

ಚಿಕ್ಕಬಳ್ಳಾಪುರ : ಬ್ಯಾಂಕ್ ಸೇವೆ, ಲಕ್ಕಿ ಡ್ರಾ, ವಿದೇಶದಲ್ಲಿ ಕೆಲಸ ಕೊಡಿಸುವ, ಉಡುಗೊರೆಗಳಂತಹ ಆಮಿಷಗಳಿಗೆ ಬಲಿಯಾಗಿ ಲಕ್ಷಾಂತರ ರೂ. ಕಳೆದುಕೊಳ್ಳುತ್ತಿರುವ ಆನ್‌ಲೈನ್ ವಂಚನೆ ಪ್ರಕರಣಗಳು ಹೆಚ್ಚಾಗಿವೆ. ಸ್ವತಃ ಜಿಲ್ಲಾಧಿಕಾರಿ ಆರ್.ಲತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್, ಜಿಪಂ ಸಿಇಒ ಪಿ.ಶಿವಶಂಕರ್ ಸೇರಿ ಹಲವರ ಹೆಸರಿನಲ್ಲಿ ಫೇಸ್‌ಬುಕ್ ನಕಲಿ ಖಾತೆ ಸೃಷ್ಟಿಸಿ, ಹಣ ಸುಲಿಗೆಗೆ ಯತ್ನಿಸಲಾಗಿದೆ.!
ಕರೊನಾ ಸೋಂಕಿನ ಆತಂಕ, ಲಾಕ್‌ಡೌನ್ ಹಿನ್ನೆಲೆಯಲ್ಲಿ ಜನರ ನಡುವಿನ ಸಂಪರ್ಕ ಕಡಿಮೆಯಾಗಿದ್ದು, ಬಹುತೇಕರು ಆನ್‌ಲೈನ್ ವ್ಯವಹಾರ ನೆಚ್ಚಿಕೊಂಡಿದ್ದಾರೆ. ಇದನ್ನೇ ಲಾಭವಾಗಿಸಿಕೊಂಡ ವಂಚಕರು ಹಣ ಕೊಳ್ಳೆ ಹೊಡೆದಿದ್ದಾರೆ. ಅಕ್ಷರಸ್ಥರೇ ಖೆಡ್ಡಾಕ್ಕೆ ಬೀಳುತ್ತಿರುವುದು ವಿಪರ್ಯಾಸ. ಅಲೆದಾಟ, ಮರ್ಯಾದೆಗೆ ಅಂಜಿ ವಂಚನೆಯಾದರೂ ಪ್ರಕರಣ ದಾಖಲಿಸಲು ಹಿಂದು-ಮುಂದು ನೋಡುತ್ತಿರುವುದರ ನಡುವೆಯೂ ಜಿಲ್ಲೆಯಲ್ಲಿ ದಿನಕ್ಕೆ ಕನಿಷ್ಠ ಮೂರ್ನಾಲ್ಕು ಪ್ರಕರಣಗಳು ದಾಖಲಾಗುತ್ತಿವೆ. ವಂಚಕರು ತನಿಖೆಯಲ್ಲಿ ಖಾಕಿಗೂ ಚಳ್ಳೆಹಣ್ಣು ತಿನ್ನಿಸಿರುವ ಉದಾಹರಣೆಗಳಿವೆ. ಎ್ಲದಕ್ಕೂ ನಕಲಿ ಮಾಹಿತಿ ನೀಡಿ ಯಾಮಾರಿಸಿದ್ದಾರೆ. ಆದರೆ ವಂಚಕರ ಕರೆಗಳು ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಬಿಹಾರದಿಂದಲೇ ಬಂದಿವೆ ಎನ್ನುವುದು ಜಿಲ್ಲೆಯ ಸೈಬರ್ ಅಪರಾಧ ವಿಭಾಗದ ತನಿಖೆಯಲ್ಲಿ ತಿಳಿದು ಬಂದಿದೆ.
ಇವು ಜಸ್ಟ್ ಸ್ಯಾಂಪಲ್
1.ಇತ್ತೀಚೆಗೆ ಚಿಕ್ಕಬಳ್ಳಾಪುರ ತಾಲೂಕಿನ ನಂದಿಯ ಬಸವಾರಾಧ್ಯಗೆ ಲಂಡನ್‌ನಲ್ಲಿ ಕೆಲಸ ಕೊಡಿಸುವ ಆಮಿಷಮೊಡ್ಡಿ 1,35,000 ರೂಪಾಯಿ ವಂಚಿಸಲಾಗಿದೆ.
2. ಶಿಡ್ಲಟ್ಟ ತಾಲೂಕಿನ ಜ್ಞಾನರಾಜ್‌ಗೆ ಕೆನಡಾದಲ್ಲಿ ಕೆಲಸ ಕೊಡಿಸುವುದಾಗಿ ಆಮಿಷ ತೋರಿ 1.34 ಲಕ್ಷ ರೂಪಾಯಿ ವಂಚಿಸಲಾಗಿದೆ.
3. ಚಿಕ್ಕಬಳ್ಳಾಪುರದ ಎಂಬಿಬಿಎಸ್ ವಿದ್ಯಾರ್ಥಿಗೆ ಇತ್ತೀಚೆಗೆ ಫೇಸ್‌ಬುಕ್ ಮೂಲಕ ಪರಿಚಯಿಸಿಕೊಂಡ ಅಪರಿಚಿತ ಮಹಿಳೆ ಕೆಲ ದಿನ ಸಲುಗೆಯಿಂದ ಮಾತನಾಡಿದ್ದಾಳೆ. ಸಲುಗೆ ಬೆಳೆದಂತೆ ವಿದ್ಯಾರ್ಥಿಯ ಬೆತ್ತಲೆ ವಿಡಿಯೋಗಳನ್ನು ಹಾಕಿಸಿಕೊಂಡು ನಂತರ ಹಣಕ್ಕೆ ಬ್ಲಾಕ್‌ಮೇಲ್ ಮಾಡಿದ್ದಾಳೆ. ಹಣ ಕೊಡದಿದ್ದಲ್ಲಿ ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡುವ ಬೆದರಿಕೆಯೊಡ್ಡಿದ್ದು, ಸೈಬರ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
4. ಇಟಲಿ ಉಡುಗೊರೆಗಳ ಆಸೆಗೆ ಬಿದ್ದ ಚಿಂತಾಮಣಿಯ ಮಹಿಳೆಯೊಬ್ಬರು 14 ಲಕ್ಷ ರೂ. ಕಳೆದುಕೊಂಡಿದ್ದಾರೆ.
ಫೋನ್ಪೇ, ಗೂಗಲ್‌ಪೇ ಗ್ರಾಹಕರ ಸೇವಾ ಕೇಂದ್ರದ ಹೆಸರು ಹೇಳಿ ವಂಚನೆ, ಲಕ್ಕಿ ಡ್ರಾನಲ್ಲಿ ಕಾರು ಗೆದ್ದಿದ್ದೀರಿ ಎನ್ನುವುದು, ಫೇಸ್‌ಬುಕ್ ನಕಲಿ ಖಾತೆ ತೆರೆದು ಹಣ ಸಾಲ ನೀಡುವಂತೆ ಕೇಳುವುದು, ಸೈನಿಕರ ಬಟ್ಟೆ ತೊಟ್ಟು ಆನ್‌ಲೈನ್‌ನಲ್ಲಿ ವಾಹನವೊಂದರನ್ನು ತೋರಿಸಿ ಮಾರಾಟಕ್ಕಿದೆ ಎಂದು ಹಣ ಪಡೆದಿರುವುದು...ಹೀಗೆ ವಿವಿಧ ರೀತಿಯಲ್ಲಿ ವಂಚಿಸಿದ್ದಾರೆ.
ದಾಖಲಾದ ಪ್ರಕರಣಗಳ ಅಂಕಿ ಅಂಶ : ಜಿಲ್ಲೆಯಲ್ಲಿ 2019ರಲ್ಲಿ ಸೈಬರ್ ಅಪರಾಧಕ್ಕೆ ಸಂಬಂಧಿಸಿದಂತೆ 19 ಹಾಗೂ 2020ರಲ್ಲಿ 28 ಪ್ರಕರಣಗಳು ದಾಖಲಾಗಿವೆ. ಪ್ರಸಕ್ತ 2021ನೇ ಸಾಲಿನ ಏಳು ತಿಂಗಳಲ್ಲಿ ಸೈಬರ್ ಕ್ರೈಂ ಠಾಣೆಯಲ್ಲಿ 33 ಪ್ರಕರಣಗಳು ದಾಖಲಾಗಿದ್ದು, ತಿಂಗಳಿಂದ ತಿಂಗಳಿಗೆ ಸೈಬರ್ ಅಪರಾಧ ಪ್ರಕರಣಗಳು ಹೆಚ್ಚುತ್ತಲೇ ಇವೆ.
ಅರಿವಿನ ನಡುವೆ ನಿಲ್ಲದ ವಂಚನೆ : ಅಪರಾಧ ಪ್ರಕರಣಗಳ ನಿಯಂತ್ರಣ ಸೇರಿ ಆನ್‌ಲೈನ್ ವಂಚನೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ವ್ಯಾಪಕ ಜಾಗೃತಿ ಮೂಡಿಸಲಾಗುತ್ತಿದೆ. ಬೀದಿನಾಟಕ, ಕರಪತ್ರ ವಿತರಣೆ, ತಿಳಿವಳಿಕೆ ಭಿತ್ತಿಪತ್ರಗಳ ಅಳವಡಿಕೆ, ಸಹಾಯವಾಣಿ ಕಾರ್ಯನಿರ್ವಹಣೆ, ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಸೇರಿ ನಾನಾ ರೀತಿಯಲ್ಲಿ ಎಚ್ಚರಿಸಲಾಗುತ್ತಿದೆ. ಆದರೂ ಜನರು ಆಸೆ ಆಮಿಷಗಳಿಗೆ ಮಾರು ಹೋಗಿ ನಷ್ಟ ಅನುಭವಿಸುತ್ತಿದ್ದು ಸೈಬರ್ ವಂಚನೆಗಳನ್ನು ತಡೆಯಲು ಜನರಲ್ಲಿ ಸ್ವಯಂ ಅರಿವಿನ ಅಗತ್ಯವಿದೆ.
ಇದನ್ನು ಮಾಡಲೇಬಾರದು : ವಾಟ್ಸ್ಆ್ಯಪ್, ಎಸ್‌ಎಂಎಸ್‌ಗಳ ಮೂಲಕ ಬಂದ ಲಿಂಕ್‌ಗಳನ್ನು ಕ್ಲಿಕ್ ಮಾಡಬಾರದು. ಯಾರಿಗೇ ಆಗಲಿ ಎಟಿಎಂ ಕಾರ್ಡ್ ಪಾಸ್ ವರ್ಡ್, ಒಟಿಪಿ ಸಂಖ್ಯೆ ಸೇರಿ ಗೌಪ್ಯ ಮಾಹಿತಿ ನೀಡಬಾರದು. ಅಪರಿಚಿತರು ಲಕ್ಕಿ ಡ್ರಾ, ಬಹುಮಾನ, ಪ್ರಶಸ್ತಿಯ ಬಗ್ಗೆ ತಿಳಿಸಿದಾಗ ತಕ್ಷಣ ನಂಬಬಾರದು, ಅನಧಿಕೃತ ಸಂಸ್ಥೆಗಳೊಂದಿಗೆ ನಿಯಮಬಾಹಿರವಾಗಿ ವ್ಯವಹಾರ ಮಾಡಬಾರದು.
ಸೈಬರ್ ಅಪರಾಧ ಪ್ರಕರಣಗಳ ತಡೆಗೆ ವ್ಯಾಪಕವಾಗಿ ಪ್ರಚಾರ ಕಗೊಂಡು ಅರಿವು ಮೂಡಿಸಲಾಗುತ್ತಿದೆ. ಇದನ್ನು ಮತ್ತಷ್ಟು ಚುರುಗೊಳಿಸಲಾಗುವುದು. ಜಿ.ಕೆ.ಮಿಥುನ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಚಿಕ್ಕಬಳ್ಳಾಪುರ ಈಗ ತಂತ್ರಜ್ಞಾನ ಮುಂದುವರಿದಿದೆ. ಸುರಕ್ಷತೆಯ ಕ್ರಮಗಳು ಬಿಗಿಯಾಗಿವೆ. ಇಷ್ಟಾದರೂ ಹಲವು ಸೈಬರ್ ವಂಚನೆಗಳನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತ್ಲಿ. ಪೊಲೀಸರು ಪ್ರಕರಣ ದಾಖಲಿಸಿಕೊಳ್ಳಲು ಮಾತ್ರ ಸೀಮಿತವಾಗಿರುವುದು ಖದೀಮರಿಗೆ ವರವಾದಂತಿದೆ. ಕಾಮಾಕ್ಷಿ, ಕಾರ್ಯಪಾಲಕ ಅಭಿಯಂತ, ಚಿಕ್ಕಬಳ್ಳಾಪುರ