ಲಿಕ್ ಮಾಡಿದಾಗ ಅದರಲ್ಲಿ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾಗವಹಿಸುವ ಇಚ್ಛೆ ನಿಮಗೆ ಇದೆಯೇ ಎಂದು ಕೇಳಿದೆ. ಇವರು ಹೌದು ಎಂದು ಹೇಳಿ, ಅಲ್ಲಿ ಹೇಳಿದಂತೆ ಕೆವೈಸಿ ಅಪ್ಡೆಟ್ ಮಾಡಿದ್ದಾರೆ. ಬಳಿಕ ಲಿಂಕ್‌ನಲ್ಲಿ ಸೂಚಿಸಿದಂತೆ ಹಣ ಕಟ್ಟುತ್ತಲೇ ಹೋಗಿದ್ದಾರೆ. ಬರೋಬ್ಬರಿ 29.70 ಲಕ್ಷ ಹಣ ಕಟ್ಟಿದ ಬಳಿಕ ತಾವು ಮೋಸ ಹೋಗಿರುವುದು ತಿಳಿದುಬಂದಿದೆ. ನಂತರ ಅವರು ಸಿಇಎನ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇದೇ ರೀತಿ ವಾಟ್ಸಾಪ್‌ನಲ್ಲಿ ಅಪರಿಚಿತ ಸಂಖ್ಯೆಯಿಂದ ‘ಎಪಿಕೆ’ಯಿಂದ ಕೊನೆಗೊಳ್ಳುವ ಸಂದೇಶವೊಂದು ಬರುತ್ತದೆ. ಬ್ಯಾಂಕಿನ ಹೆಸರಿನಿಂದಲೋ ಅಥವಾ ಸರ್ಕಾರಗಳ ಯಾವುದಾದರೂ ಯೋಜನೆಯ ಹೆಸರಿನಲ್ಲಿ ಈ ಫೈಲ್ ಬರಬಹುದು. ಇದರಲ್ಲಿ ನಿಮ್ಮ ಕೆವೈಸಿ ದಾಖಲಾತಿಗಳನ್ನು ಅಪ್ಡೇಟ್ ಮಾಡಿ, ಇಲ್ಲವಾದಲ್ಲಿ ನಿಮ್ಮ ಖಾತೆ ಸ್ಥಗಿತಗೊಳ್ಳುತ್ತದೆ ಎಂದು ತಿಳಿಸಿರುತ್ತಾರೆ. ಒಂದು ವೇಳೆ ಈ ಎಪಿಕೆ ಫೈಲ್ ಕ್ಲಿಕ್ ಮಾಡಿದರೆ ಈ ಎಪಿಕೆ ಆ್ಯಪ್ ನಿಮ್ಮ ಮೊಬೈಲ್‌ನಲ್ಲಿ ಇನ್‌ಸ್ಟಾಲ್ ಆದರೆ, ನಿಮ್ಮ ಮೊಬೈಲ್‌ನಲ್ಲಿ ಇರುವ ಎಲ್ಲ ಡೇಟಾ ಆಕ್ಸಸ್‌ಗಳು ಸೈಬರ್ ವಂಚಕರ ಕೈಗೆ ಸಿಗುತ್ತದೆ. ಹೀಗಾಗಿ ಮೊಬೈಲ್‌ನಲ್ಲಿ ಬರುವ ಅಪರಿಚಿತ ಹಾಗೂ ಅನುಮಾನಾಸ್ಪದ ಯಾವುದೇ ಲಿಂಕ್‌ಗಳನ್ನು ಕ್ಲಿಕ್ ಮಾಡಬಾರದು ಎಂದು ಹೇಳುತ್ತಾರೆ ಹಿರಿಯ ಪೊಲೀಸ್ ಅಧಿಕಾರಿಗಳು.