

ಬೆಂಗಳೂರು : ಗಣ್ಯರು, ಪೊಲೀಸರು, ಸರ್ಕಾರಿ ಅಧಿಕಾರಿಗಳ ಫೋಟೋ ಕದ್ದು ಅವರ ಹೆಸರಿನಲ್ಲಿ ಜಾಲತಾಣಗಳಲ್ಲಿ ನಕಲಿ ಖಾತೆ ತೆರೆದು ವಂಚಿಸುತ್ತಿದ್ದ ನಾಲ್ವರನ್ನು ಸಿಐಡಿ ಸೈಬರ್ ವಿಭಾಗ ಪೊಲೀಸರು ಬಂಧಿಸಿದ್ದಾರೆ. ರಾಜಸ್ಥಾನ ಮೂಲದ ಅನ್ಸರ್ (35), ಬಲ್ವಿಂದರ್ ಸಿಂಗ್ (40), ಸದ್ದಾಂ (38) ಮತ್ತು ಸೈನಿ (36) ಬಂಧಿತರು.
ಮೊಬೈಲ್ ಅಂಗಡಿ ಮಾಲೀಕ ಅನ್ಸರ್, ಸಿಮ್ ಕಾರ್ಡ್ ಆಕ್ಟಿವೇಷನ್‌ಗೆ ನಕಲಿ ಆಧಾರ್ ಕಾರ್ಡ್‌ಗಳ ಮಾಹಿತಿಯನ್ನು ಅಪ್‌ಲೋಡ್ ಮಾಡುತ್ತಿದ್ದ. ಏರ್‌ಟೆಲ್ ಸಿಮ್ ವಿತರಕ ಬಲ್ವಿಂದರ್ ಸಿಂಗ್, ದಾಖಲೆ ಪರಿಶೀಲನೆ ನಡೆಸದೆ ಸಿಮ್ ಆಕ್ಟಿವೇಷನ್ ಮಾಡಿಕೊಡುತ್ತಿದ್ದ. ಇದಕ್ಕೆ ಬೇಕಾದ ನಕಲಿ ಆಧಾರ್‌ಗಳನ್ನು ಸೈನಿ ತಯಾರಿಸಿಕೊಡುತ್ತಿದ್ದ. ನಕಲಿ ಸಿಮ್ ಮತ್ತು ಆಧಾರ್ ಬಳಸಿ ಬ್ಯಾಂಕ್ ಖಾತೆ ಮತ್ತು ವ್ಯಾಲೆಟ್ ತೆರೆದು ಸದ್ದಾಂ ವಂಚನೆ ಹಣ ಸ್ವೀಕರಿಸುತ್ತಿದ್ದ. ಪ್ರಮುಖ ಆರೋಪಿ ಶಕೀಲ್ ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಬಲೆಬೀಸಲಾಗಿದೆ ಎಂದು ಸಿಐಡಿ ಅಧಿಕಾರಿಗಳು ತಿಳಿಸಿದ್ದಾರೆ.
ಫೇಸ್‌ಬುಕ್, ಟ್ವಿಟರ್ ಮತ್ತು ವಾಟ್ಸ್‌ಆ್ಯಪ್ ಡಿಪಿಗೆ ಪೊಲೀಸರು, ಸರ್ಕಾರಿ ಅಧಿಕಾರಿಗಳು ಮತ್ತು ಗಣ್ಯರು ಅಪ್‌ಲೋಡ್ ಮಾಡಿರುವ ಫೋಟೋಗಳನ್ನು ಕದ್ದು, ಅವರ ಹೆಸರಿನಲ್ಲಿ ನಕಲಿ ಖಾತೆ ತೆರೆಯುತ್ತಿದ್ದರು. ಇಲ್ಲವಾದರೆ, ವಾಟ್ಸ್‌ಆ್ಯಪ್ ಡಿಪಿಗೆ ಬಳಸುತ್ತಿದ್ದರು.
ಜಾಲತಾಣದಲ್ಲಿ ಅಧಿಕಾರಿಗಳ ಸ್ನೇಹಿತರನ್ನು ಗುರುತಿಸಿ ಅವರೊಂದಿಗೆ ಜಾಲತಾಣದಲ್ಲಿ ಚಾಟ್ ಶುರು ಮಾಡುತ್ತಿದ್ದರು. ಕೆಲವೇ ದಿನಕ್ಕೆ ಆತ್ಮೀಯವಾಗಿ ಮಾತನಾಡಿ ಕೊನೆಗೆ ಭಾವನಾತ್ಮಕ ಸುಳಿಗೆ ಸಿಲುಕಿಕೊಂಡು ಆನ್‌ಲೈನ್‌ನಲ್ಲಿ ಹಣ ಪಡೆಯುತ್ತಿದ್ದರು. ದೇಶ ವ್ಯಾಪಿ ಇಂತಹ ಸೈಬರ್ ಕ್ರೈಂ ಹೆಚ್ಚಾಗಿತ್ತು.
ಸಿಐಡಿ ಸೈಬರ್ ಕ್ರೈಂ ವಿಭಾಗದಲ್ಲಿ 3 ಪ್ರಕರಣ ಸೇರಿದಂತೆ ರಾಜ್ಯದಲ್ಲಿ 10ಕ್ಕೂ ಹೆಚ್ಚು ಎಫ್ಐಆರ್ ದಾಖಲಾಗಿದ್ದವು. ಇದನ್ನು ಗಂಭೀರವಾಗಿ ಪರಿಗಣಿಸಿದ ಸಿಐಡಿ ಸೈಬರ್ ಕ್ರೈಂ ವಿಭಾಗದ ಎಸ್‌ಪಿ ರೋಹಿಣಿ ಕಟೋಚ್ ಸೆಪಟ್, ಆರ್ಥಿಕ ಅಪರಾಧಗಳ ವಿಭಾಗದ ಎಸ್‌ಪಿ ಎಂ.ಡಿ.ಶರತ್ ನೇತೃತ್ವದ ತಂಡ ಸೈಬರ್ ಖದೀಮರು ಪತ್ತೆಗೆ ಬಲೆಬೀಸಿತ್ತು. ತಾಂತ್ರಿಕ ಮಾಹಿತಿ ಆಧರಿಸಿ ತನಿಖೆ ಶುರು ಮಾಡಿದಾಗ ರಾಜಾಸ್ಥಾನದ ಭರತಪುರದಲ್ಲಿ ಸೈಬರ್ ಕಳ್ಳರು ಅಡಗಿರುವ ಖಚಿತ ಮಾಹಿತಿ ಪಡೆದು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಾರ್ವಜನಿಕರ ಆಧಾರ್ ದುರ್ಬಳಕ್ಕೆ : ರಾಜಾಸ್ಥಾನದ ಭರತ್‌ಪುರದಲ್ಲಿ ಇ-ಮಿತ್ರ ಸೇವಾ ಕೇಂದ್ರಗಳಲ್ಲಿ ಸರ್ಕಾರದ ಸೇವೆ ಪಡೆಯಲು ಜನರು ಸಲ್ಲಿಸುತ್ತಿದ್ದ ಆಧಾರ್, ಫೋಟೋ, ವೋಟರ್ ಐಡಿಗಳನ್ನು ಆರೋಪಿಗಳು ದುರುಪಯೋಗ ಪಡಿಸಿಕೊಂಡಿದ್ದಾರೆ. ಜನರು ಆಧಾರ್ ಮತ್ತು ಫೋಟೋ ಕದ್ದು ನಕಲಿ ಕಾರ್ಡ್ ಸಿದ್ದಪಡಿಸಿದ್ದಾರೆ.ನಕಲಿ ಆಧಾರ್ ಬಳಸಿ ಮೊಬೈಲ್ ಸಿಮ್ ಆಕ್ಟಿವೇಷನ್, ಬ್ಯಾಂಕ್ ಖಾತೆ ತೆರೆದಿದ್ದಾರೆ. ಇದೇ ರೀತಿ ಸಾವಿರಾರು ಸಿಮ್ ಆಕ್ಟಿವೇಟ್ ಆಗಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಜಾಹೀರಾತಿಗೂ ನಕಲಿ ಕಾರ್ಡ್ ಬಳಕೆ : ನಕಲಿ ಆಧಾರ್, ಸಿಮ್‌ಗಳನ್ನು ಜಾಲತಾಣಗಳಲ್ಲಿ ನಕಲಿ ಜಾಹೀರಾತು ನೀಡಲು ಬಳಸುತ್ತಿದ್ದರು. ಆ ನಂಬರ್‌ಗೆ ಕರೆ ಮಾಡುವರಿಗೆ ಆಮಿಷವೊಡ್ಡಿ ಇ-ವ್ಯಾಲೆಟ್‌ಗಳು ಮತ್ತು ಪೇಮೆಂಟ್ ಬ್ಯಾಂಕ್ ಖಾತೆಗೆ ಹಣ ವರ್ಗಾಹಿಸಿಕೊಂಡು ಮೋಸ ಮಾಡುತ್ತಿದ್ದರು.