ಲಾಟರಿ ಹೆಸರಲ್ಲಿ ಮಹಿಳೆಯ 9 ಲಕ್ಷ ರೂ. ಗುಳುಂ

Cyber Crime
Published on

ಹುಬ್ಬಳ್ಳಿ: ಆನ್​ಲೈನ್​ ಆ್ಯಪ್​ವೊಂದರಲ್ಲಿ ತರಕಾರಿ ಖರೀದಿಸುತ್ತಿದ್ದ ನಗರದ ಮಹಿಳೆಯೊಬ್ಬರಿಗೆ ಅಪರಿಚಿತರು ಕರೆ ಮಾಡಿ, "ಆನ್​ಲೈನ್​ ಆ್ಯಪ್​ನಲ್ಲಿ ನಿಮಗೆ 12,97,000 ರೂ. ಲಾಟರಿ ಹತ್ತಿದೆ' ಎಂದು ನಂಬಿಸಿ, ತೆರಿಗೆ ಮತ್ತಿತರ ನೆಪದಲ್ಲಿ 8,98,091 ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾರೆ.
ಹನಮಂತ ನಗರದ ಲಕ್ಷಿಬಾಯಿ ಎಂಬುವರು ಮೀಸೋ ಆನ್​ಲೈನ್​ ಆ್ಯಪ್​ ಮೂಲಕ ತರಕಾರಿ ಖರೀದಿಸುತ್ತಿದ್ದರು. ಈ ಬಗ್ಗೆ ಮಾಹಿತಿ ಕದ್ದ ವಂಚಕರು, ಇವರಿಗೆ ಕರೆ ಮಾಡಿದ್ದರು. ಮೀಸೋ ಆ್ಯಪ್​ನಲ್ಲಿ ನಿಮಗೆ 12,97,000 ರೂ. ಲಾಟರಿ ಹತ್ತಿದೆ ಎಂದು ನಂಬಿಸಿದ್ದರು. ಈ ಹಣ ನಿಮ್ಮ ಖಾತೆಗೆ ವರ್ಗಾವಣೆ ಆಗಬೇಕಾದರೆ ತೆರಿಗೆ, ಮತ್ತಿತರ ಶುಲ್ಕ ತುಂಬಬೇಕು ಎಂದು ಕ್ಯೂ ಆರ್​ ಕೋಡ್​, ಬ್ಯಾಂಕ್​ ಖಾತೆಗಳ ಮಾಹಿತಿ ಕಳುಹಿಸಿದ್ದರು. ನಂತರ ಹಂತ ಹಂತವಾಗಿ 8,98,091 ರೂ. ವರ್ಗಾಯಿಸಿಕೊಂಡು ಮೋಸ ಮಾಡಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಸೈಬರ್​ ಕ್ರೈಮ್ ಠಾಣೆ ಪೊಲೀಸರು, ತನಿಖೆ ಮುಂದುವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net