ಕೊಡಗಿನಲ್ಲಿ ಹೆಚ್ಚಾಗುತ್ತಿದೆ ಸೈಬರ್ ಅಪರಾಧ

Cyber ​​crime is increasing in Kodagu
Published on

ಮಡಿಕೇರಿ:

ಮನೆಯಲ್ಲಿ ನಗದು ಇಟ್ಟುಕೊಂಡರೆ ಸುರಕ್ಷಿತವಲ್ಲ ಎನ್ನುವ ಕಾರಣಕ್ಕೆ ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಬ್ಯಾಂಕ್‌ಗಳಲ್ಲಿ ಇಡುವುದು ಸಾಮಾನ್ಯ. ಆದರೆ, ಬ್ಯಾಂಕ್‌ಗಳು ಭೌತಿಕವಾಗಿ ಎಷ್ಟೇ ಭದ್ರತೆ ಒದಗಿಸಿದರೂ ಅಲ್ಲಿ ಕೂಡ ದುಡ್ಡು ಉಳಿಯುವುದಿಲ್ಲ ಎನ್ನುವುದನ್ನು ಆನ್‌ಲೈನ್ ವಂಚಕರು ಪದೇ ಪದೇ ಸಾಬೀತು ಮಾಡುತ್ತಿದ್ದಾರೆ. ಯಾರೂ ಊಹಿಸದ ರೀತಿಯಲ್ಲಿ ಅತ್ಯಂತ ಬುದ್ದಿವಂತಿಕೆಯಿAದ ಹಣ ದೋಚ ಲಾಗುತ್ತಿದೆ. ಕೊಡಗಿನಲ್ಲೂ ಸೈಬರ್ ಅಪರಾಧಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.

ವೇಗವಾಗಿ ಹಣ ಮಾಡುವ ದುರಾಸೆ ಹೊಂದಿರುವವರು ಮಾತ್ರವಲ್ಲದೆ ತಮ್ಮಲ್ಲಿರುವ ಮೊಬೈಲ್ ಮೂಲಕ ಏನು ನಡೆಯುತ್ತಿದೆ ಎನ್ನುವುದರ ಅರಿವು ಹೊಂದಿರದ ಅಮಾಯಕರೂ ಹಣ ಕಳೆದುಕೊಂಡು ಕಂಗಾಲಾಗುತ್ತಿದ್ದಾರೆ. ಆನ್‌ಲೈನ್ ವಾಹನ ಮಾರಾಟದಲ್ಲಿ ವಂಚನೆ, ಲಾಟರಿ ಅಥವಾ ಬಹುಮಾನ ವಿಜೇತರಾಗಿರುವುದಾಗಿ ನಂಬಿಸಿ ವಂಚನೆ, ವಿವಿಧ ಸಂಸ್ಥೆಗಳ ಕಸ್ಟಮರ್ ಕೇರ್ ಸೆಂಟರ್ ಹೆಸರಿನಲ್ಲಿ ಹಣಕಾಸು ವಂಚನೆಗಳೂ ನಡೆಯುತ್ತಿದೆ. ಆನ್‌ಲೈನ್ ವಂಚಕರು ಜನಸಾಮಾನ್ಯರ ವೈಯಕ್ತಿಕ ಮಾಹಿತಿ ಪಡೆದು ಬ್ಯಾಂಕ್ ವಿವರ ಸಂಗ್ರಹಿಸಿ ಕೊಟ್ಯಂತರ ರೂ. ಮೋಸ ಮಾಡುತ್ತಾರೆ. ಆನ್‌ಲೈನ್ ಬೆದರಿಕೆ, ಅಪರಾಧ, ಸೈಬರ್ ಪೀಡನೆ, ಆನ್ ಲೈನ್ ಆಟಗಳು, ಇ-ಮೇಲ್ ವಂಚನೆ, ಡೇಟಾ ಹ್ಯಾಕ್, ಸಾಮಾಜಿಕ ಜಾಲತಾಣಗಳ ಖಾತೆಗಳ ಸುರಕ್ಷತೆ, ಹಣ ಕದಿಯುವುದು, ವೈಯಕ್ತಿಕ ಮಾಹಿತಿ ಕದ್ದು ಕಿರುಕುಳ ನೀಡುವುದು ಎಲ್ಲವೂ ಸೈಬರ್ ಅಪರಾಧದೊಳಗೆ ಬರುತ್ತದೆ.

ಪರಿಚಿತರು ಅಥವಾ ಅಪರಿಚಿತರಿಗೆ ಪಾಸ್ವರ್ಡ್ ಕೊಡಬಾರದು. ಫೋನ್‌ನಲ್ಲಿ ವೈಯಕ್ತಿಕ ಮಾಹಿತಿ ಹಂಚಿಕೊಳ್ಳಬಾರದು. ಇ-ಮೇಲ್ ಭದ್ರತೆ ಖಚಿತಪಡಿಸಿಕೊಳ್ಳಬೇಕು. ಆಗಾಗ್ಗೆ ಪಾಸ್‌ವರ್ಡ್ಗಳನ್ನು ಬದಲಿಸುತ್ತಿರಬೇಕು. ಶಾಪಿಂಗ್ ವೆಬ್‌ಸೈಟ್‌ಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಅಪರಿಚಿತರ ಜತೆ ಸ್ನೇಹ ಮಾಡಬಾರದು. ಉತ್ತಮವಾದ ಆಂ್ಯಟಿ ವೈರಸ್‌ಗಳನ್ನು ಬಳಸುವುದರಿಂದ ಸಾಕಷ್ಟು ಮಟ್ಟಿಗೆ ಸೈಬರ್ ವಂಚನೆಗಳಿAದ ಸುರಕ್ಷಿತವಾಗಿ ಇರಬಹುದು. ವಾರದ ಹಿಂದೆಯಷ್ಟೇ ಸೈಬರ್ ಕ್ರೆöÊಂನ ಮತ್ತೊಂದು ಮುಖ ‘ಕೊರಿಯರ್ ವಂಚನೆಗೆ’ ಜಿಲ್ಲೆಯ ಹಿರಿಯ ನಾಗರಿಕರೊಬ್ಬರು ಬರೋಬ್ಬರಿ 2.20 ಕೋಟಿ ರೂ. ಕಳೆದುಕೊಂಡಿದ್ದಾರೆ. ಹಾಗಾಗಿ ಗರಿಷ್ಠ ಎಚ್ಚರಿಕೆಯೇ ಇಲ್ಲಿ ಪರಿಹಾರೋಪಾಯ. ಇನ್ನುಳಿದಂತೆ ಸೈಬರ್ ಕ್ರೆöÊಂನಿAದ ತಪ್ಪಿಸಿಕೊಳ್ಳಲು ಜನಸಾಮಾನ್ಯರು ಏನು ಮಾಡಬಹುದು ಎನ್ನುವುದರ ಬಗ್ಗೆ ವಿಜಯವಾಣಿ ಓದುಗರು ಲೌಡ್‌ಸ್ಪೀಕರ್‌ನಲ್ಲಿ ಅಭಿಪ್ರಾಯ ಹಂಚಿಕೊAಡಿದ್ದಾರೆ.

ಜಿಲ್ಲೆಯಲ್ಲಿ ಹಲವಾರು ವಂಚನೆ ಪ್ರಕರಣಗಳು ಈಗಾಗಲೇ ನಡೆದಿದೆ. ಕೆಲವರು ಮಾನಕ್ಕೆ ಅಂಜಿ ಹೊರಗೆ ತಿಳಿಸಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಉಳಿದವರೂ ಜಾಗೃತರಾಗುವುದಿಲ್ಲ. ಇಂತಹ ವಂಚನೆ ನಡೆದ ತಕ್ಷಣ ಪೊಲೀಸರಿಗೆ ದೂರು ನೀಡಬೇಕು. ಅದಕ್ಕೂ ಮೊದಲು ಯಾವುದೇ ಅನಾಮಿಕ ಕರೆಗಳ ಆಮಿಷಗಳಿಗೆ ಮಾರು ಹೋಗಬಾರದು. ಒಟಿಪಿ ಮತ್ತಿತರ ಮಾಹಿತಿಯನ್ನು ಹಂಚಿಕೊಳ್ಳಬಾರದು.
ಹೆಚ್.ಆರ್. ಮಧು, ಗೋಣಿಕೊಪ್ಪ ನಿವಾಸಿ

ಈ ರೀತಿ ವಂಚನೆ ಕರೆ ಬಂದರೆ ಪೊಲೀಸ್ ಸಹಾಯ ಪಡೆಯಬೇಕು, ಕುಟುಂಬ ಸದಸ್ಯರುಗಳಿಗೆ ತಿಳಿಸಿ ಇದು ಒಂದು ಮೋಸ ಎನ್ನುವ ಜಾಗೃತಿ ಮೂಡಿಸಬೇಕು. ಹಣ ಹೋದರೂ ತೊಂದರೆ ಇಲ್ಲ ಎಂದು ಮೌನವಾಗಬಾರದು. ನಮಗಾದ ತೊಂದರೆ ಬೇರೆಯವರಿಗೆ ಆಗಬಾರದು ಎಂದು ಆಲೋಚನೆ ಮಾಡಿ ದೂರು ನೀಡಬೇಕು.
ಪಿ.ಕೆ. ದಮಯಂತಿ, ಗ್ರಾಮ ಪಂಚಾಯತಿ ಸದಸ್ಯೆ, ಆಲೂರು ಸಿದ್ಧಾಪುರ

ಕೊಡಗಿನಲ್ಲಿ ಸೈಬರ್ ವಂಚಕರು ತಮ್ಮ ಕರಾಮತ್ತು ತೋರಿಸುತ್ತಿದ್ದಾರೆ. ಆದ್ದರಿಂದ ತಮ್ಮ ಸೆಲ್ ಫೋನ್ ಸುರಕ್ಷಿತವಾಗಿಟ್ಟುಕೊಳ್ಳಬೇಕು. ಯಾವಾಗಲೂ ಇಂಟರ್ನೆಟ್ ಕನೆಕ್ಷನ್ ಗುಪ್ತವಾಗಿರಬೇಕು. ನಮ್ಮ ಫೋನ್ ಪಾಸ್ವರ್ಡ್ ಸುರಕ್ಷಿತವಾಗಿಟ್ಟುಕೊಳ್ಳಬೇಕು.ಇದರಿಂದ ಜನಸಾಮಾನ್ಯರು ತಮ್ಮ ಹಣವನ್ನು ಕಳೆದುಕೊಳ್ಳುವುದನ್ನು ತಪ್ಪಿಸಬಹುದು. ಸಾರ್ವಜನಿಕ ವೈಫೈ ಬಳಕೆ ಕಡಿಮೆ ಮಾಡಬೇಕು. ಯಾರೋ ಒಟಿಪಿ ಕೇಳಿದ ತಕ್ಷಣ ನೀಡಬಾರದು.
ಶ್ವೇತಾ, ಶಿಕ್ಷಕಿ, ಪವಿತ್ರ ಹೃದಯ ಆಂಗ್ಲ ಮಾಧ್ಯಮ ಶಾಲೆ, ಶನಿವಾರಸಂತೆ

ಆಧುನಿಕತೆಗೆ ಜಗತ್ತು ತೆರೆದುಕೊಳ್ಳುತ್ತಿದ್ದಂತೆ ಅಪರಾಧ ಪ್ರಕರಣಗಳು ದೃತಗತಿಯಲ್ಲಿ ಚಾಲನೆ ಪಡೆಯುತ್ತಿವೆೆ. ಹಾಗೇ ಸೈಬರ್ ಅಪರಾಧಗಳು, ವಂಚನೆಗಳು ಕೂಡ ಎಗ್ಗಿಲ್ಲದೆ ನಡೆಯುತ್ತಿವೆ. ಬಿಳಿ ಕಾಲರಿನ ವ್ಯಕ್ತಿಗಳು ದಿಢೀರನೆ ಸಿರಿವಂತರಾಗಬೇಕೆAಬ ದುರುದ್ದೇಶದಿಂದ ತಮ್ಮ ತಾಂತ್ರಿಕ ಪ್ರತಿಭೆಯನ್ನು ಅಮಾಯಕರನ್ನು ಆರ್ಥಿಕವಾಗಿ ವಂಚಿಸಲು ಬಳಸುತ್ತಿರುವುದು ಆತಂಕಕಾರಿ ಬೆಳವಣಿಗೆ. ಇಂಥ ವಿಲಕ್ಷಣ ಚಟುವಟಿಕೆಗಳಿಗೆ ಕೊಡಗು ಹೊರತಾಗಿಲ್ಲ. ಇಲ್ಲಿಯೂ ಸೈಬರ್ ವಂಚನೆಯ ವಾಸನೆ ದಿನೇ ದಿನೇ ದಟ್ಟವಾಗುತ್ತಿದೆ. ಸಾಮಾಜಿಕ ಜಾಲತಾಣಗಳ ಬಳಕೆದಾರರು ಪ್ರಜ್ಞಾಪೂರ್ವಕವಾಗಿ ಈ ದಿಸೆಯಲ್ಲಿ ಹೆಜ್ಜೆ ಇಡಬೇಕಾದುದು ಇಂದಿನ ತುರ್ತು. ಆದ್ದರಿಂದ ನಾಗರಿಕರು ಜಾಗೃತರಾಗಬೇಕು.
ಸ್ನೇಹಾ ಬಸಮ್ಮ, ಸಾಹಿತಿ, ಬೆಸ್ಸೂರು

ಆಧುನಿಕ ತಂತ್ರಜ್ಞಾನ ಬೆಳೆದಂತೆ ಕೃತಕ ಬುದ್ದಿಮತ್ತೆ ಬಳಸಿ ಪ್ರಸ್ತುತ ಸಂದರ್ಭದಲ್ಲಿ ಹಲವಾರು ಸೈಬರ್ ವಂಚನೆ ಸರ್ವೆ ಸಾಮಾನ್ಯವಾಗಿಬಿಟ್ಟಿದೆ. ಹಣದ ಆಮಿಷ ಒಡ್ಡುವ ವೆಬ್‌ಸೈಟ್ ಲಿಂಕ್ ಗಳನ್ನು ಬಳಸಬಾರದು. ಅಪರಿಚಿತ ವ್ಯಕ್ತಿಯಿಂದ ಬಹುಮಾನದ ಆಮಿಷ ಕರೆ ಬಂದಾಗ ಜಾಗರೂಕರಾಗಬೇಕು. ಸಾಮಾಜಿಕ ಜಾಲತಾಣದಲ್ಲಿ ನಮ್ಮ ಪರಿಚಿತರ ಫೋಟೋ ಬಳಸಿ ನಕಲಿ ಖಾತೆ ತೆರೆದು ಹಣ ಕೇಳುವುದೂ ನಡೆದಿದೆ. ಅಂತಹ ಸಂದರ್ಭದಲ್ಲಿ ನಿರ್ದಿಷ್ಟ ವ್ಯಕ್ತಿಯನ್ನು ಸಂಪರ್ಕಿಸಿ ವ್ಯವಹಾರ ನಡೆಸಬೇಕು.
ಕೆ. ಕೆ. ಹರ್ಷಿತಾ, ಉಪನ್ಯಾಸಕಿ, ವಿರಾಜಪೇಟೆ

ಶರವೇಗದಲ್ಲಿ ಬೆಳೆಯುತ್ತಿರುವ ವೈಜ್ಞಾನಿಕ ಯುಗದಲ್ಲಿ ಜನತೆ ಒತ್ತಡದಲ್ಲಿ ಇರುತ್ತಾರೆ. ಕಷ್ಟಪಟ್ಟು ಗಳಿಸಿದ ಹಣವನ್ನು ಬ್ಯಾಂಕುಗಳಲ್ಲಿ ಇರಿಸುವ ಪರಿಪಾಠವೂ ಇದೆ. ಆದರೆ ಇಂದಿನ ದಿನಗಳಲ್ಲಿ ಡಿಜಿಟಲೀಕರಣದ ಪ್ರಭಾವ ಹೆಚ್ಚಾದಂತೆ ಹೆಚ್ಚು ವಿದ್ಯಾವಂತರೇ ಕಳ್ಳತನ ಹಾಗೂ ವಂಚನೆ ಕೃತ್ಯಗಳಲ್ಲಿ ತೊಡಗಿಸಿಕೊಂಡಿರುವುದು ಸಮಾಜಕ್ಕೆ ಮಾರಕವಾಗಿದೆ. ಮನೆಯಲ್ಲೂ ಹಣವನ್ನು ಸಂಗ್ರಹಿಸಿ ಇಡುವುದು ತುಂಬಾ ಅಪಾಯಕಾರಿ ಸಂಗತಿಯಾಗಿದೆ. ಇಂದಿನ ದಿನಗಳಲ್ಲಿ ಯಾರನ್ನು ನಂಬುವುದೂ ಕಷ್ಟಸಾಧ್ಯವಾಗಿದೆ. ಸರ್ಕಾರಗಳು ಹೊಸ ಕಾನೂನು ರಚಿಸಿ ಕಳ್ಳರ ಕರಾಮತ್ತು ತಡೆಗೆ ಕ್ರಮ ಕೈಗೊಳ್ಳಬೇಕು.
ಸಂತೋಷ್ ಪೂವಯ್ಯ, ಬೆಳೆಗಾರರು, ಸುಂಟಿಕೊಪ್ಪ

ಮೇ 7 ರಂದು ಸಿದ್ದಾಪುರದ ಕೆನರಾ ಬ್ಯಾಂಕ್ ಶಾಖೆಯಿಂದ 50 ಸಾವಿರ ರೂ., 25 ಸಾವಿರ ರೂ. ಮತ್ತು 4,900 ರೂ. ಸೇರಿ ಆನ್‌ಲೈನ್ ಮೂಲಕ 79,900 ರೂ. ನನಗೆ ಗೊತ್ತಿಲ್ಲದೆ ಅಪರಿಚಿತ ವಂಚಕರ ಖಾತೆಗೆ ವರ್ಗಾವಣೆಯಾಗಿದೆ. ವಿಷಯ ತಿಳಿದ ತಕ್ಷಣ ಸಿದ್ದಾಪುರ ಕೆನರಾ ಬ್ಯಾಂಕಿನ ವ್ಯವಸ್ಥಾಪಕರ ಗಮನಕ್ಕೆ ತಂದು, ಅವರ ಸೂಚನೆಯಂತೆ ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದೇನೆ. ಆದರೆ ಇದುವರೆಗೂ ಏನೂ ಪ್ರಯೋಜನ ಆಗಿಲ್ಲ.
ಸಮೀರ್, ಹಣ ಕಳೆದುಕೊಂಡವರು, ಮಾಲ್ದಾರೆ

ಪರಿಚಯವಿಲ್ಲದ ವ್ಯಕ್ತಿಗಳಿಂದ ಬರುವ ಕರೆ, ಮೆಸೇಜ್ ಗಳನ್ನು ಕಡೆಗಣಿಸಬೇಕು. ಅಫರ್, ಆಮಿಷಗಳ ನೀಡಿ ಬರುವ ಕರೆ, ಮೆಸೇಜ್, ಲಿಂಕ್‌ಗಳಿAದ ದೂರ ಇರಬೇಕು, ಅನ್ಯರಿಗೆ ಓಟಿಪಿ ನೀಡಬಾರದು. ಲೋನ್ ಹೆಸರಿನಲ್ಲಿ, ಸ್ಕೀಂಗಳ ಹೆಸರಿನಲ್ಲಿ, ಸೇವೆ, ಕೆಲಸ, ಫ್ರಾಂಚೈಸಿ ನೀಡುವ ಭರವಸೆಗಳೊಂದಿಗೆ ವಂಚಿಸುವ ಸೈಬರ್ ವಂಚಕರು, ಹ್ಯಾಕರ್ಸ್ಗಳು ಮೊಬೈಲ್ ಮೂಲಕ ವಂಚಿಸುತಿದ್ದು ಮೊಬೈಲ್‌ಗಳನ್ನು ಅನ್ಯರಿಗೆ ನೀಡುವಾಗ ಜಾಗ್ರೃತರಾಗಿರಬೇಕು. ಅನ್ಯ ಕರೆಗೆ ಮಾಹಿತಿ ನೀಡುವಾಗಲೂ ಎಚ್ಚರವಹಿಸಬೇಕು.
ಕೆ.ಜಿ. ಮನು, ಸಾಮಾಜಿಕ ಚಿಂತಕ, ಕುಶಾಲನಗರ

ಪ್ರತಿದಿನ ವಿವಿಧ ನಂಬಲಸಾಧ್ಯ ಮಾರ್ಗಗಳ ಮೂಲಕ ಸೈಬರ್ ವಂಚಕರು ಸಾರ್ವಜನಿಕರನ್ನು ಆನ್‌ಲೈನ್ ಮೂಲಕ ಹಣ ಪಡೆದುಕೊಂಡು ವಂಚನೆ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಎಲ್ಲ ಅಪರಿಚಿತ ಕರೆಗಳ ಬಗ್ಗೆ ಸೂಕ್ತ ನಿಗಾ ವಹಿಸಬೇಕು. ಯಾವುದೇ ರೀತಿಯ ಆಮಿಷಗಳಿಗೆ ಒಳಗಾಗಿ ಯಾವುದೇ ಕಾರಣಕ್ಕೂ ಅಪರಿಚಿತ ವ್ಯಕ್ತಿಗಳ ಖಾತೆಗಳಿಗೆ ಹಣ ಪಾವತಿ ಮಾಡಿ ವಂಚನೆಗೆ ಒಳಗಾಗಬಾರದು. ಅಡ್ಡದಾರಿ ಮೂಲಕ ಲಾಭ ಗಳಿಸುವ ಆತುರದಲ್ಲಿ ವಂಚಕರ ಜಾಲಕ್ಕೆ ಸಿಲುಕಿ ತಂದೆ-ತಾಯಿ ಕಷ್ಟಪಟ್ಟು ದುಡಿದ ಹಣವನ್ನು ಕಳೆದುಕೊಳ್ಳದೆ ಪರಿಶ್ರಮದಿಂದ ದುಡಿದು ನೇರವಾಗಿ ಹಣಕಾಸು ವ್ಯವಹಾರಗಳನ್ನು ನಿರ್ವಹಿಸಬೇಕು
ಕೆ. ರಾಮರಾಜನ್, ಎಸ್‌ಪಿ., ಕೊಡಗು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net