

ಆರ್.ಕೃಷ್ಣ ಮೈಸೂರು
ಇಂಗ್ಲಿಷ್, ಹಿಂದಿಯಲ್ಲಿ ವಂಚನೆ ಮಾಡುತ್ತಿದ್ದ ಸೈಬರ್ ವಂಚಕರು ಈಗ ಕನ್ನಡ ಸೇರಿದಂತೆ ಆಯಾ ಪ್ರಾದೇಶಿಕ ಮತ್ತು ಮಾತೃಭಾಷೆಯಲ್ಲಿಯೂ ವಂಚನೆ ಮಾಡುವ ಜಾಲ ಕಾರ್ಯಾಚರಣೆ ಮಾಡುತ್ತಿದೆ.
ಹೆಚ್ಚಿನ ವೇತನದ ಆಮಿಷವೊಡ್ಡಿ ವಿದೇಶಗಳಿಗೆ ಕರೆದುಕೊಂಡು ಹೋಗುವ ಜಾಲ, ಅಲ್ಲಿಂದಲೇ ಅಕ್ರಮ ಕಾಲ್ ಸೆಂಟರ್ ಮೂಲಕ, ಕನ್ನಡಿಗರನ್ನು ಕನ್ನಡಿಗರಿಂದಲೇ ವಂಚನೆ ಮಾಡುತ್ತಿದ್ದಾರೆ. ಕೆಲಸದ ಬಗ್ಗೆ ಸರಿಯಾಗಿ ಮಾಹಿತಿ ಪಡೆಯದೆ ‘ವಿದೇಶಿ ಉದ್ಯೋಗ’ ಎಂಬ ಕನಸು ಕಟ್ಟಿಕೊಂಡು ಹೋಗುತ್ತಿರುವ ನಿರುದ್ಯೋಗಿ ಯುವಕರು, ಸೈಬರ್ ವಂಚನೆಯ ಉದ್ಯೋಗಕ್ಕೆ ಸೇರಿ ಅಪಾಯಕ್ಕೆ ಸಿಲುಕುತ್ತಿದ್ದಾರೆ. ಮಾತಿನ ಚಾತುರ್ಯ ಹೊಂದಿದ ಯುವಕರನ್ನೇ ಗುರಿಯಾಗಿಸಿಕೊಂಡು ಅವರಿಗೆ ವಿದೇಶದಲ್ಲಿ ಉದ್ಯೋಗದ ಆಮಿಷ ನೀಡಲಾಗುತ್ತಿದೆ. ಹೆಚ್ಚಿನ ಸಂಬಳ ನೀಡಲಾಗುತ್ತದೆ ಎನ್ನುವ ಆಸೆಯಿಂದ ವಿದೇಶಕ್ಕೆ ಹೋದವರು ತಮಗೆ ಅರಿವಿಲ್ಲದಂತೆ ಅಕ್ರಮ ಜಾಲಕ್ಕೆ ಬೀಳುತ್ತಿದ್ದಾರೆ.
ಇಂತಹ ಅನಾಹುತಕ್ಕೆ ಸಿಲುಕಿ, ಅದೃಷ್ಟವಶಾತ್ ಪಾರಾಗಿ ಬಂದ ಯುವಕನಿಂದ ಪ್ರಕರಣ ಬೆಳಕಿಗೆ ಬಂದಿದೆ. ಈ ಯುವಕ ಕಾಲ್ಸೆಂಟರ್‌ನಲ್ಲಿ ತಿಂಗಳಿಗೆ 60 ಸಾವಿರ ರೂ. ಸಂಬಳ ಪಡೆಯುವ ಆಸೆಗೆ ಆನ್‌ಲೈನ್ ಜೀತದ ಜಾಲದಲ್ಲಿ ದುಡಿಯುತ್ತಿದ್ದರು.
ರಾಯಭಾರ ಕಚೇರಿಯಿಂದ ರಕ್ಷಣೆ:
ವಿದೇಶಿ ಉದ್ಯೋಗ ಎಂದು ನಂಬಿ ಆಗ್ನೇಯ ಏಷ್ಯಾದ ಲಾವೋಸ್ ದೇಶದಲ್ಲಿ ಅನ್‌ಲೈನ್ ವಂಚನೆ ಜಾಲಕ್ಕೆ ಸಿಲುಕಿದ್ದವರನ್ನು ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳು ಪತ್ತೆ ಮಾಡಿ ಆನ್‌ಲೈನ್ ವಂಚಕರ ಕಪಿಮುಷ್ಟಿಯಿಂದ ಬಿಡಿಸಿ ಸುರಕ್ಷಿತವಾಗಿ ರಾಜ್ಯಕ್ಕೆ ಕರೆತಂದಿದೆ. ಇವರೆಲ್ಲರೂ ಮಧ್ಯವರ್ತಿಗಳ ಮೂಲಕ ಲಾವೋಸ್‌ಗೆ ತೆರಳಿದ್ದರು.
ವಂಚಕರ ಜಾಲದ ಮುಖ್ಯಸ್ಥ ನೀಡುವ ಮೊಬೈಲ್ ಫೋನ್ ನಂಬರ್‌ಗಳಿಗೆ ಕರೆ ಮಾಡುವುದಲ್ಲದೇ ಚಾಟ್ ಮಾಡಿ ವಂಚನೆಯ ಜಾಲಕ್ಕೆ ಬೀಳಿಸಬೇಕು ಎಂದು ಟಾಸ್ಕ್ ನೀಡುತ್ತಿದ್ದ. ಇದಕ್ಕೆ ಒಪ್ಪದಕ್ಕೆ ಬಲವಂತವಾಗಿ ಕೂಡಿಹಾಕಿ ಆಹಾರ ನೀಡದೇ ಚಿತ್ರ ಹಿಂಸೆ ನೀಡಿದ್ದರು ಎನ್ನ್ನಲಾಗಿದೆ. ಅಲ್ಲದೇ ಒಬ್ಬರಿಗೊಬ್ಬರು ಮಾತನಾಡಲು ಅವಕಾಶವನ್ನು ಕೊಡುತ್ತಿರಲಿಲ್ಲ ಎನ್ನಲಾಗಿದೆ.
ಹೇಗೆ ನಡೆಯುತ್ತದೆ ವಂಚನೆ ಜಾಲ?
ಕರ್ನಾಟಕದ ಜನರ ವಂಚನೆಗೆ ಕನ್ನಡ ಬಲ್ಲ ಯುವಕರನ್ನೇ ಬಳಸಿಕೊಳ್ಳಲಾಗುತ್ತಿತ್ತು. 40 ವರ್ಷ ಮೇಲ್ಪಟ್ಟ ಪುರುಷರೊಂದಿಗೆ ಹುಡುಗಿಯರ ರೀತಿ ಚಾಟ್ ಮಾಡಿ ಅವರನ್ನು ನಕಲಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವಂತೆ ಮನವೊಲಿಸಲಾಗುತ್ತಿತ್ತು.
ಜತೆಗೆ ಅವರೊಂದಿಗೆ ಕನ್ನಡದಲ್ಲಿಯೇ ಮಾತನಾಡಿ ಬೆದರಿಕೆಯ ಮೂಲಕ ಆನ್ ಲೈನ್ ವಂಚನೆ ಎಸಗು ವಂತೆಯೂ ಒತ್ತಡ ಹೇರಲಾಗುತ್ತಿತ್ತು ಎನ್ನಲಾಗಿದೆ. ಈ ಅಕ್ರಮ ಕಾಲ್ ಸೆಂಟರ್‌ನಲ್ಲಿ ದಿನಕ್ಕೆ 12 ಗಂಟೆ ಕೆಲಸ ಮಾಡ ಬೇಕಿತ್ತು. ನಿತ್ಯ 30ಕ್ಕೂ ಹೆಚ್ಚು ಮೊಬೈಲ್ ಫೋನ್ ನಂಬರ್‌ಗಳಿಗೆ ವಾಟ್ಸ್ ಆ್ಯಪ್ ಮೂಲಕ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಚಾಟ್ ಮಾಡಬೇಕಿತ್ತು. ಕನ್ನಡದಲ್ಲಿ ಮಾತನಾಡುವ ಮೂಲಕ ಕನ್ನಡಿಗರನ್ನು ನಯವಾಗಿ ವಂಚನೆಯ ಜಾಲಕ್ಕೆ ಬೀಳಿಸುವ ಕೆಲಸವೂ ಇವರದ್ದಾಗಿತ್ತು.
ಪಾರಾದದ್ದು ಹೇಗೆ?
ವಂಚನೆ ಮಾಡುವುದಿಲ್ಲ ಎಂದ ಮೈಸೂರಿನ ಯುವಕ ಸುಹೇಲ್ ಖಾನ್ ಎಂಬಾತನನ್ನು ಒಂದು ಕೊಠಡಿಯಲ್ಲಿ ಕೂಡಿ ಹಾಕಲಾಗಿತ್ತು. ಆದರೆ ಸ್ಥಳೀಯ ನಿವಾಸಿಯೊಬ್ಬರು ಭಾರತದ ರಾಯಭಾರ ಕಚೇರಿಗೆ ದೂರು ನೀಡಿದರೆ ರಕ್ಷಣೆ ಸಿಗಬಹುದು ಎಂದು ಭರವಸೆ ನೀಡಿದ್ದರು. ಆದರ ಮೇರೆಗೆ ತಕ್ಷಣ ರಾಯಭಾರ ಕಚೇರಿಗೆ ಇ ಮೇಲ್ ಮೂಲಕ ದೂರು ನೀಡಿದ್ದರು. ಈ ದೂರು ಆಧರಿಸಿ ಕಾರ್ಯಾಚರಣೆ ನಡೆಸಿದ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳು ಅಕ್ರಮ ಚಾಲವನ್ನು ಪತ್ತೆ ಮಾಡುವಲ್ಲಿ ಯಶರಾಗಿದ್ದಾರೆ.
ದಾಳಿಯ ವೇಳೆ ಲಾವೋಸ್ ಕಾಲ್ ಸೆಂಟರ್‌ನಲ್ಲಿ ವಂಚನೆ ಜಾಲದಲ್ಲಿ ಸಿಲುಕಿದ್ದ 10 ಭಾರತೀಯನ್ನು ರಕ್ಷಣೆ ಮಾಡಲಾಗಿದೆ. ಅದರಲ್ಲಿ ಐದು ಜನ ಮುಂಬಯಿ, ಒಬ್ಬರು ಬೆಂಗಳೂರು, ನಾಲ್ವರು ಮೈಸೂರಿನವರು ಸೇರಿದ್ದಾರೆ ಎಂಬುದು ಗಮನಾರ್ಹವಾಗಿದೆ.
ವಿದೇಶಕ್ಕೆ ಹೋಗುವವರು ಎಚ್ಚರ ವಹಿಸಬೇಕು
ವಿದೇಶದಲ್ಲಿ ಉದ್ಯೋಗದ ಆಮಿಷಕ್ಕೆ ಬಲಿಯಾಗಿ ಇನ್ನಿಲ್ಲದ ಕಷ್ಟ ಅನುಭವಿಸಬೇಕಾಯಿತು. ನಮಗೆ ಅದ ತೊಂದರೆ ಬೇರೆ ಯುವಕರಿಗೆ ಆಗಬಾರದು ಎನ್ನುವ ಉದ್ದೇಶದಿಂದ ರಾಯಭಾರಿ ಕಚೇರಿಗೆ ದೂರು ನೀಡಿದ್ದರಿಂದ ಹತ್ತು ಜನರನ್ನು ರಕ್ಷಿಸಿ ಭಾರತಕ್ಕೆ ಕರೆತಲಾಯಿತು. ಈ ಕುರಿತು ಈಗ ದೂರು ದಾಖಲಿಸಲಾಗಿದೆ. ಹಾಗಾಗಿ ವಿದೇಶಕ್ಕೆ ತೆರಳುವವರು ರಾಯಭಾರಿ ಕಚೇರಿ ಮೂಲಕ ಸಂಪೂರ್ಣ ಮಾಹಿತಿ ಪಡೆದೇ ಮುಂದುವರಿಯಬೇಕು.
ಸುಹೇಲ್ ಖಾನ್
ಸಂತ್ರಸ್ತ
ಉದ್ಯೋಗದ ಹೆಸರಿನಲ್ಲಿ ವಂಚನೆ ಮಾಡುವ ಜಾಲ ಹೆಚ್ಚಾಗುತ್ತಿದೆ. ಹಾಗಾಗಿ ಯುವಕರು ಎಚ್ಚರ ವಹಿಸಬೇಕು. ವಿದೇಶಕ್ಕೆ ತೆರಳುವವರು ಸರ್ಕಾರ ಇಲಾಖೆಗಳಿಂದ ಸಂಪೂರ್ಣ ಮಾಹಿತಿ ಪಡೆದು ತಮ್ಮ ವಿವರವನ್ನು ಅಧಿಕಾರಿಗಳಿಗೆ ನೀಡಿ ಎಚ್ಚರ ವಹಿಸಬೇಕು. ಇದರಿಂದ ವಂಚನೆ ತಡೆಯಲು ಅನುಕೂಲವಾಗುತ್ತದೆ.
ಸೀಮಾ ಲಾಟ್ಕರ್
ಮೈಸೂರು ಪೊಲೀಸ್ ಕಮಿಷನರ್