

ಮಂಗಳೂರು: ಇನ್‌ಸ್ಟಾ ಗ್ರಾಂ ಖಾತೆಗೆ ಪಾರ್ಟ್‌ಟೈಮ್ ಜಾಬ್ ಬಗ್ಗೆ ಸಂದೇಶ ಕಳುಹಿಸಿ ಅನಂತರ 6.32 ಲಕ್ಷ ರೂ. ವರ್ಗಾಯಿಸಿಕೊಂಡು ವಂಚಿಸಿರುವ ಬಗ್ಗೆ ಮಂಗಳೂರಿನ ಸೆನ್ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರುದಾರರ ಇನ್‌ಸ್ಟಾಗ್ರಾಂ ಖಾತೆಗೆ ಸೆ.9ರಂದು ಅಪರಿಚಿತ ಕಂಪೆನಿಯ ಹೆಸರಿನಲ್ಲಿ ಒಂದು ಜಾಹೀರಾತು ಬಂದಿತ್ತು. ಅದರಲ್ಲಿದ್ದ ಲಿಂಕ್‌ನ್ನು ಒತ್ತಿದಾಗ ಪ್ರತಿ ದಿನ ಹಣ ತೊಡಗಿಸಿ ಟಾಸ್ಕ್ ಪೂರ್ಣಗೊಳಿಸಿ ಹಣ ಗಳಿಸುವ ಬಗ್ಗೆ ತಿಳಿಸಲಾಗಿತ್ತು. ಅದರಂತೆ ಮೊದಲು ತೆರಿಗೆ ಮೊತ್ತ ಪಾವತಿಸುವಂತೆ ಸೂಚಿಸಲಾಗಿತ್ತು. ಇದನ್ನು ನಂಬಿದ ದೂರುದಾರರು ಹಂತ ಹಂತವಾಗಿ 1,66,348 ರೂ. ವರ್ಗಾಯಿಸಿದ್ದರು. ಅನಂತರ ಸೆ.10ರಂದು 1,000 ರೂ. ವರ್ಗಾಯಿಸಿದ್ದರು. ಬಳಿಕ ಹಂತ ಹಂತವಾಗಿ ಸೆ.18ರವರೆಗೆ ಒಟ್ಟು 6,32,218 ರೂ. ವರ್ಗಾಯಿಸಿದ್ದಾರೆ.