

ರಾಯಚೂರು ಕಳೆದ 5 ವರ್ಷದ ಹಿಂದಿನ ಸೈಬರ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಕುರಿತು ಪತ್ತೆ ಹಚ್ಚಿ ಆರೋಪಿಯ ಹಾಗೂ ಆತನ ಸಂಬಂಧಿಕರ ವಿವಿಧ ಖಾತೆಗಳಿಗೆ ವರ್ಗಾವಣೆಯಾಗಿದ್ದ ಸುಮಾರು 18.29 ಲಕ್ಷ ಹಣ ಪತ್ತೆ ಮಾಡಿ ಮೋಸ ಹೋದವರಿಗೆಮ ನೀಡಲಾಯಿತೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಪುಟ್ಟಮಾದಯ್ಯ ಹೇಳಿದರು.
ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2020 ರಲ್ಲಿ ನಗರ ನಿವಾಸಿ ಲಕ್ಷ್ಮೀಕಾಂತ ಎನ್ನುವವರು ಫೇಸ್‌ಬುಕ್ ಖಾತೆಯಲ್ಲಿ ಟ್ರೇಡ್ ಎಂಟಿಎಫ್‌ಎಸ್ ಎಂಬ ಜಾಹಿರಾತನ್ನು ನೋಡಿ, ಅದರಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ದೊರೆಯುತ್ತದೆ ಎಂದು ಜಾಹಿರಾತಿನಲ್ಲಿ ನಮೂದಾಗಿದ್ದ, ಇಮೇಲ್‌ಗೆ ಸಂಪರ್ಕಿಸಿ ಅವರು ನೀಡಿದ ವಿವಿದ ಬ್ಯಾಂಕ್ ಖಾತೆಗಳಿಗೆ 2020ರ ಆಗಸ್ಟ್ 13ರಿಂದ 2021ರ ಏಪ್ರಿಲ್ 7ರವರೆಗೆ ಒಟ್ಟು 58.57 ಲಕ್ಷ ರೂ.ಯನ್ನು ವಾರ್ಗಾವಣೆ ಮಾಡಿದ್ದಾರೆ.
ನಂತರ ತಾವು ಹೂಡಿಕೆ ಮಾಡಿದವರಿಂದ ತಮ್ಮ ಹಣಕ್ಕೆ ಯಾವುದೇ ಲಾಭಾಂಶ ಬಾರದಿರುವುದರಿಂದ 2021ರ ಅ.25ರಂದು ಸೈಬರ್ ಠಾಣೆಗೆ ದೂರು ಸಲ್ಲಿಸಿದ್ದು, ಸೈಬರ್ ಪೊಲೀಸರಿಂದ ಪ್ರಕರಣ ದಾಖಲಿಸಿಕೊಳ್ಳಲಾಗಿತು. ನಂತರ ಪ್ರಕರಣದ ತನಿಖೆಯನ್ನು ಸೈಬರ್ ಪೊಲೀಸ್ ಠಾಣೆಯ ಡಿವೈಎಸ್‌ಪಿ ವೆಂಕಟೇಶ ಉಗಿಬಂಡಿ ತನಿಖೆ ಕೈಗೊಂಡು ಆರೋಪಿಯ ಜಾಲ ಪತ್ತೆ ಹಚ್ಚಿ ತಮಿಳುನಾಡಿದ ರಾಮನಾಥಪುರಂ ಜಿಲ್ಲೆಯ ಕೀಲಕರೈನ ಬಥುರುಸ್ಮಾನ್ ಎಂಬ ವ್ಯಕ್ತಿ ಯಾರುಗೂ ತಿಳಿಯದಂತೆ ತನ್ನ ಸಂಬಂಧಿಕರ ಖಾತೆಗೆ ಹಣವನ್ನು ವರ್ಗಾಯಿಸಿಕೊಂಡಿದ್ದ ಎಂಬುವುದು ತನಿಖೆಯಿಂದ ತಿಳಿದುಬಂದಿದೆ.
ಪ್ರಸ್ತುತ ಆರಫಿ ಬಥುರುಸ್ಮಾನ್ ಮೃತಪಟ್ಟಿದ್ದು, ಆತನ ವಿರುದ್ಧ ನ್ಯಾಯಾಲಯದಲ್ಲಿ ಅಬೇಟೆಡ್ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ಆರೋಪಿತನ ಹಾಗೂ ಆತನ ಸಹೋದರ ಸಂಬಂಧಿಯ ಖಾತೆಯಿಂದ ವಿವಿಧ ಖಾತೆಗೆ ವರ್ಗಾವಣೆಯಾಗಿದ್ದ 18,29,425 ರೂ. ಹಣವನ್ನು ಜಪ್ತಿಪಡಿಸಿಕೊಂಡು ಮೋಸ ಹೋದ ಲಕ್ಷ್ಮೀಕಾಂತ ಎಂಬುವವರಿಗೆ ಮರಳಿಸಲಾಗಿದೆ ಎಂದರು.
ಪ್ರಕರಣದ ತನಿಖೆಯಲ್ಲಿ ತನಿಖಾ ಸಹಾಯಕರಾಗಿ ರಾಜಪ್ಪ, ಪಿಐ.ರಾಜ ಕುಮಾರ ವಜಂತ್ರಿ, ವಿಕ್ರಂ ಸಿಂಹರೆಡ್ಡಿ, ಪ್ರವೀಣಕುಮಾರ ಯಶಸ್ವಿಯಾಗಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಹರೀಶ್ , ಕುಮಾರಸ್ವಾಮಿ, ಸೈಬರ್ ಡಿವೈಎಸ್‌ಪಿ ವೆಂಕಟೇಶ ಇದ್ದರು.